ಮಾರ್ಚ್ 8. ವಿಶ್ವ ಮಹಿಳಾ ದಿನಾಚರಣೆ. ಇನ್ನೊಂದೆಡೆ 2026ರ ಟಿ-20 ವಿಶ್ವಕಪ್ ಫೈನಲ್ ಮ್ಯಾಚ್. ಭಾನುವಾರದ ಹೈವೋಲ್ಟೇಜ್ ಮ್ಯಾಚ್ನಲ್ಲಿ ನ್ಯೂಜಿಲೆಂಡ್ ಆಟಗಾರರು ಚೊಚ್ಚಲ ಐಸಿಸಿ ಟಿ-20 ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ರು. ಇತ್ತ ಟೀಮ್ ಇಂಡಿಯಾ ಹುಡುಗರು ಭಾರತಾಂಬೆಯ ಮುಕುಟಕ್ಕೆ ಮೂರನೇ ಗರಿಯಾಗಿ ಐಸಿಸಿ ಟ್ರೋಫಿಯನ್ನು ಮುಡಿಸಬೇಕು ಎಂದು ಪಣತೊಟ್ಟಿದ್ದರು.
ಅದಕ್ಕೆ ತಕ್ಕಂತೆ ಗುಜರಾತ್ನ ನರೇಂದ್ರ ಮೋದಿ ಅಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳು ರಂಗು ರಂಗಿನ ವಿದ್ಯುತ್ ದೀಪಾಲಂಕರದಲ್ಲಿ ಜೈ ಹೋ ಇಂಡಿಯಾ ಹರ್ಷೊದ್ಗಾರದ ಮಂತ್ರ ಘೋಷ ಮೊಳಗಿಸುತ್ತಿದ್ದರು.
ಟೀಮ್ ಇಂಡಿಯಾ ಹುಡುಗರ ಭಾರತಾಂಬೆಯ ವಿಶೇಷ ಸರ್ವ ಅಲಂಕಾರ ಪೂಜೆಯನ್ನು ಕಣ್ತುಂಬಿಕೊಳ್ಳಲು 1.30 ಲಕ್ಷ ಸೇರಿದ್ರೆ, ಇತ್ತ ಕೊಟ್ಯಾಂತರ ಅಭಿಮಾನಿಗಳು ಟಿವಿ ಪರದೆಯ ಮೇಲೆ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಅಷ್ಟೇ ಅಲ್ಲ ಟೀಮ್ ಇಂಡಿಯಾ ಗೆಲ್ಲಬೇಕು.. ಭಾರತಾಂಬೆಯ ಮುಕುಟದಲ್ಲಿ ಮತ್ತೊಂದು ಐಸಿಸಿ ಹೊಳೆಯಬೇಕು ಅಂತ ಸಂಕಲ್ಪ ಕೂಡ ಮಾಡಿದ್ದರು.
ಅಂದ ಹಾಗೇ, ಭಾರತಾಂಭೆಯ ವಿಶೇಷ ಸರ್ವ ಅಲಂಕಾರ ಪೂಜೆಯನ್ನು ಶುರು ಮಾಡಿದ್ದು ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ. ಹಾಲಿನಂತೆ ಶುಭ್ರತೆಯಿಂದ ಅಭಿ ಬ್ಯಾಟಿಂಗ್ ಮಾಡಿದ್ರೆ, ಇತ್ತ ಸಂಜು ಒತ್ತಡದ ನಡುವೆಯೂ ಮೊಸರಿನಂತೆ ಗಟ್ಟಿಯಾಗಿ ನಿಂತು ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಇವರಿಬ್ಬರ ಬ್ಯಾಟಿಂಗ್ ಜುಗುಲ್ಬಂದಿ ಜೇನಿನಂತೆ ಸವಿಯಾಗಿತ್ತು. ಸಿಡಿಸುತ್ತಿದ್ದ ಬೌಂಡರಿ – ಸಿಕ್ಸರ್ಗಳು ತುಪ್ಪದಂತೆ ಗರಿಗರಿಯಾಗಿ ಹೊಳೆಯುತ್ತಿತ್ತು. ಸ್ಕೋರು ಬೋರ್ಡ್ನ ಮೊತ್ತವನ್ನು ನೋಡಿದಾಗ ಸುಗಂದ ದ್ರವ್ಯದಂತೆ ಘಮಘಮಿಸುತ್ತಿತ್ತು. ಬ್ಯಾಟ್ನಿಂದ ಸಿಡಿಯುತ್ತಿದ್ದ ರನ್ಗಳು ನೀರಿನಂತೆ ಚಿಮ್ಮುವಂತಿತ್ತು. ಹೀಗೆ ಪಂಚಾಮೃತ ಅಭಿಷೇಕ ಸೇವೆ ಮುಗಿಸಿ ಇನ್ನೇನೂ ಅಲಂಕಾರ ಮಾಡಬೇಕು ಅನ್ನುವಷ್ಟರಲ್ಲಿ ಸಂಜುವಿಗೆ ಅಭಿ ಕೈಕೊಟ್ಟು ಬಿಟ್ರು.
ನಂತರ ಸಂಜು ಜೊತೆ ಸರ್ವ ಅಲಂಕಾರಕ್ಕೆ ಕೈ ಜೋಡಿಸಿದ್ದು ಇಶಾನ್ ಕಿಶಾನ್. ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯದ ಹೊಳಪಿನಂತೆ ಸಂಜು ಬ್ಯಾಟಿಂಗ್ ಮಾಡುತ್ತಿದ್ರೆ, ಇತ್ತ ಇಶಾನ್ ಕಿಶಾನ್ ಹೂವಿನಂತೆ ರನ್ ಕಲೆ ಹಾಕಿ ಮಾಲೆಯನ್ನು ಸಿದ್ದಪಡಿಸಿದ್ರು. ಅಷ್ಟರಲ್ಲಿ ಇಶಾನ್ ಕಿಶಾನ್ ಕೂಡ ಸುಸ್ತಾಗಿಬಿಟ್ರು.
ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಹಾಗೇ ಬಂದು ನೈವದ್ಯ ಕೊಟ್ಟು ಹೊದ್ರು. ಹಾರ್ದಿಕ್ ಪಾಂಡ್ಯ ಸುಗಂಧದ ಧೂಪ ಹಚ್ಚಿ ತನ್ನ ಕೆಲಸ ಮುಗಿಸಿದ್ರು. ತೀಲಕ್ ವರ್ಮಾ ಭಾರಾಂಭೆಯ ಹಣೆಗೆ ತಿಲಕವಿಟ್ರು. ಇನ್ನು ಶಿವಂ ದುಬೆಯಂತೂ ರುದ್ರತಾಂಡವ ನೃತ್ಯಕ್ಕೆ ನ್ಯೂಜಿಲೆಂಡ್ ಆಟಗಾರರು ಲಯವನ್ನೇ ಕಳೆದುಕೊಂಡ್ರು.
ಆರ್ಶಾದೀಪ್ ಸಿಂಗ್, ಹಾರ್ದೀಕ್ ಪಾಂಡ್ಯ,, ವರುಣ್ ಚಕ್ರವರ್ತಿ, ಅಭಿಷೇಕ್ ಶರ್ಮಾ ಅವರ ಮಂತ್ರಘೋಷದಂತಹ ಎಸೆತಗಳಿಗೆ ನ್ಯೂಜಿಲೆಂಡ್ ಬ್ಯಾಟರ್ಗಳು ಗಲಿಬಿಲಿಗೊಂಡ್ರು. ಈ ನಡುವೆ ಅಕ್ಷರ್ ಪಟೇಲ್ ಅವರ ಪುಷ್ಪಾರ್ಚಣೆಯ ಮಂತ್ರದ ಎಸೆತಗಳು ಹಾಗೂ ಜಸ್ಪ್ರಿತ್ ಬೂಮ್ರಾ ಅವರ ಮಹಾ ಮಂಗಳಾರತಿಯ ಘಂಟಾಘೋಷಕ್ಕೆ ಭಾರತಾಂಬೆಯ ಪಾದಕ್ಕೆ ನ್ಯೂಜಿಲೆಂಡ್ ಆಟಗಾರರು ಸಾಷ್ಟಂಗ ನಮಸ್ಕಾರ ಮಾಡಿದ್ರು.
ಟೀಮ್ ಇಂಡಿಯಾದ ಅಭಿಮಾನಿಗಳ ಜೈ ಹೋ ಇಂಡಿಯಾ ಎಂಬ ಪದಗಳು ವೇದ ಘೋಷದಂತೆ ಎಲ್ಲೆಡೆ ಪ್ರತಿಧ್ವನಿಸುತ್ತಿದ್ದವು. ಇದರೊಂದಿಗೆ ಸೂರ್ಯ ಕುಮಾರ್ ಹುಡುಗರು 2026ರ ಐಸಿಸಿ ಟಿ-20 ವಿಶ್ವಕಪ್ ಟ್ರೋಫಿಯನ್ನು ಸರ್ವ ಅಲಂಕಾರೆಗೊಂಡಿರುವ ಭಾರತಾಂಬೆಯ ಮುಕುಟಕ್ಕೆ ಗರಿಯಾಗಿಸಿ ಸಂಪನ್ನಗೊಳಿಸಿದ್ರು.








