ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಹೆಚ್ಚು ಊಟ ಕೇಳುತ್ತಾನೆ ಎಂಬ ಕಾರಣಕ್ಕೆ ಸ್ವಂತ ಅಜ್ಜಿಯೇ ಮೊಮ್ಮಗನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾಳೆ.
ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ ಗುರಪ್ಪನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಮಗುವಿನ ಅಜ್ಜಿ ಮುಬೀನಾ ಹಾಗೂ ತಾಯಿ ಅಜೀರಾ ಹಲ್ಲೆ ಮಾಡಿದವರಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಕಂದಮ್ಮನನ್ನು ಸ್ಥಳೀಯರ ನೆರವಿನಿಂದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ರವಾನಿಸಲಾಗಿದೆ.
ಗುರಪ್ಪನಪಾಳ್ಯದಲ್ಲಿ ಇಮ್ರಾನ್ ಪಾಷಾ ಮತ್ತು ಅಜೀರಾ ದಂಪತಿ ವಾಸವಾಗಿದ್ದಾರೆ. ಅಜ್ಜಿ ಮುಬೀನಾ ಸಹ ಇವರೊಂದಿಗೆ ನೆಲೆಸಿದ್ದರು. ಮಗು ಹೆಚ್ಚು ಊಟ ಕೇಳುತ್ತೆ ಎಂದು ಮಗುವಿಗೆ ಕಳೆದ 15 ದಿನಗಳಿಂದ ನಿರಂತವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ. ಬೆಂಕಿಯಿಂದ ಮಗುವಿನ ಮೈ ಸುಟ್ಟಿದ್ದಾರೆ. ಮಗುವಿನ ಮೈ ಸುಟ್ಟು ಹಲ್ಲೆ ನಡೆಸುತ್ತಿದ್ದರೂ ತಾಯಿ ಅಜೀರಾ ವಿರೋಧ ವ್ಯಕ್ತಪಡಿಸಿಲ್ಲವಂತೆ. ಈ ಬಗ್ಗೆ ಗಂಡ ಇಮ್ರಾನ್ ಪಾಷಾ ಮಗುವಿನ ಗಾಯಗಳ ಬಗ್ಗೆ ಕೇಳಿದರೆ ಅತ್ತೆ-ಮಗಳು ಯಾವುದೋ ಕಾರಣ ಹೇಳಿ ಯಾಮಾರಿಸುತ್ತಿದ್ದರಂತೆ.
ಕೆಲ ದಿನಗಳ ಬಳಿಕ ಹಲ್ಲೆ ಮಾಡುತ್ತಿರುವ ಬಗ್ಗೆ ಇಮ್ರಾನ್ ಪ್ರಶ್ನಿಸಿದರೆ, ಹೆಚ್ಚಾಗಿ ಮಾತನಾಡಿದರೆ ನೀನು ನಿನ್ನ ಮಕ್ಕಳ ಜೊತೆ ಮನೆ ಖಾಲಿ ಮಾಡು ಎಂದು ಅತ್ತೆ ಹೇಳುತ್ತಿದ್ದಳಂತೆ. ಇನ್ನು ಅಳಿಯನ ಮೇಲಿನ ಕೋಪವನ್ನು ಮುಬೀನಾ ಮೊಮ್ಮಗನ ಮೇಲೆ ತೀರಿಸಿಕೊಂಡಿದ್ದಾಳೆ ಎಂದೂ ಸಹ ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಮೈಕೊ ಲೇಔಟ್ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸದ್ಯ ಮಗುವನ್ನು ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ.