ಭುವನೇಶ್ವರ್: ಜಗತ್ತಿನ ಭವಿಷ್ಯವು ಯುದ್ಧದಲ್ಲಿಲ್ಲ, ಬುದ್ಧನಲ್ಲಿದೆ ಎಂಬುವುದು ಅಶೋಕ ತೋರಿಸಿದ್ದಾರೆ. ಇದು ಭಾರತದ ಮಂತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಒಡಿಶಾದಲ್ಲಿ ಆಯೋಜಿಸಿರುವ 18ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟಿಸಿ ಮಾತನಾಡಿದ ಅವರು, ಇದು ರೋಮಾಂಚಕ ಹಬ್ಬಗಳ ಸಮಯ. ಇನ್ನು ಕೆಲವೇ ದಿನಗಳಲ್ಲಿ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಆರಂಭವಾಗಲಿದೆ. ಮಕರ ಸಂಕ್ರಾಂತಿ, ಬಿಹು, ಪೊಂಗಲ್, ಲೋಹ್ರಿಯಂತಹ ಹಬ್ಬಗಳು ಆಗಮಿಸುತ್ತಿವೆ. ಹೀಗಾಗಿ ದೇಶದಲ್ಲಿ ಹರ್ಷದ ವಾತಾವರಣ ಮನೆ ಮಾಡಿದೆಸ ಎಂದಿದ್ದಾರೆ.
ಒಡಿಶಾದ ಭವ್ಯ ಭೂಮಿ ಭಾರತದ ಶ್ರೀಮಂತ ಪರಂಪರೆಯ ಪ್ರತಿಬಿಂಬವಾಗಿದೆ. ಒಡಿಶಾದಲ್ಲಿ ಪ್ರತಿ ಹೆಜ್ಜೆಯಲ್ಲೂ ನಮ್ಮ ಪರಂಪರೆ ಗೋಚರಿಸುತ್ತದೆ. ನೂರಾರು ವರ್ಷಗಳ ಹಿಂದೆ, ಒಡಿಶಾದ ನಮ್ಮ ವ್ಯಾಪಾರಿಗಳು ಬಾಲಿ, ಸುಮಾತ್ರಾ, ಜಾವಾ ಮುಂತಾದ ಸ್ಥಳಗಳಿಗೆ ದೂರದ ಪ್ರಯಾಣವನ್ನು ಮಾಡುತ್ತಿದ್ದರು ಎಂದಿದ್ದಾರೆ.
ನನಗೆ ಸಿಕ್ಕ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮ ಪ್ರೀತಿ, ನಿಮ್ಮ ಆಶೀರ್ವಾದ ಯಾವಾಗಲೂ ನನ್ನೊಂದಿಗೆ ಇರುತ್ತದೆ. ನಾವು ಪ್ರಜಾಪ್ರಭುತ್ವದ ತಾಯಿ ಮಾತ್ರವಲ್ಲ, ಪ್ರಜಾಪ್ರಭುತ್ವವು ನಮ್ಮ ಜೀವನದ ಭಾಗವಾಗಿದೆ. ನಾವು ವೈವಿಧ್ಯತೆಯನ್ನು ಕಲಿಸುವ ಅಗತ್ಯವಿಲ್ಲ. ನಮ್ಮ ಜೀವನವು ವೈವಿಧ್ಯತೆಯನ್ನು ಒದಗಿಸುತ್ತದೆ. ಭಾರತೀಯರು ಎಲ್ಲಿಗೆ ಹೋದರೂ ಸ್ಥಳೀಯ ಸಮಾಜದೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಭಾರತೀಯರು ಎಲ್ಲೇ ಇದ್ದರೂ ಸಂಪ್ರದಾಯ ಗೌರವಿಸುತ್ತಾರೆ ಎಂದಿದ್ದಾರೆ.