ಗಾಂಜಾ ನಶೆಯಲ್ಲಿದ್ದ ದುಷ್ಕರ್ಮಿಗಳು ಅಕ್ಕ-ತಮ್ಮನನ್ನೇ ಪ್ರೇಮಿಗಳೆಂದು ಭಾವಿಸಿ, ಕೂಡಿ ಹಾಕಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮುಸ್ಲಿಂ ಯುವಕರಿಂದ ಈ ಘಟನೆ ನಡೆದಿದ್ದು, ಬೆಳಗಾವಿ (Belagavi) ಹೊರವಲಯದ ಯಮನಾಪುರದ ಸಹೋದರ ಹಾಗೂ ಸಹೋದರಿಯ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಕೆರೆಯ ಬಳಿ ಅಕ್ಕ ಹಾಗೂ ತಮ್ಮ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಬಂದ ದುಷ್ಕರ್ಮಿಗಳು ಇಬ್ಬರನ್ನು ಎಳೆದೊಯ್ದು ಶೆಡ್‍ನೊಳಗೆ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಗಾಂಜಾ ನಶೆಯಲ್ಲಿದ್ದ ಏಳು ಜನ ಮುಸ್ಲಿಂ ಯುವಕರು ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ (Yuva Nidhi Scheme) ಅರ್ಜಿ ಸಲ್ಲಿಸಲು ಸಹೋದರನ ಜೊತೆಗೆ ಯುವತಿ ಬೆಳಗಾವಿಗೆ ಬಂದಿದ್ದರು. ಸರ್ವರ್ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮಧ್ಯಾಹ್ನ 3ಕ್ಕೆ ಬರಲು ಹೇಳಿದ್ದಾರೆ. ಹೀಗಾಗಿ ಅವರು ಸಮಯ ಕಳೆಯಲು ಅಲ್ಲಿ ಕುಳಿತಿದ್ದಾರೆ. ಇದನ್ನು ಕಂಡ ಮುಸ್ಲಿಂ ಯುವಕರು, ಅದನ್ನು ಪ್ರಶ್ನಿಸಿ, ನಾವಿಬ್ಬರು ಸಹೋದರ-ಸಹೋದರಿ ಎಂದರೂ ಅವರನ್ನು ಎಳೆದೊಯ್ದು ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅವರ ಚಿಕ್ಕಪ್ಪನಿಗೆ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ, ಯುವಕರು ಅದನ್ನು ಸ್ವಿಚ್ ಆಫ್ ಮಾಡಿದ್ದಾರೆ.
ಕೂಡಲೇ ಚಿಕ್ಕಪ್ಪ, ಎಪಿಎಂಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೆರೆ ಸುತ್ತಲೂ ಅವರ ಚಿಕ್ಕಪ್ಪ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕಿರಿಚಾಟದ ಶಬ್ಧ ಕೇಳಿ ಶೆಡ್ ಒಳಗೆ ನುಗ್ಗಿ ಇಬ್ಬರನ್ನು ರಕ್ಷಿಸಿದ್ದಾರೆ. ಸದ್ಯ ಇಬ್ಬರೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತೀಕ್, ಅಸದ್ ಖಾನ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಬಲೆ ಬೀಸಲಾಗಿದೆ.







