ಮಂಗಳೂರು : ಮದ್ಯಪಾನ ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕುಡುಕ ಮಗನೊರ್ವ ತಲವಾರಿನಿಂದ ಹೊಡೆದು ತಂದೆಯನ್ನೇ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ನಡೆದಿದೆ. 65 ವರ್ಷದ ವಾಸು ಮೂಲ್ಯ ಎಂಬವರೇ ಮಗನಿಂದ ಹತ್ಯೆಗೀಡಾದ ದುರ್ದೈವಿಯಾಗಿದ್ದಾರೆ.
ವಾಸು ಅವರು ಇಂದು ಮುಂಜಾನೆ ವಾಕಿಂಗ್ ಗೆ ಹೋಗಿದ್ದ ವೇಳೆ ಅವರನ್ನು ಹಿಂಬಾಲಿಸಿಕೊಂಡು ಬಂದ ಮಗ ದಯಾನಂದ ಮೂಲ್ಯ ತಲವಾರಿನಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಾಸು ಮೂಲ್ಯರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ವೃತ್ತಿಯಲ್ಲಿ ಟ್ಯಾಕ್ಸಿ ಕಾರ್ ಚಾಲಕರಾಗಿದ್ದ ವಾಸು ಮೂಲ್ಯ ಮಗನಿಗೆ ಕುಡಿತ ಬಿಡುವಂತೆ ಬುದ್ಧಿವಾದ ಹೇಳುತ್ತಿದ್ದರು. ಇದರಿಂದಲೇ ಪ್ರತಿದಿನ ತಂದೆಯೊಂದಿಗೆ ಜಗಳವಾಡುತ್ತಿದ್ದ ಮಗ ದಯಾನಂದ ಕೊನೆಗೂ ತಂದೆಯ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.









