ಆಪರೇಷನ್ ಮಾಡಿ ಹೊಲಿಗೆ ಹಾಕದೇ ಹಾಗೆಯೇ ಬಿಟ್ಟ ವೈದ್ಯ….
ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಬಂದ ವೃದ್ಧೆಯೊಬ್ಬರ ಹೊಟ್ಟೆ ಕೊಯ್ದು ವೈದ್ಯನೊಬ್ಬ ಹೊಲಿಗೆ ಹಾಕದೇ ಹಾಗೆ ಬಿಟ್ಟಿದ್ದಾನೆ. ಡಾಕ್ಟರ್ ಮಾಡಿದ ಯಡವಟ್ಟಿನಿಂದ ಇದೀಗ ವೃದ್ಧೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
65 ವರ್ಷದ ಅನ್ನಪೂರ್ಣಮ್ಮ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಹೀಗಾಗಿ ದಾವಣಗೆರೆ ನಗರದ ಗುರುನಾಥ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಬಂದಿದ್ದ ವೃದ್ಧೆಯನ್ನ ಪರೀಕ್ಷಿಸಿದ ವೈದ್ಯ ದೀಪಕ್ ಬೊಂದಾಡೆ ಆಪರೇಷನ್ ಮಾಡಿದ್ದಾನೆ. ಹೊಟ್ಟೆಕೊಯ್ದ ಬಳಿಕ ಹಾಗೆಯೇ ಬಿಟ್ಟಿದ್ದಾನೆ ಡಾಕ್ಟರ್, ಆಪರೇಷನ್ ಮಾಡಿ 15 ದಿನ ಆದರೂ ಹೊಲಿಗೆ ಹಾಕಿರಲಿಲ್ಲ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನ ಕೇಳಿದರೆ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುವುದು ಎಂದಿದ್ದಾರೆ.
ಇದರಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಪರೇಷನ್ ಆದ ಬಳಿಕ ವೃದ್ದೆಗೆ ಕಣ್ಣು ಕಾಣುತ್ತಿಲ್ಲ, ಊಟವೂ ಸೇರುತ್ತಿಲ್ಲ. ಯಾವುದೇ ಬಿಲ್ ನೀಡದೇ ಸುಮಾರು 3 ಲಕ್ಷಕ್ಕೂ ಅಧಿಕ ಬಿಲ್ ಕಟ್ಟಿಸಿಕೊಂಡಿದ್ದಾರೆ, ಔಷಧಿಯಲ್ಲೇ ಗುಣಮುಖವಾಗುವಂತೆ ಆಪರೇಷನ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸದ್ಯ ಅನ್ನಪೂರ್ಣಮ್ಮರನ್ನ ಗುರುನಾಥ್ ಆಸ್ಪತ್ರೆಯಿಂದ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ವೈದ್ಯರ ವಿರುದ್ಧ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.








