ಮತಾಂತರ ನಿಷೇಧ ಕಾಯ್ದೆಗೆ ಸಚಿವ ಸಂಪುಟ ಒಪ್ಪಿಗೆ – ನಾಳೆ ಮಂಡನೆ
ವಿಪಕ್ಷಗಳ ವಿರೋಧದ ನಡುವೆಯು ಮತಾಂತರ ನಿಷೇಧ ಕಾಯ್ದೆ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಮತಾಂತರ ನಿಷೇಧ ಕಾಯ್ದೆ ಹಾಗೂ ಲವ್ ಜಿಹಾದ್ ಕಾಯ್ದೆಗಳನ್ನು ಮಂಡಿಸಿ ಅನುಮೋದನೆ ಪಡೆಯಲು ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯ ಮತಾಂತರ ನಿಷೇಧ ಕಾಯ್ದೆ ವಿಚಾರ ಪ್ರಸ್ತಾಪ ಆಗಿರಲಿಲ್ಲ. ಆದರೆ, ಸಭೆಯಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ಪಡೆದ ಸಿಎಂ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ನಾಳೆಯೇ ವಿಧೇಯಕ ಮಂಡಿಸುತ್ತೇವೆ ಎಂದು ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇದೆ. ಪರಿಷತ್ತಿನಲ್ಲಿ ಪೂರ್ಣ ಬಹುಮತಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಅನಿವಾರ್ಯವಾಗಿದೆ.








