ಸಚಿವ ಸ್ಥಾನದ ಆಸೆ ಹೋಗಿದೆ : ರಾಜುಗೌಡ ಬೇಸರ
ಯಾದಗಿರಿ : ನಾನು ಸಚಿವ ಆಕಾಂಕ್ಷಿಯಲ್ಲ. ಕಳೆದ ಬಾರಿ ನಾನು ಸಚಿವ ಆಗ್ತಿನಿ ಅನ್ನುವ ಭರವಸೆ ಇತ್ತು. ಅದು ಕೈ ತಪ್ಪಿದಾಗಿನಿಂದ ಸಚಿವ ಸ್ಥಾನದ ಆಸೆ ಹೋಗಿದೆ ಎಂದು ಬಿಜೆಪಿ ಶಾಸಕ ರಾಜುಗೌಡ ಬೇಸರ ಹೊರಹಾಕಿದ್ದಾರೆ.
ಸುರಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ರಾಜ್ಯದಲ್ಲಿ ಯಾವುದೇ ಸಿಎಂ ಬದಲಾವಣೆ ಇಲ್ಲ ಅದು ಕೇವಲ ಉಹಾಪೋಹ. ಕೇವಲ ವಿರೋಧ ಪಕ್ಷದ ನಾಯಕರು ಮಾತ್ರವಲ್ಲ ನಮ್ಮ ಪಕ್ಷದವರು ಸಹ ಸಿಎಂ ಬದಲಾವಣೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಮಾಡೋದಕ್ಕೆ ಸಾಕಷ್ಟು ಕೆಲಸಗಳಿವೆ ಆ ಕೆಲಸ ಮಾಡ್ಲಿ . ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿವೆ ಆ ಕೆಲಸ ಮಾಡಲಿ ಉತ್ತಮ ಕೆಲಸ ಮಾಡುವುದು ಬಿಟ್ಟು ಅನ್ ಆಫೀಷಿಯಲ್ ಸುದ್ದಿ ಇದು ಅಂತ ಮಾಧ್ಯಮದವರ ಬಳಿ ಹೇಳುವುದು ಬಿಟ್ಟು ಬಿಡಿ. ೧೩ ತಿಂಗಳಲ್ಲಿ ಚುನಾವಣೆ ಬರುತ್ತೆ ಪಕ್ಷ ಸಂಘಟನೆ ಕೆಲಸ ಮಾಡಿ ಎಂದು ಸ್ವಪಕ್ಷದವರ ವಿರುದ್ಧವೇ ಕಿಡಿಕಾರಿದರು.
ಇನ್ನು ಸಂಕ್ರಾಂತಿಗೆ ಸಂಪುಟ ಸರ್ಜರಿ ವಿಚಾರವಾಗಿ ಮಾತನಾಡಿ, ನಾನು ಸಚಿವ ಆಕಾಂಕ್ಷಿಯಲ್ಲ. ಕಳೆದ ಬಾರಿ ನಾನು ಸಚಿವ ಆಗ್ತಿನಿ ಅನ್ನುವ ಭರವಸೆ ಇತ್ತು. ಅದು ಕೈ ತಪ್ಪಿದಾಗಿನಿಂದ ಸಚಿವ ಸ್ಥಾನದ ಆಸೆ ಹೋಗಿದೆ. ಕಳೆದ ಬಾರಿ ನಾನು ಸಚಿವನಾಗ್ತಿನಿ ಅಂತ ನನ್ನ ಬೆಂಬಲಿಗರು ಸಾಕಷ್ಟು ಆಸೆ ಪಟ್ಟಿದ್ದರು. ಆಸೆ ನಿರಾಸೆಯಾದ ಮೇಲೆ ನನಗೆ ಸಚಿವ ಸ್ಥಾನದ ಮೇಲೆ ಭರವಸೆ ಹೋಗಿದೆ. ನನಗೆ ಜಿವಕ್ಕೆ ಜೀವ ಕೊಡುವ ಕಾರ್ಯಕರ್ತರಿದ್ದಾರೆ. ಅವರಿಗಾಗಿ ನಾನು ಕೆಲಸ ಮಾಡಿಕೊಂಡು ಹೋಗ್ತೀನಿ. ನಾನು ಸಚಿವನಾಗುವ ಆಸೆ ಇದೆ ಅಂದು ಸಿಗದಿದ್ಧರೆ ನನಗಿಂತ ಅವರಿಗೆ ಹೆಚ್ಚಾಗಿ ನೋವಾಗುತ್ತೆ. ಹಾಗಾಗಿ ನಾನು ನನ್ನ ಹೈಕಮಾಂಡ್ ಗೂ ತಿಳಿಸಿದ್ದೀನಿ ಎಂದು ರಾಜುಗೌಡ ಹೇಳಿದ್ದಾರೆ.