ರಫೇಲ್ ಭಾರತಕ್ಕೆ ಬಂದಿಳಿದಾಗ ನೆನಪಾದ ಮಹಾ ಜನನಾಯಕ ಮನೋಹರ್ ಪರಿಕ್ಕರ್; “ದ ಡೇ ಬ್ರೇ:ಕರ್ಸ್” ಪುಸ್ತಕದಲ್ಲಿ ವರ್ಣನೆಯಾದ ಪರಿಕ್ಕರ್ ಜೀವನಗಾಥೆ
“ನೀವೊಂದು ನೀರಿನ ಸೆಲೆಯ ಮಧ್ಯದಲ್ಲಿ ಕೈ ಬೆರಳನ್ನಿಡಿ. ಆ ಕೈ ಬೆರಳು ತಗೆದಾಕ್ಷಣದಲ್ಲಿ ನಿರ್ವಾತವಿದ್ದ ಸ್ಥಳದಲ್ಲಿ ಮತ್ತೆ ನೀರಿನ ಸೆಲೆ ತುಂಬಿಕೊಳ್ಳುತ್ತದೆ. ಈ ಪ್ರಪಂಚದಲ್ಲಿಯೂ ನಿಮ್ಮ ಅನಿವಾರ್ಯತೆ ಇದೇ ಮಟ್ಟದ್ದು. ನೀವು ಈ ಪ್ರಪಂಚದಿಂದ ನಿರ್ಗಮಿಸಿದ ತಕ್ಷಣ ಅಲ್ಲಿ ನಿಮ್ಮ ಜಾಗಕ್ಕೆ ಮತ್ತೊಬ್ಬ ನಿಮಗಿಂತ ಸಮರ್ಥನು ಅಥವಾ ಅಸಮರ್ಥನೂ ಬರಬಹುದು”
ಇವು ಲೂಯಿಸ್ ಲ್ಯಾಮೂರ್ ಅವರು ಬರೆದಿರುವ ದ ಡೇ ಬ್ರೇಕರ್ಸ್ ಕಾದಂಬರಿಯ ಸಾಲುಗಳು. ಈ ಸಾಲುಗಳು ದೇಶ ಕಂಡ ಅತ್ಯಂತ ಸಮರ್ಥ ಮತ್ತು ಪ್ರಾಮಾಣಿಕ ಜನನಾಯಕ ದಿವಂಗತ ಮನೋಹರ್ ಪರಿಕ್ಕರ್ ಅವರ ಸಿದ್ಧಾಂತವನ್ನು ವಿವರಿಸುತ್ತವೆ. ಈ ಸಾಲುಗಳು ಹಲವರ ಜೀವನದ ಮಾರ್ಗದರ್ಶಿಯಂತಿವೆ. ಪರಿಕ್ಕರ್ ಅವರ ಪಕ್ಷದ ರಾಜಕೀಯ ನೇತಾರರಿಗೂ ಮಾಜಿ ರಕ್ಞಣಾಸಚಿವ ದಿವಂಗತ ಪರಿಕ್ಕರ್ ಅವರ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಮೂಲ ಪ್ರಜ್ಞೆಯನ್ನು ನೆನಪಿಸುತ್ತಾ ಅವರವರ ಸ್ಥಾನಮಾನದ ಅಶಾಶ್ವತತೆಗೆ ಹಿಡಿದ ಕೈಗನ್ನಡಿಯಂತಿದೆ.
ಕೆಲವು ವ್ಯಕ್ತಿಗಳ ಬದುಕೇ ಹಾಗೇ ಅದೊಂದು ರೀತಿಯ ‘ಮರೆತೇನೆಂದರಾ ಮರೆಯಲಿ ಹ್ಯಾಂಗಾ’ ಎಂಬ ರೀತಿಯದ್ದು.. ಅವರುಗಳು ನಮಗೆ ಮರೆತಂತೆ ಅನಿಸಿದರೂ, ನಮ್ಮ ಸುಪ್ತ ಪ್ರಜ್ಞೆ ಅವರ ಜೀವಂತಿಕೆಯನ್ನು ಸದಾ ನೆನೆಯುತ್ತಿರುತ್ತದೆ. ಭಾರತದ ಅಂಬಾಲಾ ಪ್ರಾಂತ್ಯದಲ್ಲಿ ರಫೇಲ್ ಜೆಟ್ ಗಳು ಬಂದಿಳಿಯುತ್ತಿರುವ ಈ ಸಂದರ್ಭದಲ್ಲಿ, ಇದಕ್ಕೆ ಕಾರಣೀಭೂತರಾದ ಪರಿಕ್ಕರ್ ಮತ್ತೆ ಮತ್ತೆ ಸ್ಮೃತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗೆಯೇ ಅವರನ್ನು ಕೃತಜ್ಞತಾಪೂರ್ವಕವಾಗಿ ನೆನೆಸಿಕೊಳ್ಳುವುದು ನಮ್ಮ ಕರ್ತವ್ಯವೂ ಆಗಿದೆ. ಏಕೆಂದರೆ ಇಂದು ರಫೇಲ್ ಜೆಟ್ ಗಳು ಫ್ರಾನ್ಸ್ ನಿಂದ ನಮ್ಮ ದೇಶಕ್ಕೆ ಬಂದಿಳಿಯುತ್ತಿವೆ ಅಂದರೆ ಅದಕ್ಕೆ ಮೂಲ ಕಾರಣ ಪರಿಕ್ಕರ್. ಪರಿಕ್ಕರ್ 36 ರಫೇಲ್ ಜೆಟ್ ಗಳಿಗಾಗಿ ಒಡಂಬಡಿಕೆಗೆ ಸಹಿ ಮಾಡಿದ್ದರು.
ಅತ್ತ ಪ್ರಧಾನಿ ಮೋದಿ ಫ್ರಾನ್ಸ್ ನ ಫ್ರಾಂಕೋಯಿಸ್ ಹೋಲಾಂಡ್ ಅವರ ಸಹಭಾಗಿತ್ವದಲ್ಲಿ ರಫೆಲ್ ಯುದ್ಧ ವಿಮಾನಗಳ ಒಪ್ಪಂದಕ್ಕೆ ಸಹಿ ಮಾಡುತ್ತಿರುವಾಗ ಇತ್ತ ಮನೋಹರ್ ಪರಿಕ್ಕರ್ ಗೋವಾದಲ್ಲಿ ಮೀನುಗಾರರ ಸಂಚಾರಿ ಅಂಗಡಿಯ ಉದ್ಘಾಟನೆ ಮಾಡುತ್ತಿದ್ದರು. ಆದರೆ ರಫೇಲ್ ಯುದ್ಧ ವಿಮಾನಗಳ ಒಪ್ಪಂದಕ್ಕೂ ಮೊದಲು ಪರಿಕ್ಕರ್ ಹಗಲು ರಾತ್ರಿಯೆನ್ನದೇ ದುಡಿದಿದ್ದರು. ಇಡೀ ರಫೇಲ್ ಯೋಜನೆಯ ಸಾಧಕ ಬಾಧಕಗಳನ್ನೆಲ್ಲಾ ಸಮಗ್ರವಾಗಿ ಪರಿಶೀಲಿಸಿತ್ತು ಪರಿಕ್ಕರ್ ನೇತೃತ್ವದ ರಕ್ಷಣಾಸಚಿವಾಲಯ. ಇದರ ಮಧ್ಯೆ ದಶಕಗಳಿಂದ ಧೂಳು ತಿನ್ನುತ್ತಾ ಬಿದ್ದಿದ್ದ ರಕ್ಷಣಾ ಸಚಿವಾಲಯದ ಒನ್ ರ್ಯಾಂಕ್ ಒನ್ ಪೆನ್ಷನ್ ನಂತಹ ಯೋಜನೆಗಳ ಜಾರಿಗೂ ಕೆಲಸ ಮಾಡಿದ್ದರು. ಈ ಎಲ್ಲಾ ಒತ್ತಡಗಳ ಮಧ್ಯೆಯೇ ಪರಿಕ್ಕರ್ ಅವರ ಆರೋಗ್ಯವೂ ಕೈಕೊಟ್ಟಿತ್ತು. ಆದರೂ ಪರಿಕ್ಕರ್ ಸುಮ್ಮನೆ ಆರೋಗ್ಯದ ಕುರಿತಾಗಿಯೇ ಚಿಂತಿಸುತ್ತಾ ಕೂರಲಿಲ್ಲ. ಸ್ವಹಿತ ಚಿಂತನೆ ಮಾಡದೇ ದೇಶದ ಹಿತಕ್ಕಾಗಿ ತಮ್ಮ ಕೈಲಾದಷ್ಟೂ ಶ್ರಮಿಸಿದರು.
ಮನೋಹರ್ ಪರಿಕ್ಕರ್ ಬದುಕೆಂಬುದು ಒಂದು ಅಸಾಮಾನ್ಯ ಜೀವನ:
ಸದ್ಗುರು ಪಾಟೀಲ್ ಮತ್ತು ಮಾಯಾಭೂಷಣ್ ನಾಗ್ವೆಂಕರ್ ಅವರು ಬರೆದಿರುವ “ದ ಡೇ ಬ್ರೇಕರ್ಸ್” ಎಂಬ ಮನೋಹರ್ ಪರಿಕ್ಕರ್ ಅವರ ಜೀವನಚರಿತ್ರೆಯು ಪರಿಕ್ಕರ್ ಜೀವಿಸಿದ ಧನ್ಯ ಜೀವನವನ್ನು ಸದಾ ಅಚ್ಚರಿಯಿಂದ ನೋಡುವಂತೆ ಮಾಡುತ್ತದೆ. ಮನೋಹರ್ ಪರಿಕ್ಕರ್ ಕೇಂದ್ರ ರಕ್ಷಣಾ ಸಚಿವರಾಗುವುದಕ್ಕೂ ಮುನ್ನ ಗೋವಾದ ಮುಖ್ಯಮಂತ್ರಿಯಾಗಿದ್ದವರು.
ಪಾಟೀಲ್ ಹಾಗೂ ನಾಗ್ವೇಂಕರ್ ಅವರು ಬಹುಕಾಲದ ನಂತರ ರಾಜಕೀಯ ವ್ಯಕ್ತಿ ಒಬ್ಬರ ವಸ್ತುನಿಷ್ಠ ಮತ್ತು ನ್ಯಾಯಯುತ ಕೃತಿಯನ್ನು ಪುಸ್ತಕಲೋಕಕ್ಕೆ ನೀಡಿದ್ದಾರೆ. ಪರಿಕ್ಕರ್ ಅವರ ಸಮಗ್ರ ಜೀವನವನ್ನು ತಮ್ಮ ಕೃತಿಯಲ್ಲಿ ಸೆರೆಹಿಡಿಯುವ ಮೂಲಕ ತಮ್ಮ ಪುಸ್ತಕಕ್ಕೆ ಜೀವಂತಿಕೆ ನೀಡಿದ್ದಾರೆ. ಪರಿಕ್ಕರ್ ಅವರ ಬಗ್ಗೆ ಈ ಇಬ್ಬರೂ ಸೇರಿ ಬರೆದಿರುವುದರಿಂದ ತಮ್ಮ ತಮ್ಮ ಅಭಿಪ್ರಾಯಗಳನ್ನು ಚೆನ್ನಾಗಿ ಒರೆಗೆ ಹಚ್ಚಿ ನಿಜವಾದ ವ್ಯಕ್ತಿತ್ವವನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪರಿಕ್ಕರ್ ಅವರ ಜೀವನವು ಗೋವಾದಲ್ಲಿ ಆರಂಭವಾಗುತ್ತದೆ. ಪರಿಕ್ಕರ್ ಅವರ ತಂದೆ ಒಬ್ಬ ದಿನಸಿ ವಸ್ತುಗಳ ಮಾರಾಟಗಾರರಾಗಿದ್ದರು. ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ, ಶೀಘ್ರವಾಗಿ ಚಿಂತಿಸುವ, ತಮ್ಮ ಕಾರ್ಯಗಳ ಕುರಿತು ಸಮರ್ಥನೆ ನೀಡುವ ಸ್ವಭಾವವು ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ರೂಢಿಯಾಗಿತ್ತು. ಒಮ್ಮೆ ತಮ್ಮ ಸಹೋದರ ಅವಧೂತ್ ರೊಂದಿಗೆ ಪರಿಕ್ಕರ್ ಅವರು ಗೊತ್ತಿಲ್ಲದೇ ಅಶ್ಲೀಲ ಚಿತ್ರವೊಂದನ್ನು ವೀಕ್ಷಿಸಲು ಹೋಗಿದ್ದರು. ಅವರ ದುರದೃಷ್ಟಕ್ಕೆ ಇಬ್ಬರೂ ಅದೇ ಚಿತ್ರಮಂದಿರದಲ್ಲಿದ್ದ ಪಕ್ಕದ ಮನೆಯಾತನ ಕೈಯಲ್ಲಿ ಸಿಕ್ಕಿಬಿದ್ದರು. ಆ ಪಕ್ಕದ ಮನೆಯವರು ಪ್ರತಿದಿನವೂ ಈ ಸಹೋದರರ ತಾಯಿಯೊಂದಿಗೆ ಮಾತಿಗೆ ನಿಲ್ಲುತ್ತಿದ್ದರು. ಹೀಗಾಗಿ ಇವರಿಬ್ಬರಿಗೂ ತಾಯಿಗೆ ತಮ್ಮ ಕೆಲಸ ತಿಳಿಯುವ ಭಯ ಕಾಡಿತ್ತು. ಆದರೆ ಪರಿಕ್ಕರ್ ತಾವೇ ತಾಯಿಯ ಬಳಿ ಹೋಗಿ ತಾವು ಚಿತ್ರ ವೀಕ್ಷಣೆಗೆ ಹೋಗಿದ್ದಾಗಿಯೂ, ಆದರೆ ಅದು ಅಶ್ಲೀಲ ಚಿತ್ರವೆಂದು ತಮಗೆ ತಿಳಿದಿರಲಿಲ್ಲವೆಂದು ಹೇಳಿಬಿಟ್ಟರು. ಅಷ್ಟಕ್ಕೆ ನಿಲ್ಲಿಸದ ಮನೋಹರ್ ಪರಿಕ್ಕರ್, ಅದು ಅಶ್ಲೀಲ ಚಿತ್ರವೆಂದು ತಿಳಿದು ಅಲ್ಲಿಂದ ಹೊರಡಬೇಕಾದರೆ ಅಲ್ಲಿ ಪಕ್ಕದ ಮನೆಯಾತನನ್ನು ನೋಡಿದ್ದಾಗಿಯೂ ತಿಳಿಸಿಬಿಟ್ಟರು. ತಾಯಿ ಏನೂ ಮಾತನಾಡದೇ ಸುಮ್ಮನಾದರು. ಆದರೆ ಆ ಪಕ್ಕದ ಮನೆಯಾತ ಪರಿಕ್ಕರ್ ಸಹೋದರರ ತಾಯಿಯ ಬಳಿ ಮಕ್ಕಳನ್ನು ಚಿತ್ರಮಂದಿರದಲ್ಲಿ ನೋಡಿದ್ದಾಗಿ ಹೇಳಿದಾಗ, ತಾಯಿಯು, “ನನಗೆ ತಿಳಿದಿದೆ ಅವರು ಯಾವ ಚಿತ್ರ ನೋಡಲು ಹೋಗಿದ್ದರೆಂದು. ಆದರೆ ನೀವೇಕೆ ಅಲ್ಲಿಗೆ ಹೋಗಿದ್ದಿರಿ” ಎಂದು ಕೇಳಿಬಿಟ್ಟರು.
ಇದು ಪರಿಕ್ಕರ್ ಅವರು ಸಮಸ್ಯೆಗೆ ಅತೀ ಶೀಘ್ರವಾಗಿ ಉಪಾಯ ಕಂಡುಕೊಂಡ ಒಂದು ಉದಾಹರಣೆಯಷ್ಟೇ.
ನಂತರದ ದಿನಗಳಲ್ಲಿ ಪರಿಕ್ಕರ್ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ ಎಸ್)ವನ್ನು ಸೇರಿಕೊಂಡರು. ಇದರ ಮುಖಾಂತರ ಗೋವಾದಲ್ಲಿ ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಕಟ್ಟಲು ಅಡಿಪಾಯವಾಯಿತು. ಒಬ್ಬ ಐಐಟಿ ಪದವೀಧರರಾಗಿದ್ದ ಪರಿಕ್ಕರ್, ಮಾಪುಸಾದಂತಹ ಸಣ್ಣ ಸಣ್ಣ ಊರುಗಳಲ್ಲಿಯೂ ಶಿಕ್ಷಣವನ್ನು ಪ್ರೋತ್ಸಾಹಿಸಿದರು. ಹಳ್ಳಿಗಳಲ್ಲಿದ್ದ ವಿದ್ಯಾವಂತರನ್ನು ಗೌರವಿಸಿದರು. ಈ ಮೊದಲೇ ತಿಳಿಸಿದಂತೆ ಪರಿಕ್ಕರ್ ಅವರ ತಂದೆ ದಿನಸಿ ಅಂಗಡಿ ನಡೆಸುತ್ತಿದ್ದರು. ಮುಖ್ಯಮಂತ್ರಿಯಾದ ಮೇಲೆಯೂ ಪರಿಕ್ಕರ್ ಅಂಗಡಿ ನೋಡಿಕೊಳ್ಳುವ ಕೆಲಸವನ್ನು ಬಿಡಲಿಲ್ಲ. ಗೋವಾದ ಸಾಧಾರಣ ಜೀವನಕ್ಕೆ ಹೊಂದಿಕೊಂಡಿದ್ದ ಪರಿಕ್ಕರ್ ಗೆ ದೆಹಲಿಯ ಐಶಾರಮಿ ರಾಜಕಾರಣಿಯ ಜೀವನಕ್ಕೆ ಹೊಂದಿಕೊಳ್ಳುವುದು ಬಹಳ ಕಷ್ಟ ಎಂದೆನಿಸಿತ್ತು. ಹೀಗಾಗಿ ಗೋವಾಗೆ ತೆರಳಲು ವಿನಂತಿಸಿಕೊಂಡಿದ್ದರು.
ಮನೋಹರ್ ಪರಿಕ್ಕರ್ ಅವರ ಪ್ರಾಮಾಣಿಕ ವ್ಯಕ್ತಿತ್ವ ಹಾಗೂ ದೃಢ ನಿರ್ಧಾರ ನಿಲುವುಗಳಿಂದಾಗಿ ಪ್ರಧಾನಿ ಮೋದಿ ಅವರಿಗೆ ಅತ್ಯಂತ ನಂಬುಗೆಯ ವ್ಯಕ್ತಿಯಾಗಿದ್ದರು. ಆದರೆ ಜನರ ಕಣ್ಣಿಗೆ ಪರಿಕ್ಕರ್ ಅನಾವಶ್ಯಕವಾಗಿ ಒರಟು ವ್ಯಕಿತ್ವದವರೆಂಬಂತೆ ಬಿಂಬಿಸಲಾಗುತ್ತಿತ್ತು. ಒಮ್ಮೆ ಗೋವಾದಲ್ಲಿದ್ದ ಪರಿಕ್ಕರ್ ರನ್ನು ಭೇಟಿಯಾಗಲು ಸ್ಥಳೀಯ ಉದ್ಯಮಿಯೊಬ್ಬರು ತಮ್ಮ ಕಾರ್ಯಕ್ರಮವೊಂದಕ್ಕೆ ಪರಿಕ್ಕರ್ ಅವರನ್ನು ಆಹ್ವಾನಿಸಲು ಅಲ್ಲಿನ ಎಂಎಲ್ ಎ ಅವರೊಂದಿಗೆ ಬಂದರು. ಪರಿಕ್ಕರ್ ಅವರನ್ನು ಭೇಟಿಯಾಗಲು ಎಂಎಲ್ ಎ ಒಳಹೋದರು ಹಾಗೂ ಉದ್ಯಮಿ ಹೊರಗಡೆಯೇ ಕುಳಿತುಕೊಂಡರು. ಆದರೆ ಒಳ ಹೋದ ಶಾಸಕರ ಮೇಲೆ ಪರಿಕ್ಕರ್ ಕೂಗಾಡತೊಡಗಿದರು. ಅವರಿಗೆ ಕಛೇರಿ ಕೆಲಸಗಳನ್ನು ಮನೆಗೆ ತಂದಿದ್ದಕ್ಕೆ ಕೋಪ ಬಂದಿತ್ತು. ಅದನ್ನು ಕೇಳಿಸಿಕೊಂಡ ಉದ್ಯಮಿ ಸದ್ದಿಲ್ಲದೇ ಮನೆಯ ದಾರಿ ಹಿಡಿದಿದ್ದರು. ಶಾಸಕರಿಗೆ ಆ ರೀತಿಯಾಗಿ ಕೂಗಾಡುವ ಪರಿಕ್ಕರ್ ಸಾಮಾನ್ಯ ಜನರ ಬಳಿ ಹೇಗೆ ನಡೆದುಕೊಳ್ಳುವರೋ ಎಂಬುದಾಗಿ ಪರಿಕ್ಕರ್ ಬಗ್ಗೆ ಸಲ್ಲದ ಮಾತುಗಳನ್ನು ಹಬ್ಬಿಸಿದ್ದರು.
ಪರಿಕ್ಕರ್, ಕುಟುಂಬವನ್ನು ಇಷ್ಟಪಡುವ ವ್ಯಕ್ತಿಯಾಗಿದ್ದರು. ಕ್ಯಾನ್ಸರ್ ನಿಂದ ಪತ್ನಿ ಮೇಧಾ ನಿಧನರಾದ ಬಳಿಕ ಅವರು ಸಾಕಷ್ಟು ಕುಗ್ಗಿಹೋಗಿದ್ದರು. ಒಂದು ಹಂತದಲ್ಲಿ ಪರಿಕ್ಕರ್ ಅವರ ಎರಡನೇ ಮದುವೆಗೆ ಅವರ ಇಬ್ಬರು ಗಂಡುಮಕ್ಕಳೇ ಒತ್ತಾಯಿಸಿದ್ದರು. ಅವರ ಸುತ್ತಮುತ್ತಲಿದ್ದ ಸಾಕಷ್ಟು ಮಂದಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೂ ಅವರು ಮರುವಿವಾಹವಾಗಲಿಲ್ಲ. ಓರ್ವ ಮಹಿಳಾ ಐಎಎಸ್ ಅಧಿಕಾರಿಯೊಂದಿಗಿನ ಅವರ ಸಂಬಂಧದ ಕುರಿತು ಯಾವಾಗ ಜನ ಮಾತಾಡತೊಡಗಿದರೋ, ಆಗ ಅವರು ಕೂಡಲೇ ತಮ್ಮ ಆರ್ ಎಸ್ ಎಸ್ ಸಂಪರ್ಕಗಳನ್ನು ಬಳಸಿಕೊಂಡು ಆ ಅಧಿಕಾರಿಯನ್ನು ವರ್ಗಾವಣೆ ಮಾಡಿದರು.
ಪರಿಕ್ಕರ್ ಅವರಿಗಿದ್ದ ಒಂದೇ ಒಂದು ದೌರ್ಬಲ್ಯವೆಂದರೆ ಅದು ಆಹಾರ. ದೆಹಲಿಯಿಂದ ಗೋವಾಗೆ ತೆರಳಲು ಮನವಿ ಮಾಡಿದ್ದಕ್ಕೆ ಆಹಾರವೂ ಒಂದು ಕಾರಣವಾಗಿತ್ತು. ಪದೇ ಪದೇ ತಾಜಾ ಮೀನಿನ ಅಡುಗೆಯನ್ನು ಸವಿಯಲು ದೆಹಲಿಯಿಂದ ಗೋವಾಕ್ಕೆ ಹೋಗುವುದು ಅವರ ಬಿಡುವಿರದ ಕೆಲಸಗಳ ಮಧ್ಯೆ ಅವರಿಗೆ ಕಷ್ಟವಾಗುತ್ತಿತ್ತು.
ಸ್ವತಃ ಬಿಯರ್ ಕುಡಿಯುತ್ತಿದ್ದ ಹಾಗೂ ಸಿಗರೇಟ್ ಸೇದುತ್ತಿದ್ದ ಪರಿಕ್ಕರ್ ಗೆ ಮಹಿಳೆಯರು ಮದ್ಯಪಾನ ಮಾಡುವುದು ಸಹ್ಯವಾಗುತ್ತಿರಲಿಲ್ಲ. ಅವರ ಬಳಿ ಯಾರಾದರೂ ಮಹಿಳೆಯರು ಮದ್ಯಪಾನ ಮಾಡುವುದು ಏಕೆ ಇಷ್ಟ ಇಲ್ಲ ಎಂದು ಕೇಳಿದರೆ, ಉತ್ತರಿಸಲು ಸಮರ್ಪಕ ಉತ್ತರವೇ ಇರಲಿಲ್ಲ. ಹೀಗಾಗಿ ಪರಿಕ್ಕರ್ ಎಲ್ಲೂ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿರಲಿಲ್ಲ.
ಇದೆಲ್ಲದರ ಹೊರತಾಗಿಯೂ ಪರಿಕ್ಕರ್ ಪ್ರಾಮಾಣಿಕತೆಯ ಬಗ್ಗೆ ಎರಡು ಮಾತಿಲ್ಲ. 2001ರಲ್ಲಿ ಪರಿಕ್ಕರ್ ಸರ್ಕಾರವು ವಿದ್ಯುತ್ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಮಾವಿನ್ ಗುಡ್ಹಿನೋ ಅವರನ್ನು ಬಂಧಿಸಿತ್ತು. ಅದೇ ಗುಡ್ಹಿನೋ 2017ರಲ್ಲಿ ಪರಿಕ್ಕರ್ ರ ಬಿಜೆಪಿ ಪಕ್ಷವನ್ನು ಸೇರಿ ಮಂತ್ರಿ ಕೂಡ ಆದರು. ಇದಕ್ಕೂ ಮೊದಲು 2016ರಲ್ಲಿ ವಿದ್ಯುತ್ ಹಗರಣದ ಕುರಿತಾಗಿ ಗುಡ್ಹಿನೋ ತಮ್ಮ ಸಮರ್ಥನೆಯನ್ನೂ ನೀಡಿದ್ದರು. ಅದರಲ್ಲಿ “ಒಂದು ಹಗರಣ ನಡೆಯುವುದರಲ್ಲಿತ್ತು. ಅದನ್ನು ತಡೆದು ಸರ್ಕಾರಕ್ಕೆ 63 ಕೋಟಿ ರೂ. ತುಂಬಿಕೊಟ್ಟಿದ್ದೇನೆ. ಈಗ ಅದು ಹಗರಣ ಹೌದೇ ಅಲ್ಲವೇ ಎಂಬುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ” ಎಂದಿದ್ದರು ಗುಡ್ಹಿನೋ.
ಪರಿಕ್ಕರ್ ತಮ್ಮ ಕುಟುಂಬವನ್ನು ರಾಜಕಾರಣದಿಂದ ದೂರವಿಟ್ಟಿದ್ದರು. ಆದರೆ ಅವರ ಮಗ ಉತ್ಪಲ್ ನ ಮಾವ ಮಹೇಶ್ ಸರ್ ದೇಸಾಯಿ ಅವರು ನಿವೃತ್ತಿಯ ನಂತರವೂ ಗೋವಾದ ಸರ್ಕಾರಿ ಮೆಡಿಕಲ್ ಕಾಲೇಜಿನ ರೇಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿ ಮುಂದುವರೆದಿದ್ದರು. ಮನೋಹರ್ ಪರಿಕ್ಕರ್ ನಿಧನವಾದ 4 ತಿಂಗಳ ನಂತರ ಸರ್ದೇಸಾಯಿ ಅವರನ್ನು ಸೇವೆಯಿಂದ ತೆಗೆದುಹಾಕಲಾಯಿತು. ಗೋವಾದಲ್ಲಿ ಗಣಿಗಾರಿಕೆಯಿಂದ ಆರಂಭವಾಗಿ ಕ್ಯಾಸಿನೋಗಳನ್ನು ನಿಷೇಧಿಸುವ ಅನೇಕ ಯೋಜನೆಗಳ ಕುರಿತಾದ ಭರವಸೆಗಳನ್ನು ಪರಿಕ್ಕರ್ ನೀಡಿದ್ದರು. ಆದರೆ ರಾಜಕೀಯದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಕಾರ್ಯರೂಪಕ್ಕೆ ತರುವುದು ಸ್ವಲ್ಪ ಕಷ್ಟವೇ.
ತಮ್ಮ ಕುರಿತಾದ ಟೀಕೆಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ ಪರಿಕ್ಕರ್ ಮಾಧ್ಯಮಗಳ ನೀರಿಳಿಸುತ್ತಿದ್ದರು. “ದ ಡೇ ಬ್ರೇಕರ್ಸ್” ಪುಸ್ತಕದಲ್ಲಿ ಮಾಧ್ಯಮಗಳೊಂದಿಗೆ ಪರಿಕ್ಕರ್ ಅವರ ಸಂಬಂಧಗಳನ್ನು ವಿವರಿಸುವ ಒಂದು ಅಧ್ಯಾಯವೇ ಇದೆ. ಒಮ್ಮೆ ಪರಿಕ್ಕರ್ ಸಂಪುಟ ಸಭೆ ಮುಗಿಸಿ ಹೊರಬರುವಾಗ ಇಬ್ಬರು ಪತ್ರಕರ್ತರು ಸಂಪುಟ ಸಭೆಯ ನಿರ್ಣಯಗಳ ಪ್ರತಿಗಾಗಿ ಪರಿಕ್ಕರ್ ಅವರ ಮೇಲೆ ಮುಗಿಬಿದ್ದರು. ಪರಿಕ್ಕರ್ ಆ ಇಬ್ಬರು ಪತ್ರಕರ್ತರಿಗೆ ಸಂಪುಟ ಸಭೆಯ ಪ್ರತಿಯನ್ನು ನೀಡುತ್ತಾ,”ನಿಮಗೇನು ಬೇಕೋ ಎಲ್ಲವನ್ನೂ ತೆಗೆದುಕೊಳ್ಳಿ. ಆದರೆ ದಯವಿಟ್ಟು ನನ್ನ ಒಳವಸ್ತ್ರವನ್ನು ಮಾತ್ರ ನನಗೇ ಬಿಟ್ಟುಬಿಡಿ” ಎಂದು ಹೇಳಿದ್ದರು.
ಯಾವುದೇ ರಾಜಕೀಯ ಹಿನ್ನಲೆ ಇಲ್ಲದೇ, ಸ್ವಂತ ಪರಿಶ್ರಮದಿಂದ ತಮ್ಮ ರಾಜಕೀಯ ದಾರಿಯನ್ನು ಪರಿಕ್ಕರ್ ಅವರು ನಿರ್ಮಿಸಿಕೊಂಡಿದ್ದರು. ತಮ್ಮ ಪ್ರಶ್ನಾತೀತ ಪ್ರಾಮಾಣಿಕತೆ, ನಿಷ್ಠೆಯಿಂದಲೇ ಪ್ರಧಾನಿ ಮೋದಿಯವರ ವಿಶ್ವಾಸ ಗಳಿಸಿಕೊಂಡಿದ್ದರು. ಅವರು ಪ್ರಾಮಾಣಿಕ ಜೀವನ ನಡೆಸದೇ ಇದ್ದಿದ್ದರೆ ಪರಿಕ್ಕರ್ ಅವರ ಆಸ್ತಿ ಈಗಿರುವುದಕ್ಕಿಂತ ಅದೆಷ್ಟೋ ಹೆಚ್ಚು ಪಾಲು ಜಾಸ್ತಿ ಇರುತ್ತಿತ್ತು. ಅಕಾಲಿಕವಾಗಿ ಕ್ಯಾನ್ಸರ್ ನಿಂದ ಮರಣ ಹೊಂದದೇ ಇದ್ದಿದ್ದರೂ ಅವರ ಆಸ್ತಿ ಈಗಿರುವುದಕ್ಕಿಂತ ಹೆಚ್ಚೇನೂ ಆಗುತ್ತಿರಲಿಲ್ಲ. ಅದು ಪರಿಕ್ಕರ್ ಎಂದರೆ.
“ದ ಡೇ ಬ್ರೇಕರ್ಸ್” ಪುಸ್ತಕದಲ್ಲಿ ಪಾಟೀಲ್ ಮತ್ತು ನಾಗ್ವೇಂಕರ್ ಅವರು ಪರಿಕ್ಕರ್ ಅವರ ಜೀವನದ ಸಮಗ್ರ ಚಿತ್ರಣವನ್ನು ನೀಡಿದ್ದಾರೆ. ಅವರ ರಾಜಕೀಯ ಜೀವನದ ಹಲವು ಮಜಲುಗಳನ್ನು ವಿವರಿಸಿದ್ದಾರೆ. ಪರಿಕ್ಕರ್ ಗೋವಾದಿಂದ ದೆಹಲಿ ರಾಜಕಾರಣಕ್ಕೆ ಬಂದಿದ್ದು, ಮತ್ತು ತಿರುಗಿ ದೆಹಲಿ ರಾಜಕಾರಣದಿಂದ ಗೋವಾ ರಾಜಕಾರಣಕ್ಕೆ ಹಿಂತಿರುಗಿದ ಸಂಪೂರ್ಣ ವಿವರಣೆ ಈ ಆತ್ಮಚರಿತ್ರೆಯಲ್ಲಿದೆ.
ಮೂಲ ಲೇಖನ :- ಸದ್ಗುರು ಪಾಟೀಲ್ & ಮಾಯಾಭೂಷಣ್ ನಾಗ್ವೆಂಕರ್ ಬರೆದಿರುವ “ದ ಡೇ ಬ್ರೇಕರ್ಸ್” ಆಧಾರಿತ
ಅನುವಾದ:- ಅಂಬಿಕಾ ಸೀತೂರು, ಬೆಂಗಳೂರು