ಈಗಿನ ವೈಸ್ ಕ್ಯಾಪ್ಟನ್ ಮುಂದಿನ ಕ್ಯಾಪ್ಟನ್..! K L rahul saaksha tv
ಟೀಂ ಇಂಡಿಯಾದಲ್ಲಿ ಈಗ ಬದಲಾವಣೆಯ ಪರ್ವ ಆರಂಭವಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ಈಗ ಇಬ್ಬರು ನಾಯಕರಿದ್ದು, ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ಸಾರಥ್ಯ ವಹಿಸಿದ್ದರೇ, ರೋಹಿತ್ ಶರ್ಮಾ ಸಿಮೀತ ಓವರ್ ಗಳ ತಂಡಕ್ಕೆ ನಾಯಕತ್ವ ವಹಿಸಲಿದ್ದಾರೆ.
ಟಿ 20, ಏಕದಿನ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗುತ್ತಿದ್ದಂತೆ, ಮಧ್ಯೆ ಕನ್ನಡಿಗ ಕೆ.ಎಲ್ ರಾಹುಲ್ ಭಾರತ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ದಕ್ಷಿಣಾ ಆಫ್ರಿಕಾ ನೆಲದಲ್ಲಿ ಕೆ.ಎಲ್. ರಾಹುಲ್, ನಾಯಕ ವಿರಾಟ್ ಕೊಹ್ಲಿಗೆ ಡೆಪ್ಯೂಟಿಯಾಗಿ ಕೆಲಸ ಮಾಡಲಿದ್ದಾರೆ. ರೋಹಿತ್ ಶರ್ಮಾ ಇಂಜೂರಿಯಿಂದ ಟೆಸ್ಟ್ ಸರಣಿಯಿಂದ ಹೊರ ಬಿದ್ದಿರುವ ಕಾರಣ ರಾಹುಲ್ ಗೆ ಟೆಸ್ಟ್ ತಂಡದ ಉಪನಾಯಕನ ಪಟ್ಟ ಸಿಕ್ಕಿದೆ.
ಇದನ್ನ ಗಮನಿಸಿದರೇ ಬಿಸಿಸಿಐ ಬಿಗ್ ಬಾಸ್ ಗಳು ಭವಿಷ್ಯದ ಟೀಂ ಇಂಡಿಯಾಗೆ ನೂತನ ಸಾರಥಿಯನ್ನ ಹುಡುಕುತ್ತಿರುವುದು ಪಕ್ಕಾ ಆಗಿದೆ. ಯಾಕಂದರೇ ವಯಸ್ಸಿನ ಲೆಕ್ಕಾಚಾರದಲ್ಲಿ ರೋಹಿತ್ ಶರ್ಮಾ, ಹೆಚ್ಚೆಂದರೇ ಇನ್ನೂ ಮುಂದಿನ ವಿಶ್ವಕಪ್ ವರೆಗೂ ನಾಯಕರಾಗಿ ಇರಬಹುದು. ಆ ನಂತರ ರಾಹುಲ್ ತಂಡದ ಸಾರಥ್ಯವಹಿಸುವ ಸಾಧ್ಯತೆಗಳಿವೆ.
ಯಾಕಂದರೇ ಕಿಂಗ್ ಕೊಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಆಧಾರ ಸ್ತಂಭ ಯಾರು..? ಎಂಬ ಪ್ರಶ್ನೆಗೆ ತಟ್ ಅಂತ ಬರೋ ಉತ್ತರ ಕೆ.ಎಲ್.ರಾಹುಲ್..! ಸದ್ಯ ಟೀಂ ಇಂಡಿಯಾದಲ್ಲಿ ವಿರಾಟ್ ಮತ್ತು ರೋಹಿತ್ ಶರ್ಮಾ ರ ನಡುವೆ ರಾಹುಲ್ ಭರವಸೆಯ ಬೆಳಕಾಗಿ ಬೆಳೆಯುತ್ತಿದ್ದಾರೆ. ಈಗಿನ ಕ್ರಿಕೆಟರ್ಸ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಬಳಿಕ ಒಬ್ಬ ಟಾಪ್ ಕ್ಲಾಸ್ ಕ್ರಿಕೆಟರ್ ಅಂದ್ರೆ ಅದು ಕೆ.ಎಲ್.ರಾಹುಲ್…!
ಮೂರು ಮಾದರಿಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ರಾಹುಲ್ ಮೇಲೆ ಮಾಜಿ ಕ್ರಿಕೆಟರ್ ಸಬಾ ಕರೀಂ ಪ್ರಶಂಸೆಗಳ ಸುರಿಮಳೆ ಗೈದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಾಹುಲ್ ಅವರನ್ನ ತಂಡದ ಉಪನಾಯಕರನ್ನಾಗಿ ಮಾಡಿದ್ದು, ನೂರಕ್ಕೆ ನೂರು ಸರಿಯಾದ ನಿರ್ಧಾರ ಎಂದು ತಿಳಿಸಿದ್ದಾರೆ. ಬಿಸಿಸಿಐ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದು, ರೋಹಿತ್ ಅನುಪಸ್ಥಿತಿಯಲ್ಲಿ ಉಪನಾಯಕನ ಸ್ಥಾನಕ್ಕೆ ರಾಹುಲ್ ಸೂಕ್ತ ವ್ಯಕ್ತಿ. ನಿಜ ಹೇಳಬೇಕಂದರೇ ಕೆ.ಎಲ್.ರಾಹುಲ್ ಭವಿಷ್ಯದಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ ಆಗುವ ಅವಕಾಶಗಳು ಹೆಚ್ಚಿವೆ ಎಂದಿದ್ದಾರೆ.









