ಇತಿಹಾಸ ಪುಟ ಸೇರಿದ ರಾಜ್ಯದ ಮೊದಲ ಮಹಿಳಾ ಕನ್ನಡ ಶಾಲೆ Saaksha Tv
ಮೈಸೂರು: ಕರ್ನಾಟಕ ಮೊದಲ ಮಹಿಳಾ ಕನ್ನಡ ಶಾಲೆ ಕಟ್ಟಡವನ್ನು ರಾತ್ರೋರಾತ್ರಿ ಧ್ವಂಸ ಮಾಡಲಾಗಿದೆ. ಈ ಮೂಲಕ ಶಾಲೆ ಇತಿಹಾಸ ಪುಟ ಸೇರಿದೆ.
ಎನ್‍ಟಿಎಂಎಸ್ ಶಾಲೆಯು ಕಳೆದ 15 ವರ್ಷಗಳಿಂದ ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ವಿವಾದಿತ ಪ್ರದೇಶವಾಗಿತ್ತು. ಇದನ್ನು ರಾಜ್ಯ ಸರಕಾರ ಶಾಲೆಯ ಜಾಗವನ್ನು ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿತ್ತು. ಇದನ್ನು ಕೆಲ ಸಂಘಟನೆಗಳು ಪ್ರಶ್ನಿಸಿ ಹೈಕೋರ್ಟ್‍ಗೆ ದಾವೆ ಹೂಡಿದ್ದವು. ಹೈಕೋರ್ಟ್‍ನಲ್ಲಿ ರಾಮಕೃಷ್ಣ ಆಶ್ರಮದ ಪರ ತೀರ್ಪು ಬಂದಿತ್ತು. ಹೀಗಾಗಿ ಒಂದು ವಾರದ ಹಿಂದೆ ಶಾಲೆಯನ್ನು ಪಕ್ಕದ ಮಹಾರಾಣಿ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು.

ನಿನ್ನೆ ಇಡೀ ರಾತ್ರಿ ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಶಶಿಧರ್, 5 ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಭದ್ರತೆಯಲ್ಲಿ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ನಡೆದಿದೆ. ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಕಟ್ಟಡವನ್ನು 4 ಹಿಟಾಚಿ, 3 ಜೆಸಿಬಿಗಳಿಂದ ಕಟ್ಟಡ ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ತಡೆಯಲು ಬಂದ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರನ್ನು ಬಂಧಿಸಲಾಗಿದೆ. ವಿವೇಕಾನಂದರ 150ನೇ ಜಯಂತಿ ಹಿನ್ನೆಲೆಯಲ್ಲಿ ಅದರ ಸವಿ ನೆನಪಿಗಾಗಿ ಸ್ಮಾರಕ ನಿರ್ಮಾಣವಾಗಲಿದೆ.