ADVERTISEMENT
Sunday, June 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಮನುಕುಲದ ಮಾರಣಹೋಮಕ್ಕೆ ಮಹೂರ್ತ ನಿಗದಿಯಾಗಿದೆ; ಈಗಲಾದರೂ ಎಚ್ಚೆತ್ತುಕೊಳ್ಳಿ ಇಲ್ಲವೇ ನಮ್ಮ ಮುಂದಿನ ಪೀಳಿಗೆಗೆ ಸಾವನ್ನು ಮಾತ್ರ ಬಳುವಳಿ ನೀಡಬೇಕಾಗುತ್ತದೆ

admin by admin
June 29, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಮನುಕುಲದ ಮಾರಣಹೋಮಕ್ಕೆ ಮಹೂರ್ತ ನಿಗದಿಯಾಗಿದೆ; ಈಗಲಾದರೂ ಎಚ್ಚೆತ್ತುಕೊಳ್ಳಿ ಇಲ್ಲವೇ ನಮ್ಮ ಮುಂದಿನ ಪೀಳಿಗೆಗೆ ಸಾವನ್ನು ಮಾತ್ರ ಬಳುವಳಿ ನೀಡಬೇಕಾಗುತ್ತದೆ:

Related posts

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

June 15, 2025
ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಇಸ್ರೇಲ್-ಇರಾನ್ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಕರೆ ಮಾಡಿದ PM ಬೆಂಜಮಿನ್ ನೆತನ್ಯಾಹು

June 15, 2025

“ಭಜನೆ ಮಾಡುವುದನ್ನು ಕೊಂಚ ಹೊತ್ತು ನಿಲ್ಲಿಸಿ ಈ ಲೇಖನ ಓದಿ; ದೇಶ ನೆಮ್ಮದಿಯಾಗಿರಬೇಕು, ಭವಿಷ್ಯ ಬದುಕು ಉಳಿಯಬೇಕಿದ್ದರೆ ಈ ಪರಮ ಘಾತುಕ ಯೋಜನೆ ಜಾರಿಯಾಗಬಾರದು; ಸೇ ನೋ ಟು ಇಐಎ-2020”

ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಚಿವಾಲಯ ಪರಿಸರದ ಮೇಲಿನ ಪ್ರಭಾವದ ಅಧ್ಯಯನ (ಎನ್ವಿರಾನ್ ಮೆಂಟ್ ಇಂಪ್ಯಾಕ್ಟ್ ಅಸೆಸ್ ಮೆಂಟ್) ಅನ್ನುವ 2006ರ ಹಳೆಯ ಪರಿಸರ ಸಂರಕ್ಷಕ ನಿಯಮದ ಕರಡನ್ನು ತಿದ್ದುಪಡಿ ಮಾಡಿ ಶಿಥಿಲಗೊಳ್ಳಿಸಲು ಹೊರಟಿದೆ. ಭವಿಷ್ಯದಲ್ಲಿ ಇದರ ದೂರಗಾಮಿ ಪರಿಣಾಮಗಳು ಅದೆಷ್ಟು ಮಾರಕವೆಂದರೆ ಪರಿಸರ ಮತ್ತು ವನ್ಯಜೀವಿ ಸರ್ವನಾಶವಿರಲಿ, ನಮ್ಮ ಮುಂದಿನ ಪೀಳಿಗೆಗೆ ಬದುಕೇ ಇಲ್ಲ. ಇದು 1986ರಲ್ಲಿ ಜಾರಿಗೆ ಬಂದಿರುವ ಪರಿಸರ ಸಂರಕ್ಷಣೆ ಕಾಯ್ದೆಯ ಸ್ಪಷ್ಟ ವಿರೋಧವಷ್ಟೇ ಅಲ್ಲ, ನಮ್ಮ ಮುಂದಿನ ತಲೆಮಾರಿಗೆ ಮಹಾ ಸಂಕಟ ತಂದೊಡ್ಡಬಲ್ಲ ಮಹಾ ವಿನಾಶಕಾರಿ ನಡೆ. ಹೇಗೆ ಅನ್ನುವುದನ್ನು ಒಂದೊಂದಾಗಿ ಹೇಳುತ್ತಾ ಹೋಗುತ್ತೀನಿ. ಯಾರಾದರೂ ಈ ಲೇಖನವನ್ನು ಓದಿ ಅರ್ಥ ಮಾಡಿಕೊಂಡವರು ಈ ಮೂರ್ಖ ಯೋಜನೆಯ ವಿರುದ್ಧ ನಮ್ಮ ಧ್ವನಿಗೆ ನಿಮ್ಮ ಧ್ವನಿ ಸೇರಿಸಿ. ಸರ್ಕಾರವನ್ನು ಈಗ ಎಚ್ಚರಿಸದೇ ಇದ್ದಲ್ಲಿ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಖಂಡಿತಾ ಕ್ಷಮಿಸುವುದಿಲ್ಲ.

ಈಗಾಗಲೇ ಪರಿಸರ ಕಾರ್ಯಕ್ಷಮತೆಯ ಸೂಚ್ಯಂಕದಲ್ಲಿ (environment performance index) ಒಟ್ಟು 180 ದೇಶಗಳ ಪೈಕಿ ನಮ್ಮ ಭಾರತ 177ನೇ ಸ್ಥಾನದಲ್ಲಿದೆ. ಈಗ ಕೇಂದ್ರದ ಪರಿಸರ ಸಚಿವಾಲಯ 2006ರ ಪರಿಸರದ ಮೇಲಿನ ಪ್ರಭಾವದ ಅಧ್ಯಯನ (EIA) ಅನ್ನು ಸಂಪೂರ್ಣ ಶಿಥಿಲಗೊಳಿಸಿ 2020ರ ನೂತನ ಮಾರ್ಗಸೂಚಿಯಲ್ಲಿ ಹಲವು ಬದಲಾವಣೆಗಳನ್ನು ತರಲು ಹೊರಟಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಅಪಾಯಕಾರಿ ಕೈಗಾರಿಕೆಗಳಿಗೆ ಅನುಮತಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಪಟ್ಟಣದ ವಿಷವನ್ನು ಮತ್ತಷ್ಟು ಹೆಚ್ಚಿಸಲು ಹೊರಟಿದೆ. ಹಳೆಯ 30 ಮಹತ್ವದ ನೀತಿ ಟಿಪ್ಪಣಿಗಳನ್ನು ಜಾರಿಗೆ ತಂದು ಪರಿಸರದ ಉಳಿವಿಗೆ ಠೊಂಕ ಕಟ್ಟಿ ನಿಲ್ಲಬೇಕಿದ್ದ ಸರ್ಕಾರ ಅದನ್ನು ಕೃಶಗೊಳಿಸಿ ಹೊಸ 25 ವಿವಿಧ ವಿಷಕಾರಿ ಕೈಗಾರಿಗಳನ್ನು ಪರಿಸರ ಸೂಕ್ಷ್ಮ ವಲಯಗಳಲ್ಲೇ ಸ್ಥಾಪಿಸಲು ತೀರ್ಮಾನಿಸಿದೆ. ಪ್ರಾಯಶಃ ಮುಂದೆ ಇದರ ಘೋರ ಪರಿಣಾಮಗಳೇನು ಅನ್ನುವ ದೂರದೃಷ್ಟಿ ಕೇಂದ್ರ ಸರ್ಕಾರಕ್ಕೆ ಇದ್ದ ಹಾಗಿಲ್ಲ.

ಸ್ವಲ್ಪ ನಮ್ಮ ಸಂಕಟಗಳನ್ನು ನೋಡಿ ಮುಂದೆ ಹೋಗೋಣ, ಭೂಪಾಲ್ ಅನಿಲ ದುರಂತ, ವಿಶಾಖಪಟ್ಟಣದ ಅನಿಲ ದುರಂತ, ಕೇರಳದ ಭೂಕುಸಿತ, ನೇಯ್ವೆಲಿ ಬಾಯ್ಲರ್ ಸ್ಫೋಟ, ಸಾಯುತ್ತಿರುವ ಕಲುಷಿತಗೊಳ್ಳುತ್ತಿರುವ ನಮ್ಮ ನದಿಗಳು, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ನೊರೆ ಮತ್ತು ಬೆಂಕಿ, ಪಶ್ಚಿಮ ಘಟ್ಟದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅರಣ್ಯ ನಾಶ, ಅರಾವಳಿ, ಆರೇಯ್ ಶಿಖರಗಳಲ್ಲಿ ಅರಣ್ಯ ನಾಶ, ಛತ್ತಿಸ್ ಘಡದ ಹಸ್ದಿಯೋ ನದಿ ಪಾತ್ರದ ಸಂಕಷ್ಟ, ಗೂಂಡ್, ಬಿಲ್, ಸಂತಲ್, ಗಾರೋ, ಖಾಸಿ, ಮುಂಡಾಸ್ ಮುಂತಾದ ಬುಡಕಟ್ಟು ಅರಣ್ಯವಾಸಿಗಳ ಸಂಕಷ್ಟ.. ಇವುಗಳ ತೀವ್ರತೆ ಮತ್ತು ಪರಿಣಾಮ ಆಳುವ ಸರ್ಕಾರ ಮರೆತಿರಬೇಕು.

ವಿಶ್ವ ಶುದ್ಧ ಉಸಿರಾಡುವ ಗಾಳಿಯ ಅಧ್ಯಯನದ ವರದಿ (world air quality report) ಅನ್ವಯ ವಿಶ್ವದ ಅತ್ಯಂತ ಹೆಚ್ಚು ಕಲುಷಿತಗೊಂಡ 10 ನಗರಗಳಲ್ಲಿ ಭಾರತದ 6 ನಗರಗಳಿವೆ. ನಮ್ಮ ರಾಷ್ಟ್ರ ರಾಜಧಾನಿ ದೆಹಲಿ ಅತ್ಯಂತ ಹೆಚ್ಚು ಕಲುಷಿತಗೊಂಡ ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಈಗ ಕೇಂದ್ರ ಸರ್ಕಾರ ಹೀಗೆ ವಿಷವಾಯುವನ್ನು ಬಿಡುಗಡೆ ಮಾಡಬಹುದಾದ 25 ಉದ್ಯಮಗಳಿಗೆ ಅನುಮತಿ ನೀಡಲು ಹೊರಟಿದೆ. ಕೆಂಪು ಮತ್ತು ಕಿತ್ತಳೆ ವಿಷಕಾರಿ ಉದ್ಯಮವೆಂದು ಗುರುತಿಸಲ್ಪಟ್ಟಿರುವ ಇವು ಭವಿಷ್ಯದಲ್ಲಿ ವಾರ್ಷಿಕ ಸರಾಸರಿ 1.25 ಮಿಲಿಯನ್ ಭಾರತೀಯರನ್ನು ಕೊಲ್ಲಬಹುದು ಎಂದು ಸಮೀಕ್ಷೆಯೊಂದು ಎಚ್ಚರಿಕೆ ನೀಡಿದೆ. ನಾವು ನಮ್ಮ ಮಕ್ಕಳಿಗೆ ಶುದ್ಧ ನೀರು, ಶುದ್ಧ ಗಾಳಿ ಕೊಡೋಣವೋ ಅಥವಾ ವಿಷವನ್ನು ಉಣಿಸಲು ಸಿದ್ಧರಾಗಬೇಕೋ? ಅಂದ ಹಾಗೆ ಈಗ ತರುತ್ತಿರುವ ತಿದ್ದುಪಡಿಯಲ್ಲಿ ಖಾಸಗಿ ಅಥವಾ ಸರ್ಕಾರಿ ಯೋಜನೆಗಳಲ್ಲಿ ಪರಿಸರಕ್ಕೆ ಸಂಬಂಧಪಟ್ಟಂತೆ ಜನರ ಸಹಭಾಗಿತ್ವವನ್ನೇ ಶಿಥಿಲಗೊಳಿಸಲಾಗ್ತಿದೆ. ಅಂದರೆ ಜನರು ಕನಿಷ್ಟ ವಿರೋಧವನ್ನೂ ವ್ಯಕ್ತಪಡಿಸುವ ಹಕ್ಕು ಕಳೆದುಕೊಳ್ಳಲಿದ್ದಾರೆ. ಇಟ್ಸ್ ದ ಮ್ಯಾಟರ್ ಆಫ್ ಬ್ಯುಸಿನೆಸ್ ಹಾಗಾಗಿ ಸಬ್ ಚಲ್ತಾ ಹೈ.

ಕಸದಿಂದ ಇಂದನ ತಯಾರಿಸಬಲ್ಲ ಮಿಶ್ರತ್ಯಾಜ್ಯವನ್ನು ದಹಿಸುವ ಘಟಕವೊಂದನ್ನು ತೆರೆಯಲು ಅನುಮತಿ ನೀಡಿದರೆ ನಿಮ್ಮ ಮನೆಯ ಹಿತ್ತಿಲಿನಲ್ಲಿ ಕ್ಯಾನ್ಸರ್ ಕಾರಕ ಗಿಡವನ್ನು ನೆಟ್ಟಂತೆಯೇ. ಈ WTE (waste to energy) ಘಟಕ ಬಿಡುಗಡೆ ಮಾಡುವ ಡೈ ಆಕ್ಸಿನ್ ಗಳು ಮಾನವನ ದೇಹದೊಳಗೆ ಕ್ಯಾನ್ಸರ್ ಉತ್ಪತ್ತಿ ಮಾಡುತ್ತವೆ. ನರವ್ಯವಸ್ಥೆಯನ್ನು, ಅಂತಃಸ್ರಾವಿಕ ವ್ಯವಸ್ಥೆಯನ್ನು ಸಂಪೂರ್ಣ ನಾಶ ಮಾಡುತ್ತವೆ. ದೆಹಲಿಯ ಓಕ್ಲಾ ಆಗಲೀ, ಬೆಂಗಳೂರಿನ ಚಿಕ್ಕನಾಗಮಂಗಲದಲ್ಲಾಗಲೀ ಇಂತದ್ದೊಂದು ವಿಷವಾಯು ಹೊರಸೂಸುವ ಘಟಕ ಶುರುವಾದರೆ ನೀವು ಕ್ಯಾನ್ಸರ್ ಖಾಯಿಲೆಯನ್ನು ಮನೆಗೇ ಆಮಂತ್ರಿಸಿದಂತೆ. ಈಗ ಆಲೋಚಿಸಿ ಇಂತಹ ದೊಡ್ಡ ಪ್ರಮಾಣದ ತ್ಯಾಜ್ಯ ಸುಡುವ ಘಟಕವೇನಾದರೂ ಅರಣ್ಯ ಪರಿಸರದ ಬಫರ್ ಜೋನ್ ನಲ್ಲಿ ಪ್ರಾರಂಭವಾದರೆ ಅತ್ತ ಕಾಡುಪ್ರಾಣಿಗಳನ್ನೂ ವಿಷವಿಕ್ಕಿ ಕೊಲ್ಲುತ್ತದೆ, ಇತ್ತ ಮನುಷ್ಯನೂ ಸಾಯುತ್ತಾನೆ. ನಮ್ಮ ಮಕ್ಕಳಿಗೆ ಈ ದುರವಸ್ಥೆ ಬೇಕಾ? ಪ್ರಶ್ನಿಸಬೇಕೋ ಬೇಡವೋ?

ದೆಹಲಿಯ ಓಕ್ಲಾ ತ್ಯಾಜ್ಯದಿಂದ ಇಂದನ ಉತ್ಪಾದಿಸಬಲ್ಲ ಘಟಕದ ಕಾರ್ಯಾಚರಣೆಯ ಕುರಿತಂತೆ ಕೇಂದ್ರದ ಪರಿಸರ ಇಲಾಖೆಗೆ 2018ರಲ್ಲಿ ಶೋಕಾಸ್ ನೋಟೀಸ್ ನೀಡಲಾಗಿತ್ತು. ಪಟ್ಟಣದ ತ್ಯಾಜ್ಯ ಸುಡುವ ಮಿತಿಯ ಅಕ್ರಮಗಳು, ಹೆಚ್ಚುತ್ತಿದ್ದ ವಾಯು ಮಾಲಿನ್ಯ, ತ್ಯಾಜ್ಯ ಸುಡುವ ಪ್ರಮಾಣವನ್ನು ಹೆಚ್ಚಳಗೊಳಿಸಿದ್ದು, ಹೊಸ ಚಿಮಣಿ ನೆಲೆಗೊಳಿಸಿದ್ದು, ವಾತಾವರಣದ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಲಾಗಿದ್ದು ಇತ್ಯಾದಿಗಳ ಬಗ್ಗೆ ವಿವರಣೆ ಕೇಳಲಾಗಿತ್ತು. ಕೇಂದ್ರ ಪರಿಸರ ಇಲಾಖೆ ಆ ನೋಟೀಸ್ ಗೆ ಉತ್ತರ ನೀಡಿತೋ ಇಲ್ಲವೋ, ತನ್ನ 2020ರ ಏನ್ವಿರಾನ್ ಮೆಂಟ್ ಇಂಪ್ಯಾಕ್ಟ್ ಅಸೆಸ್ ಮೆಂಟ್ ಕರಡನ್ನೇ ಬದಲಾಯಿಸಲು ಹೊರಟಿತು. ಈ ಹೊಸ ಕರಡು ಜಾರಿಗೆ ಬಂದರೆ ಯಾವ ಸಾರ್ವಜನಿಕರು ಪ್ರಶ್ನಿಸುವಂತೆಯೇ ಇಲ್ಲ.

ನಿಮಗೆ ರಾಜ್ಯ ಸರ್ಕಾರ ನಮ್ಮ ಬನ್ನೇರುಘಟ್ಟ ರಾಷ್ಟ್ರೀಯ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ (eco sensitive zone)ವನ್ನು 100 ಚದರ ಕಿಲೋಮೀಟರ್ ಕಡಿಮೆ ಮಾಡಿದ್ದು ನೆನಪಿರಬಹುದು. ಇದರ ಹಿಂದಿರುವುದು ಪ್ರಾಪರ್ಟಿ ಡೆವಲಪರ್ ಲಾಭಿ, ಕಲ್ಲು ಕ್ವಾರಿ ಗಣಿಗಾರಿಕೆಯ ಲಾಭಿ ಹಾಗೂ ರಿಯಲ್ ಎಸ್ಟೇಟ್ ಮತ್ತು ಜಂಗಲ್ ರೆಸಾರ್ಟ್ ಟೂರಿಸಂ ಲಾಭಿ. ಬನ್ನೇರುಘಟ್ಟದ ಕುರುಚಲು ಕಾಡುಗಳು ರಾಜ್ಯ ರಾಜಧಾನಿ ಬೆಂಗಳೂರಿನ ಶ್ವಾಸಕೋಶ. ಆದರೆ ಬನ್ನೇರುಘಟ್ಟದ ಕೋರ್ ವಲಯವಾದ ಹಾರೋಹಳ್ಳಿ ವನ್ಯಜೀವಿ ವಲಯ ಮತ್ತು ಆನೇಕಲ್ ವನ್ಯಜೀವಿ ವಲಯಗಳಲ್ಲಿ ಅದೆಷ್ಟು ಅಕ್ರಮ ಕಲ್ಲುಕ್ವಾರಿಗಳು ಕೆಲಸ ಮಾಡುತ್ತಿವೆ ಅನ್ನುವ ಅಂದಾಜಿದೆಯಾ. ಇನ್ನುಮುಂದೆ ಇವೆಲ್ಲವೂ ಸಕ್ರಮವಾಗುತ್ತವೆ. ಇಲ್ಲಿನ ಈಗಾಗಲೇ ಛಿದ್ರಗೊಂಡಿರುವ ಆನೇ ಕಾರಿಡಾರ್ ಮತ್ತಷ್ಟು ಛಿದ್ರವಾಗುತ್ತದೆ. ವಿನಾಕಾರಣ ಪಾಪದ ವನ್ಯಜೀವಿಗಳು ಸಾಯುತ್ತವೆ. ಈಗಿರುವ ಸುಂದರ ಪರಿಸರ ಸರ್ವನಾಶವಾಗುತ್ತದೆ. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತದೆ. ಕ್ರಮೇಣ ಬನ್ನೇರುಘಟ್ಟದ ಸಮೃದ್ಧ ಕಾಡು ಒತ್ತುವರಿಯಾಗಿ ಮತ್ತಷ್ಟು ಅಕ್ರಮ ಚಟುವಟಿಕೆಗಳು ಶುರುವಾಗುತ್ತವೆ. ಸರ್ಕಾರದ ಹೊಸ ಕರಡು ನೀತಿ ಜಾರಿಯಾದರೆ ನಮ್ಮ ಶ್ವಾಸಕೋಶಕ್ಕೆ ನಾವೇ ಬೆಂಕಿ ಇಟ್ಟುಕೊಂಡ ಹಾಗಾಗುತ್ತದೆ ಅಷ್ಟೆ.

“ಜಂಗಲ್ ನದಿ ಕಿ ಮಾ” (Forests are mother of River) ಕಾಡು ನದಿಯ ತಾಯಿ. ಇದು ನಾವು ಕಲಿತ ಪರಿಸರ ವಿಜ್ಞಾನ. ಇದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ಯಾ? ನಿಮಗೆ ಅಚ್ಚರಿಯಾಗಬಹುದು ಕಳೆದ ಎರಡು ದಶಕಗಳಲ್ಲಿ ಒಂದು ಗೋವಾ ರಾಜ್ಯದ ನಾಲ್ಕು ಪಟ್ಟು ದೊಡ್ಡ ಪ್ರಮಾಣದಷ್ಟು ಕಾಡುಗಳನ್ನು ವಿವಿಧ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಸರ್ವನಾಶ ಮಾಡಲಾಗಿದೆ. ವರ್ಷಾ ವರ್ಷ ಹೀಗೆ ವ್ಯಾಪಕವಾಗಿ ಕಾಡುಗಳನ್ನು ಕೊಲ್ಲುತ್ತಿದ್ದರೆ ನದಿ ಬತ್ತದೆ ಇನ್ನೇನಾಗುತ್ತದೆ. ಪ್ರವಾಹ ಸೃಷ್ಟಿಯಾಗದೇ ಮತ್ತೇನಾಗುತ್ತದೆ. ಭೂಕುಸಿತ, ಮಣ್ಣು ಸವಕಳಿ, ಕಡಲ್ಕೊರೆತ, ಅತಿವೃಷ್ಟಿ-ಅನಾವೃಷ್ಟಿ ಇವೆಲ್ಲಕ್ಕೂ ಅರಣ್ಯ ನಾಶವೇ ಕಾರಣ ಅನ್ನುವುದು ಸಾಮಾನ್ಯ ಜ್ಞಾನ. ಆದರೆ ಆಳುವ ಸರ್ಕಾರಗಳಿಗೆ ಈ ಕಾಮನ್ ಸೆನ್ಸ್ ಇಲ್ಲವಲ್ಲ ಅದೇ ದುರಂತ. ನಿಮಗೆ ಉದಾಹರಣೆ ಬೇಕಿದ್ದರೆ ಶಿವಮೊಗ್ಗದಿಂದ ತೀರ್ಥಹಳ್ಳಿವರೆಗಿನ ರಸ್ತೆಯಲ್ಲಿ ಹಾದು ಹೋಗಿ. ಈಗೊಂದು 5 ವರ್ಷಗಳ ಹಿಂದೆ ಅಲ್ಲಿ ಎಡಭಾಗದಲ್ಲಿ ಹರಿಯುತ್ತಿದ್ದ ತುಂಗೆಯ ಹರಿವಿನ ಓಘ ಕಾಣಿಸುತ್ತಿರಲಿಲ್ಲ, ಕನಿಷ್ಟ ಸದ್ದೂ ಕೇಳುತ್ತಿರಲಿಲ್ಲ. ಈಗ ತುಂಗೆಯ ದಂಡೆಯ ಅಷ್ಟೂ ಬಫರ್ ಜೋನ್ ಕಾಡನ್ನು ಕಡಿದು ಮುಗಿಸಲಾಗಿದೆ. ತುಂಗೆ ಮುನಿಯದೇ ಇನ್ನೇನು ಮಾಡುತ್ತಾಳೆ. ಇಂತಹ ಟಿಂಬರ್ ಮಾಫಿಯಾ ನಾಳೆ ರಾಜಮಾರ್ಗದಲ್ಲೇ ಬಹಿರಂಗವಾಗಿ ಕಾರ್ಯಾಚರಣೆ ನಡೆಸುತ್ತದೆ. ಇದು ನಮಗೆ ಬೇಕಾ?

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾಹಿತಿಯಂತೇ 2009-10ರಿಂದ 2016-17ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಒಟ್ಟು 655 ಆನೆಗಳು ರಸ್ತೆ ಅಪಘಾತದಲ್ಲಿ, ರೈಲಿಗೆ ಸಿಲುಕಿ ಕೊಲ್ಲಲ್ಪಟ್ಟಿವೆ. ಅಂದರೆ ಪ್ರತಿ ನಾಲ್ಕು ದಿನಗಳಿಗೆ ಒಂದು ಆನೆಯಂತೆ ಸರಣಿ ಮಾರಣಹೋಮ ನಡೆದಿದೆ. ಈಗಿನ ಇಐಎ-2020 ಕರಡಿನಲ್ಲಿ ಸಾರ್ವಜನಿಕ ಅಹವಾಲುಗಳಿಗೆ ಅನುಮತಿ ಇಲ್ಲದೇ 100 ಕಿಲೋಮೀಟರ್ ವರೆಗಿನ ಹೆದ್ದಾರಿಯನ್ನು 70 ಮೀಟರ್ ಅಗಲ ಮಾಡುವ ಪ್ರಸ್ತಾವನೆಯಿದೆ. ಇದೇನಾದರೂ ಜಾರಿಯಾಗಿಬಿಟ್ಟರೇ ಭವಿಷ್ಯದಲ್ಲಿ ನಿತ್ಯವೂ ಆನೆಗಳ ಸಾಮೂಹಿಕ ಹತ್ಯೆಯೇ ಆಗಿಬಿಡುತ್ತದೆ. ಗಜ-ಮಾನವ ಸಂಘರ್ಷಕ್ಕೆ ನಿಯಂತ್ರಣವೇ ಇರುವುದಿಲ್ಲ. ಈಗ ಯೋಚಿಸಿ ಹೊಸ ಕರಡನ್ನು ವಿರೋಧಿಸಬೇಕೋ ಬೇಡವೋ?

ವೇದಾಂತಂಗಳ್ ಹೆಸರು ಕೇಳಿದ್ದೀರಾ? ತಮಿಳುನಾಡಿನ ಚಂಗಳ್ ಪೇಟ್ ಜಿಲ್ಲೆಯಲ್ಲಿರುವ ಭಾರತದ ಅತ್ಯಂತ ಹಳೆಯ 30 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಸಂರಕ್ಷಿತ ಪಕ್ಷಿಧಾಮ. ಬ್ರಿಟೀಷರು ಇಲ್ಲಿ ಆಳ್ವಿಕೆ ಮಾಡುತ್ತಿದ್ದ ಕಾಲದಿಂದಲೂ ಅಂದರೆ 1788ರಲ್ಲಿ ಚಂಗಳ್ ಪೇಟ್ ಜಿಲ್ಲಾ ಕಲೆಕ್ಟರ್ ಇಂಗ್ಲೀಷ್ ಮನುಷ್ಯ ಇದನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದ ಅವಧಿಯಿಂದಲೂ ಇದು ಸಂರಕ್ಷಿತಾರಣ್ಯವಾಗಿ ಉಳಿದುಕೊಂಡಿದೆ. ಇಲ್ಲಿನ ಸುತ್ತಮುತ್ತಲಿನ ಭತ್ತದ ಬೆಳೆಗಾರ ರೈತರೂ ಸಹ ಈ ಪಕ್ಷಿಧಾಮದಿಂದ ಅಪಾರ ಲಾಭ ಪಡೆದುಕೊಂಡಿದ್ದಾರೆ. ಇಲ್ಲಿನ ಹಕ್ಕಿಗಳು ವಿಸರ್ಜಿಸುವ ಹಿಕ್ಕೆಗಳಲ್ಲಿ ಬೆಳೆಗೆ ಬೇಕಾದ ಅತ್ಯಂತ ಫಲವತ್ತಾದ ನೈಟ್ರೋಜನ್ ಮತ್ತು ಪಾಸ್ಫರಸ್ ಇದೆ. ಇಲ್ಲಿನ ಸುತ್ತಮುತ್ತಲಿನ 250 ಹೆಕ್ಟೇರ್ ರೈತರು ಈ ಸಹಜ ನೈಸರ್ಗಿಕ ಗೊಬ್ಬರ ಸಹಾಯದಿಂದ ಉತ್ತಮ ಕೃಷಿ ಮಾಡುತ್ತಿದ್ದಾರೆ. ಈ ಶುದ್ಧನೀರಿನ ಪಕ್ಷಿಧಾಮದಲ್ಲಿ ಒಂದು ಸೀಸನ್ನಿನಲ್ಲಿ 20 ಸಾವಿರಕ್ಕೂ ಅಧಿಕ ವಲಸೆ ಪಕ್ಷಿಗಳು ಬರುತ್ತವೆ. ಮೊಟ್ಟೆ ಮರಿ ಮಾಡಿ ನೆಮ್ಮದಿಯಿಂದ ಬದುಕುತ್ತಿವೆ. ಈ ಪಕ್ಷಿಧಾಮ ಹೊಸ ಕರಡು ಜಾರಿಯಾದರೆ ಇತಿಹಾಸ ಸೇರುತ್ತದೆ.

‘ಸನ್ ಫಾರ್ಮಾಸ್ಯುಟಿಕಲ್’ ಸಂಸ್ಥೆಯ ಹೆಸರು ಕೇಳಿದ್ದೀರಲ್ಲ, ಆ ಸಂಸ್ಥೆಯ ರೆಡ್ ಕ್ಯಾಟಗರಿಗೆ ಸೇರುವ ಉದ್ಯಮವೊಂದನ್ನು ವೇದಾಂತಂಗಳ್ ಪಕ್ಷಿಧಾಮದ ಮಗ್ಗುಲಿನಲ್ಲೇ ಸ್ಥಾಪಿಸಲು ಮುಂದಾಗಿದೆ. ಈ ಶುದ್ಧ ನೀರಿಗೆ ಪರಮ ಕಾರ್ಕೋಟಕ ವಿಷ ಬಿಡುಗಡೆ ಮಾಡುತ್ತದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಈ ಔಷದ ಉತ್ಪಾದನಾ ಕಂಪೆನಿ ಜನವಸತಿ ಪ್ರದೇಶದಿಂದ ಕನಿಷ್ಟ 10 ಕಿಲೋಮೀಟರ್ ದೂರದಲ್ಲಿರಬೇಕು. 2006ರ ಮೂಲ ಕರಡೂ ಸಹ ಅದನ್ನೇ ಹೇಳುತ್ತದೆ. ಆದರೆ ಈಗ ತಿದ್ದುಪಡಿಯಾಗಿ ಜಾರಿಯಾಗುವ ನೂತನ ನಿಯಮಾವಳಿಗಳು ಸನ್ ಫಾರ್ಮಾಗೇ ಪಕ್ಷಿಧಾಮದ ಹೆಗಲಿನಲ್ಲೇ ಘಟಕ ಸ್ಥಾಪನೆಗೆ ಅನುಮತಿ ನೀಡುತ್ತದೆ. ಅರಣ್ಯ, ಪರಿಸರ, ನದಿ, ಜಲಮೂಲ, ವನ್ಯಜೀವಿ, ಪಕ್ಷಿಧಾಮ ಯಾವುದೂ ಉಳಿಯುವುದು ಕೇಂದ್ರ ಪರಿಸರ ಸಚಿವಾಲಯಕ್ಕೆ ಬೇಕಿಲ್ಲವೇ? ನಮ್ಮ ಮುಂದಿನ ತಲೆಮಾರಿಗೆ ವೇದಾಂತಂಗಳ್ ಪಕ್ಷಿಧಾಮ ಮತ್ತು ಅಲ್ಲಿನ ರೈತರ ನೈಸರ್ಗಿಕ ಭತ್ತದ ಬೆಳೆ ಬೇಕೋ ಅಥವಾ ಸನ್ ಫಾರ್ಮಾದಂತಹ ವಿಷ ಬೇಕೋ? ಕನಿಷ್ಟ ಬ್ರಿಟೀಶ್ ಅಧಿಕಾರಿಗಿದ್ದ ವಿವೇಚನೆ, ದೂರದೃಷ್ಟಿ ನಮ್ಮ ಸರ್ಕಾರಕ್ಕಿಲ್ಲವಲ್ಲ.

ಡೇಹಿಂಗ್ ಪಟ್ಕಾಯ್ ಅನ್ನುವ ವನ್ಯಜೀವಿ ಸಂರಕ್ಷಿತಾರಣ್ಯದ ಮಗ್ಗುಲಿನಲ್ಲೇ ಕೋಲ್ ಇಂಡಿಯಾ ಲಿಮಿಟೆಡ್ ಅನ್ನುವ ಸರ್ಕಾರಿ ಸಂಸ್ಥೆ ಕಳೆದ 16 ವರ್ಷಗಳಿಂದ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸಿ ಲೂಟಿ ಮಾಡುತ್ತಾ ಬಂದಿತು. ಇದು ಹಗರಣಗಳ ಪಟ್ಟಿಗೂ ಸೇರಿತ್ತು. ಈಗ ಅದೇ ಕಂಪೆನಿಗೆ ಹೊಸ ಇಐಎ-2020 ನೂತನ ನಿಯಮಾವಳಿಗಳು ಮುಂದಿನ 50 ವರ್ಷಗಳ ಲೀಸ್ ಗೆ ಅನುಮತಿ ನೀಡಲಿದೆ. ಅಂದರೆ ಮುಂದಿನ 50 ವರ್ಷ ಮತ್ತಷ್ಟು ಕೋಲ್ ಮೈನಿಂಗ್ ಹೆಸರಿನಲ್ಲಿ ಲೂಟಿ ಮಾಡಲು ಬೆಳ್ಳಿ ಬಟ್ಟಲಿನಲ್ಲಿ ತಾಂಬೂಲ ನೀಡಿದಂತೆ. ಡೇಹಿಂಗ್ ಪಟ್ಕಾಯ್ ಭಾರತದ ಅತಿ ದೊಡ್ಡ ಉಷ್ಣವಲಯದ ತಗ್ಗುಪ್ರದೇಶದ ಮಳೆಕಾಡು ಪರಿಸರ. ಇದು ಬೆಂಗಾಲ್ ಹುಲಿಯ ತವರು, ಏಷ್ಯನ್ ಆನೆ, ಸಣ್ಣ ಕರಿ ಮುಸುಡಿಯ ಅಪರೂಪದ ಅಳಿವಿನಂಚಿನ ಗಿಬ್ಬನ್ ಜಾತಿಯ ಕೋತಿಗಳು ಮತ್ತು ಇಂಡಿಯನ್ ಚಿರತೆಗಳ ಸಹಜ ಆವಾಸಸ್ಥಾನ. ಭಾರತದಲ್ಲಿ ಮತ್ತೇಲ್ಲೂ ಕಾಣದ 100ಕ್ಕೂ ಹೆಚ್ಚು ಜಾತಿಯ ಆರ್ಕಿಡ್ ಸಸ್ಯಗಳು ಇಲ್ಲಿ ಮಾತ್ರ ಇವೆ. ನಾರ್ತ ಈಸ್ಟ್ ಕೋಲ್ ಫೀಲ್ಡ್ (NECF) ಎನ್ನುವ ಭಾರತ ಸರ್ಕಾರದ ಅಂಗಸಂಸ್ಥೆ 2003ರವರೆಗೆ ಅನುಮತಿ ಪಡೆದುಕೊಂಡು ಡೇಹಿಂಗ್ ಪಟ್ಕಾಯ್ ನಲ್ಲಿ ಮೈನಿಂಗ್ ನಡೆಸುತ್ತಿತ್ತು. 2003ರ ನಂತರ ಅದರ ಪರವಾನಗಿ ಮುಗಿದ ನಂತರವೂ ಕಲ್ಲಿದ್ದಲು ಗಣಿಗಾರಿಕೆ ಮುಂದುವರೆಯಿತು. ಅಸ್ಸಾಂ ಅರಣ್ಯ ಇಲಾಖೆ ಈ ಸಂಸ್ಥೆಯ ಮುಖಕ್ಕೆ ಮಂಗಳಾರತಿ ಎತ್ತಿ 43.25 ಕೋಟಿ ದಂಡ ವಿಧಿಸಿತು. ಆದರೆ ಪ್ರಧಾನಿಗಳೇ ಚೇರ್ ಮನ್ ಆಗಿರುವ ರಾಷ್ಟ್ರೀಯ ವನ್ಯಜೀವಿ ಬೋರ್ಡ್ ಮೀಟಿಂಗ್ ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಎನ್ಇಸಿಎಫ್ ಗೆ ಮತ್ತೆ ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಿತು. ಒಂದು ವೇಳೆ ಇಐಎ-2020 ತಿದ್ದುಪಡಿ ಜಾರಿಯಾದರೆ ಇದೇ ಸಂಸ್ಥೆಗೆ 50 ವರ್ಷಗಳ ಕಾಲ ಲೀಸ್ ಮುಂದುವರೆಸಲಾಗುತ್ತದೆ. ಅಸ್ಸಾಂನ ಈ ಹೆರಿಟೇಜ್ ಮಳೆಕಾಡು ಸರ್ವನಾಶ, ಅಭಿವೃದ್ಧಿ ಸಾಧಿಸುವುದಲ್ಲ ಈ ಸಂಸ್ಥೆಯಿಂದ ಮತ್ತಷ್ಟು ಹಗರಣಗಳನ್ನು ನಿರೀಕ್ಷಿಸಬಹುದಷ್ಟೆ. ನಮಗೆ ಡೇಹಿಂಗ್ ಪಟ್ಕಾಯ್ ಸುಂದರ ಉಷ್ಣವಲಯದ ಮಳೆಕಾಡು ಪರಿಸರ ವನ್ಯಜೀವಿ ಮತ್ತು ಆರ್ಕಿಡ್ ಬೇಕೋ ಅಥವಾ ಎನ್ಇಸಿಎಫ್ ನಂತಹ ದಗಲ್ಬಾಜಿ ಕಂಪೆನಿಗಳ ಅಕ್ರಮಗಳು ಬೇಕೋ?

ಕರ್ನಾಟಕದ ಬೆಳಗಾವಿಯಿಂದ ಗೋವಾದ ಪಣಜಿವರೆಗಿನ ರಸ್ತೆ ಅಗಲೀಕರಣಕ್ಕೆ 1 ಲಕ್ಷಕ್ಕೂ ಅಧಿಕ ಮರಗಳ ಕಡಿತಲೆ ಆಗಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿಕೊಂಡಿದ್ದು 84 ಕಿಲೋಮೀಟರ್ ಉದ್ದದ ರಸ್ತೆ ಅಗಲೀಕರಣ ಎಂದು, ಆದರೆ ಅಸಲು ಇರುವುದು 153 ಕಿಲೋಮೀಟರ್ ಉದ್ದ. ಟಿನೈ ಘಟ್ಟದಂತಹ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡುಗಳಿರುವ ಸೂಕ್ಷ್ಮ ಪರಿಸರ ವಲಯದಲ್ಲಿ ಮರ ಕಡಿಯಲು ಅಥವಾ ರಸ್ತೆ ಅಗಲೀಕರಣಗೊಳಿಸಲು ಕೇಂದ್ರದ ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದ್ಯಾವುದನ್ನೂ ಮಾಡದೆ ಲಕ್ಷಕ್ಕೂ ಹೆಚ್ಚಿನ ಹಳೆಯ ಮರಗಳನ್ನು ಕಡಿದು ಉರುಳಿಸಿದೆ. 2006ರ ನಿಯಮಾವಳಿಯ ಪ್ರಕಾರ 100 ಕಿಲೋಮೀಟರ್ ಗಿಂತ ಹೆಚ್ಚಿನ ರಸ್ತೆಯನ್ನು 70 ಮೀಟರ್ ಅಗಲೀಕರಣ ಗೊಳಿಸಬೇಕಿದ್ದರೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಅತ್ಯಗತ್ಯ. ಆದರೆ ಈಗ ಶಿಥಿಲೀಕರಣಗೊಂಡು ಹೊಸರೂಪದಲ್ಲಿ ಬರುತ್ತಿರುವ ಇಐಎ-2020 ಹೊಸ ಕರಡಿನಲ್ಲಿ ಇದ್ಯಾವುದಕ್ಕೂ ಅವಕಾಶವಿಲ್ಲ. ಮುಂದೆ ಘಟ್ಟಗಳಲ್ಲಿ ಭೂಕುಸಿತ ಉಂಟಾದರೆ ಅಥವಾ ನೈಸರ್ಗಿಕ ವಿಕೋಪ ಸಂಭವಿಸಿದರೆ ಕೇಂದ್ರದ ಪರಿಸರ ಇಲಾಖೆ ನೇರ ಹೊಣೆ ಹೊರುತ್ತದಾ? ಹೊಣೆ ಹೊತ್ತರೂ ಆಗಬಹುದಾದ ಪ್ರಾಕೃತಿಕ ಅನಾಹುತಗಳ ಭೀಕರತೆಯ ಅರಿವಾದರೂ ಈ ಸಚಿವಾಲಯಕ್ಕೆ ಇದೆಯಾ?

2018-19ರಲ್ಲಿ ಕೇರಳದಲ್ಲಿ ಮರಣ ಸದೃಶ್ಯ ಪ್ರವಾಹ ಮತ್ತು ಭೂಕುಸಿತ ಸಂಭವಿಸಿ ಸಾವಿರಾರು ಜನ ನಿರಾಶ್ರಿತರಾದರು, ನೂರಾರು ಜನ ಪ್ರಾಣ ಕಳೆದುಕೊಂಡರು. ಕಾರಣವೇನೆಂದು ಹುಡುಕುವ ಪ್ರಯತ್ನ ಮಾಡಿದೆವಾ? ಕವಲಪ್ಪಾರ ಮತ್ತು ಪುತುಮಾಲಾ ಎನ್ನುವ ಎರಡು ಗ್ರಾಮಗಳು ಸರ್ವನಾಶವಾದವು ಕಾರಣವೇನು ಗೊತ್ತಾ? ಈ ಗ್ರಾಮಗಳಿಂದ 10 ಕಿಲೋ ಮೀಟರ್ ವಿಸ್ತೀರ್ಣದಲ್ಲಿ 12 ಅಕ್ರಮ ಕಲ್ಲುಕ್ವಾರಿಗಳು ಅರಣ್ಯವನ್ನು ನಾಶ ಮಾಡಿ ಗುಡ್ಡ ಕಡಿದು ಪ್ರಕೃತಿಯ ಮುನಿಸಿಗೆ ಕಾರಣವಾಯಿತು. ಕೇರಳದ ಬರೋಬ್ಬರಿ 1200 ಪ್ರದೇಶಗಳನ್ನು ಭೂಕುಸಿತ ಸಂಭವಿಸುವ ಅಪಾಯಕಾರಿ ವಲಯಗಳೆಂದು ಗುರುತಿಸಲಾಗಿದೆ. ಪರಿಸರ ಸಂರಕ್ಷಿತಾರಣ್ಯ ಮತ್ತು ಪರಿಸರ ಸೂಕ್ಷ್ಮ ವಲಯದಲ್ಲಿ ಇಂತಹ ನೂರಾರು ಅಕ್ರಮ ಕಲ್ಲಿಕ್ವಾರಿಗಳು ಅವ್ಯಾಹತವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಇವುಗಳಲ್ಲಿ ಯಾವುವೂ ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ. ಕೇರಳದ ಪತ್ತನಮತಿಟ್ಟು ಪ್ರದೇಶದಲ್ಲಿ 520 ಕಲ್ಲು ಕ್ವಾರಿಗಳು, 38 ಜಲ್ಲಿ ಪುಡಿ ಮಾಡುವ ಘಟಕಗಳು ಕೆಲಸ ಮಾಡುತ್ತಿವೆ. ಇವುಗಳ ಈ ಅಕ್ರಮ ಕಾರ್ಯಾಚರಣೆಯಿಂದಾಗಿ ಪ್ರಕೃತಿಯ ಸಹಜ ಸ್ವಾಭಾವಿಕ ಇಂಗುವಿಕೆಯ ವ್ಯವಸ್ಥೆ ನಾಶವಾಗಿದೆ. ಪ್ರವಾಹ ಸಂಭವಿಸದೇ ಇನ್ನೇನಾಗುತ್ತದೆ. ಇಐಎ-2020 ಜಾರಿಯಾದರೇ, 5 ಹೆಕ್ಟೇರ್ ವರೆಗಿನ ಕಲ್ಲುಕ್ವಾರಿಗಳಿಗೆ ಸಾರ್ವಜನಿಕ ಅಹವಾಲಿಗೆ ಅವಕಾಶವಿಲ್ಲದಂತೆ ಅನುಮತಿ ನೀಡಲಾಗುತ್ತದೆ. ನಾವು ಭವಿಷ್ಯದಲ್ಲಿ ಇನ್ನಷ್ಟು ಭೂಕುಸಿತದ ಅಪಾಯಗಳನ್ನು ನಿರೀಕ್ಷಿಸುತ್ತಾ ಕೂರಬೇಕಾ?

ನಮ್ಮದೇ ಕೊಡಗಿನಲ್ಲಿ ಕಳೆದೆರಡು ವರ್ಷಗಳಿಂದ ಭೀಕರ ಜಲಪ್ರವಾಹ ಮತ್ತು ಭೂಕುಸಿತ ಸಂಭವಿಸುತ್ತಿದೆ. 4100 ಚದರ ಕಿಲೋಮೀಟರ್ ವಿಸ್ತಾರದ ಪರ್ವತ ಮತ್ತು ಅರಣ್ಯಗಳ ಜಿಲ್ಲೆ ಕೊಡಗಿನಲ್ಲಿ ರಸ್ತೆ ಅಗಲೀಕರಣ ಮತ್ತು ಹೊಸ ರೈಲ್ವೇ ಮಾರ್ಗ ನಿರ್ಮಾಣ ಮುಂತಾದ ಯೋಜನೆಗಳಿಗೆ ನೀಲನಕ್ಷೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಅಕ್ರಮ ರೆಸಾರ್ಟ್, ಹೋಂ ಸ್ಟೇ, ಕಾಫಿ ಪ್ಲಾಂಟೇಷನ್ ಹೆಸರಿನಲ್ಲಿ ವ್ಯಾಪಕವಾಗಿ ಕಾಡುನಾಶವಾಗಿದೆ. ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಯೋಜನೆಯಿದೆ. ಕಾವೇರಿ ನದಿಪಾತ್ರದ ಕಾಡುಗಳು ಟಿಂಬರ್ ಮಾಫಿಯಾಗೆ ಬಲಿಯಾಗಿದೆ. ಕಾವೇರಿ, ಪಯಸ್ವಿನಿ, ಬಾರಂಗಿ, ಪಯಸ್ವಿನಿ, ವಲಪಟ್ಟಣಂ ಮುಂತಾದ ನದಿಗಳು ಬಫರ್ ಜೋನ್ ಕಳೆದುಕೊಂಡು ನಿತ್ಯ ಕಲುಷಿತಗೊಂಡು ನರಳುತ್ತಿವೆ. ಡ್ಯಾಂ ನಿರ್ಮಾಣ ಒಂದಷ್ಟು ಕಾಡುಮೇಡುಗಳನ್ನು ಹಿನ್ನೀರಿನಲ್ಲಿ ಮುಳುಗಿಸಿದೆ. ಈಗ ಗುಡ್ಡಗಾಡು ಪ್ರದೇಶದಲ್ಲಿ ಅವೈಜ್ಞಾನಿಕ ರಸ್ತೆ ಅಗಲೀಕರಣ ಶುರುವಾದರೆ ಕಾವೇರಿ ತೀರದ ಕೊಡವರ ನಾಡನ್ನು ಆ ಇಗ್ಗುತಪ್ಪ ದೇವರೂ ಕಾಪಾಡಲಾರ. ಇಐಎ-2020ಯ 70 ಮೀಟರ್ ರಸ್ತೆ ಅಗಲೀಕರಣದ ನೀತಿ ಮುಖ್ಯವೋ ಅಥವಾ 5.5 ಲಕ್ಷ ಕೊಡಗಿನ ಮಂದಿಯ ನೆಮ್ಮದಿ ಮುಖ್ಯವೋ ಸರ್ಕಾರ ನಿರ್ಧರಿಸಲಿ.

ಇನ್ನು ದಕ್ಷಿಣ ಕನ್ನಡದ ನೆಮ್ಮದಿ ಹಾಳು ಮಾಡಿದ ಎತ್ತಿನ ಹೊಳೆ ಯೋಜನೆ ಗೊತ್ತಲ್ಲ ಸಕಲೇಶಪುರದಿಂದ ಶಿರಾಡಿ ಘಾಟ್ ನಲ್ಲಿ ಸಾಗುತ್ತಿದ್ದರೆ ಹಚ್ಚ ಹಸುರು ಕಾಡನ್ನು ಅಡ್ಡ ಹೋಳು ಮಾಡಿದಂತೆ ಗುಡ್ಡ ಕೊರೆಯಲಾಗಿದೆ. ಇಂತಹ ಹತ್ತಾರು ಹೊಸ ಜಲವಿದ್ಯುತ್ ಯೋಜನೆಗಳು ಕಾರ್ಯಗತಗೊಳ್ಳಲಿವೆ. ಒಂದಲ್ಲ ಹತ್ತು ನೇತ್ರಾವತಿ ಕುಮಾರಧಾರ ನದಿಗಳ ನಾಶಕ್ಕೆ ನಾವು ಪ್ರತ್ಯಕ್ಷ ಸಾಕ್ಷಿಯಾಗಬೇಕಾಗುತ್ತದೆ. ಇಂತಹ ಮುನ್ಸೂಚನೆ ನೀಡುತ್ತಿದೆ ಇಐಎ-2020 ತಿದ್ದುಪಡಿ.

ನಮ್ಮದು ನದಿಗಳನ್ನು ಪೂಜ್ಯ ಭಾವನೆಯಿಂದ ನೋಡುವ ಪರಂಪರೆಯ ರಾಷ್ಟ್ರ. ನಾವು ಗಂಗೆಯನ್ನು ಕಂಡಷ್ಟೇ ಪವಿತ್ರ ದೃಷ್ಟಿಯಲ್ಲಿ ಕಾವೇರಿಯನ್ನೂ ಕಾಣುವ ಸಂಸ್ಕೃತಿಯವರು. ಕಾವೇರಿಯ ಪ್ರಮುಖ ಉಪನದಿಯಾದ ಲಕ್ಷ್ಮಣ ತೀರ್ಥ ನಾಶವಾಗಲು ಕಾರಣ ಅಕ್ರಮ ಮರಳು ಗಣಿಗಾರಿಕೆ. ಕರ್ನಾಟಕದ ಎಲ್ಲಾ ನದಿಗಳಿಗೂ ಭವಿಷ್ಯದಲ್ಲಿ ಕಂಟಕಪ್ರಾಯವಾಗಿರುವುದು ಈ ಮರಳು ಗಣಿಗಾರಿಕೆಯೇ. ದೇಶವ್ಯಾಪಿ ಮರಳು ಗಣಿಗಾರಿಕೆಗೆ ನಿಷೇಧ ಹೇರದಿದ್ದರೆ ನಮ್ಮ ಪರಮ ಪಾವನ ನದಿ ಮೂಲಗಳು ಸೊರಗಿ ಕೃಶವಾಗುವುದರಲ್ಲಿ ಅನುಮಾನವೇ ಇಲ್ಲ. ಹೊಸ ಕರಡು ನೀತಿಯಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಬಹುದಾದ ಪ್ರಸ್ತಾವನೆ ಇದೆ. ಕೇಂದ್ರ ಸರ್ಕಾರ ನಮ್ಮ ನದಿಗಳನ್ನು ಸಾಯಿಸುವ ಗುತ್ತಿಗೆ ಪಡೆದುಕೊಂಡಿದೆಯಾ?

ಡಿಸೆಂಬರ್ 2019ರ ಸಿಎಜಿ ವರದಿಯಲ್ಲಿ ನಮ್ಮ ಕಲ್ಲಿದ್ದಲು ಗಣಿಗಾರಿಕೆ ಸಂಸ್ಥೆಗಳು ಹೇಗೆ ಪಾರಿಸರಿಕ ನೀತಿಯನ್ನು ಗಾಳಿಗೆ ತೂರುತ್ತಿದೆ ಎನ್ನುವುದನ್ನು ಉಲ್ಲೇಖಿಸಲಾಗಿದೆ. ಶೆ.60 ರಷ್ಟು ಸಂಸ್ಥೆಗಳು ಮಾತ್ರ ಸಾಮಾನ್ಯ ವಾಯು ನಿಯಂತ್ರಕ ಘಟಕಗಳನ್ನು ಹೊಂದಿವೆ. ಮಹಾನದಿ ಕೋಲ್ ಲಿಮಿಟೆಡ್ ನ ಎಸ್.ಟಿ.ಪಿ (Sewage Treatment Plant) 2008ರಿಂದ 10 ವರ್ಷಗಳ ಕಾಲ ಕೆಲಸ ಮಾಡದೇ ಉಳಿದಿತ್ತು. ಶೇ. 98ರಷ್ಟು ಕೆಳ ಮತ್ತು ಮಧ್ಯಮ ವರ್ಗದ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಪ್ರತಿನಿತ್ಯ ವಿಷವಾಯು ಸೇವಿಸುತ್ತಿದ್ದಾರೆ. 2016ರ ವರದಿ ಪ್ರಕಾರ ವಾಯು ಮಾಲಿನ್ಯದಿಂದ ಸತ್ತ ಮಕ್ಕಳು 1 ಲಕ್ಷ. ನಮ್ಮ ಸರ್ಕಾರ ತನ್ನ ಪ್ರಜೆಗಳಿಗೆ ಉತ್ತಮ ಬದುಕು ಭವಿಷ್ಯ ನೀಡಬೇಕಾ ಅಥವಾ ಸಾವನ್ನು ಬಳುವಳಿಯಾಗಿ ಕೊಡಬೇಕಾ?

ಅಥರ್ವಣ ವೇದದ ಶ್ಲೋಕವೊಂದು ಹೀಗಿದೆ “ಮಾತಾ ಭೂಮಿಃ ಪುತ್ರಾಹಂ ಪೃಥಿವ್ಯಾ” ಇದರ ವಿಸ್ಕೃತ ಅರ್ಥವೇನೆಂದರೆ ಭೂಮಿ ನನ್ನ ತಾಯಿ ನಾನು ಆಕೆಯ ಮಗ. ನಾನು ಪರಿಸರವನ್ನು ಹಾಳುಗೆಡುವುದಿಲ್ಲ. ನದಿಮೂಲಗಳನ್ನು ಕಲುಷಿತಗೊಳಿಸುವುದಿಲ್ಲ. ಸಿಹಿನೀರಿನ ಶುದ್ಧತೆಗೆ ಭಂಗ ತರುವುದಿಲ್ಲ. ಈ ಶ್ಲೋಕವನ್ನು ಅದರ ಅರ್ಥವನ್ನು ನಮ್ಮ ಸನಾತನ ಸಂಸ್ಕೃತಿಯ ಪ್ರತಿಪಾದಕ ಪಕ್ಷದವರಾದ ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರಿಗೆ ತಿಳಿಸಿಕೊಡಿ. ಮೇಲೆ ಹೇಳಿದ ಅಷ್ಟೂ ವಿಚಾರಗಳನ್ನು ತಾಳ್ಮೆಯಿಂದ ಓದಿ. ಈ ಕೆಳಗಿನ ಲಿಂಕ್ ನಲ್ಲಿ ಈ ಯೋಜನೆ ಬೇಡ ಅನ್ನುವ ಅಭಿಯಾನದ ಕೊಂಡಿಯಿದೆ. ಈ ತಿಂಗಳ 30ರ ವರೆಗೆ ಮಾತ್ರ ಸಮಯಾವಕಾಶವಿದೆ. ದೇಶ ನೆಮ್ಮದಿಯಾಗಿರಬೇಕು ಅನ್ನುವ ಅಭಿಲಾಷೆ ನಿಮಗಿದ್ದರೆ ಒಂದು ವಿರೋಧವನ್ನು ವ್ಯಕ್ತಪಡಿಸಿ. ಕೋವಿಡ್-19 ಸಂಕ್ರಮಣ ಕಾಲದಲ್ಲಿ ಸದ್ದಿಲ್ಲದೇ ಕಾರ್ಪೊರೇಟ್ ಮಾಫಿಯಾಗೆ ಅನುಕೂಲ ಮಾಡಲು ಸರ್ಕಾರ ತೀರ್ಮಾನಿಸಿದಂತಿದೆ. ನಾವೀಗ ಸುಮ್ಮನೇ ಉಳಿದರೆ ನಮ್ಮನ್ನು ಕಾಲವೂ ಕ್ಷಮಿಸುವುದಿಲ್ಲ.
ಸೋ “ಸೇ ನೋ ಟು ಇಐಎ-2020” ಕೇಂದ್ರ ಸರ್ಕಾರದ ಪರಿಸರ ಸಚಿವಾಲಯಕ್ಕೆ ಸಚಿವರಿಗೆ ಹೀಗಾದರೂ ವಿವೇಚನೆ ಮೂಡಿದರೆ ನಮ್ಮ ಪುಣ್ಯ. ನಿಮ್ಮ ಸಹಕಾರವಿರಲಿ. ಪ್ರಕೃತಿ ಇದ್ದರಷ್ಟೇ ಬದುಕು ಇಲ್ಲವಾದರೆ ಪರಿಣಾಮ ವಿನಾಶ ಮಾತ್ರ.

–ವಿಭಾ (ವಿಶ್ವಾಸ್ ಭಾರದ್ವಾಜ್)
***

ಪಿಟಿಷನ್ ಸೈನ್ ಮಾಡಲು ಈ ಕೆಳಗಿನ ಕೊಂಡಿ ಒತ್ತಿ.

https://bit.ly/313EoK8

ಮಾಹಿತಿ ಕೃಪೆ:

https://unitedconservationmovement.org/summary-of-citizens-response-on-eia-2020-draft/

https://unitedconservationmovement.org/eia2020-draft-response/online-campaigns/

https://unitedconservationmovement.org/why-we-must-strengthen-eia-2006-and-scrap-the-proposed-eia-2020/

Tags: bangaloreEnvironmentGreeenaryಪರಿಸರ ಉಳಿಸಿ
ShareTweetSendShare
Join us on:

Related Posts

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

by Shwetha
June 15, 2025
0

ಚೋಕರ್ಸ್ ಅಲ್ಲ... ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..! ದಕ್ಷಿಣ ಆಫ್ರಿಕಾ ಮತ್ತು ಕ್ರಿಕೆಟ್ ಆಟಕ್ಕೆ ಶತಶತಮಾನಗಳ ಇತಿಹಾಸವಿದೆ. ಟೆಸ್ಟ್ ಕ್ರಿಕೆಟ್‍ಗೆ ಮಾನ್ಯತೆ ಪಡೆದ ಮೂರನೇ ರಾಷ್ಟ್ರ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಇಸ್ರೇಲ್-ಇರಾನ್ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಕರೆ ಮಾಡಿದ PM ಬೆಂಜಮಿನ್ ನೆತನ್ಯಾಹು

by Shwetha
June 15, 2025
0

ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರಗೊಂಡಿರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

“ಮುಖ್ಯಮಂತ್ರಿಯಾಗಿ ಇರುವಾಗಲೇ ಸಮೀಕ್ಷೆ ಮುಗಿಸಿ!” – ಸಿದ್ದರಾಮಯ್ಯಗೆ ವಿಶ್ವನಾಥ್ ಪ್ರಶ್ನೆ

by Shwetha
June 15, 2025
0

ಬೆಂಗಳೂರು:ರಾಜ್ಯದಲ್ಲಿ ಜಾತಿಗಣತಿ ಮರುಸಮೀಕ್ಷೆ ನಡೆಸುವ ಪ್ರಸ್ತಾವನೆಯ ವಿರುದ್ಧ ಹಿರಿಯ ರಾಜಕೀಯ ನಾಯಕ ಹೆಚ್. ವಿಶ್ವನಾಥ್ ಗಂಭೀರ ಪ್ರಶ್ನೆ ಎಸೆದಿದ್ದಾರೆ. ಡಿಸೆಂಬರ್‌ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿರುವಾಗ,...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

by Shwetha
June 15, 2025
0

ಇಸ್ರೇಲ್-ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಎರಡು ಇಸ್ರೇಲಿ F-35 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ. ಈ ದಾಳಿಯು ಇಸ್ರೇಲ್ ಇರಾನ್ ಮೇಲೆ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಭಾರತೀಯ ಕರಾವಳಿ ರಕ್ಷಣಾ ಪಡೆ ನೇಮಕಾತಿ 2025

by Shwetha
June 15, 2025
0

ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard) ತನ್ನ 2025ನೇ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ನಾವಿಕ್ ಮತ್ತು ಯಂತ್ರಿಕ್ ಹುದ್ದೆಗಳಿಗೆ ಆನ್ಲೈನ್ ಮೂಲಕ 630...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram