ತೇಜಸ್ವಿ ಕೃತಿಗಳಲ್ಲಿ ಪ್ರಕೃತಿಯ ಮಹತ್ವದ ಅನಾವರಣ : ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು : ಪೂರ್ಣಚಂದ್ರ ತೇಜಸ್ವಿಯವರು ಕವಿ ಕುವೆಂಪುರವರ ಮಗನಾದರೂ, ಸ್ವತಂತ್ರವಾಗಿ ಸಾಹಿತ್ಯ ರಚನೆ ಮಾಡಿದರು. ಪ್ರಕೃತಿಯ ಮಹತ್ವದ ಅನಾವರಣ ಅವರ ಕೃತಿಗಳಲ್ಲಿ ಕಾಣುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಪೂರ್ಣಚಂದ್ರ ತೇಜಸ್ವಿಯವರ ಜಯಂತಿ ಪ್ರಯುಕ್ತ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೇಜಸ್ವಿಯವರು ಪರಿಸರದ ಬಗ್ಗೆ ಬರೆದರು. ಆದರೆ ಭಾರತದಲ್ಲಿ ಪ್ರಕೃತಿಯನ್ನು ಮರೆಯಲಾಗುತ್ತಿದೆ. ನೈಸರ್ಗಿಕ ವಿಕೋಪಗಳು ಹೆಚ್ಚಿದ ಬಳಿಕ ಪ್ರಕೃತಿಯ ಮಹತ್ವದ ಅರಿವಾಗುತ್ತಿದೆ. ವಿದೇಶಗಳ ಕೆಲ ನಗರಗಳಲ್ಲಿ ಬಹುಮಹಡಿ ಕಟ್ಟಡ ಇರುವುದಿಲ್ಲ. ಬದಲಾಗಿ ವಿಶಾಲ ಉದ್ಯಾನಗಳಿರುತ್ತವೆ. ಆದರೆ ನಮ್ಮ ನಗರಗಳಲ್ಲಿ ಹೆಚ್ಚು ಕಾಂಕ್ರಿಟ್ ಬೆಳೆಸುತ್ತಿದ್ದೇವೆ. ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇಂದಿನ ಅಗತ್ಯ ಎಂದರು.
ಪ್ರಕೃತಿಯಲ್ಲಿರುವ ಜಲ, ಮಣ್ಣು ಎಲ್ಲವನ್ನೂ ತಾಯಿ ಎಂದು ಕರೆಯುತ್ತೇವೆ. ಪರಿಸರದಲ್ಲಿ ಅವಶ್ಯಕತೆ ಇರುವಷ್ಟನ್ನು ಮಾತ್ರ ಬಳಸಿಕೊಂಡರೆ ಪರಿಸರ ಸಂರಕ್ಷಣೆ ಮಾಡಿ, ಶಾಂತಿಯುತವಾಗಿ ಬದುಕಲು ಸಾಧ್ಯವಾಗುತ್ತದೆ. ಪ್ರಕೃತಿ ಮಾನವನಿಗೆ ಮಾತ್ರ ಸೀಮಿತ ಎಂದುಕೊಂಡರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಪೂರ್ವಜರು ನಮಗಾಗಿ ಪ್ರಕೃತಿಯನ್ನು ಬಿಟ್ಟು ಹೋದಂತೆ ನಾವು ಕೂಡ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕು ಎಂದರು.
ನಿಸರ್ಗದೊಂದಿಗೆ ಹೇಗೆ ಸೂಕ್ಷ್ಮವಾಗಿ ವರ್ತಿಸಬೇಕು ಎಂಬ ಬಗ್ಗೆ ಮೌಲ್ಯಗಳನ್ನು ತಿಳಿಸಿಕೊಡುವ ಅಗತ್ಯವಿದೆ. ಅನೇಕರು ಪರಿಸರದ ಉಳಿವಿಗೆ ದುಡಿಯುತ್ತಿದ್ದಾರೆ. ಅದೇ ರೀತಿ ತೇಜಸ್ವಿಯವರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದಿದ್ದರೂ ಅವರ ಮಾಡಿದ ಸಾಹಿತ್ಯ ಕಾರ್ಯ ಉಳಿದಿವೆ ಎಂದರು.
ಕಾರ್ಯಯೋಜನೆ
ಪರಿಸರದ ಉಳಿವಿಗೆ ವಿಶೇಷವಾದ ಕಾರ್ಯಯೋಜನೆ, ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ಸಚಿವರು ಹೇಳಿದರು.