ಚೆನ್ನೈ : ದಾಂಪತ್ಯ ಜೀವನಕ್ಕೆ ಕಾಲಿಟ್ಟದ ಮೊದಲ ರಾತ್ರಿಯೇ ಪತ್ನಿಯನ್ನು ಕೊಂದು ವರ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವೆಲ್ಲೂರ್ ನಲ್ಲಿ ನಡೆದಿದೆ. 20 ವರ್ಷದ ಸಂಧ್ಯಾ ಕೊಲೆಯಾವ ವಧುವಾಗಿದ್ದು, 24 ವರ್ಷದ ನೀತಿವಾಸನ್ ಆತ್ಮಹತ್ಯೆ ಮಾಡಿಕೊಂಡ ವರ. ಮೃತರಿಬ್ಬರು ಸಂಬಂಧಿಗಳಾಗಿದ್ದು, ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಎರಡು ಕುಟುಂಬದ 20 ಮಂದಿಯ ಸಮ್ಮುಖದಲ್ಲಿ ಬುಧವಾರ ಬೆಳಗ್ಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬುಧವಾರ ರಾತ್ರಿಯೇ ನವ ದಂಪತಿಗೆ ಮೊದಲ ರಾತ್ರಿಯನ್ನು ಕುಟುಂಬಸ್ಥರು ಆಯೋಜನೆ ಮಾಡಿದ್ದರು.
ಸ್ವಲ್ಪ ಸಮಯ ನಂತರ ರೂಮಿನಲ್ಲಿ ಸಂಧ್ಯಾ ಜೋರಾಗಿ ಕೂಗಿಕೊಂಡಿದ್ದಾಳೆ. ತಕ್ಷಣ ಗಾಬರಿಯಿಂದ ಎಚ್ಚರಗೊಂಡ ಸಂಬಂಧಿಕರು ಬಾಗಿಲು ಬಡಿದಿದ್ದಾರೆ. ಆಗ ನೀತಿವಾಸನ್ ಬಾಗಿಲು ತೆರೆದು ಅವರನ್ನು ತಳ್ಳಿ ರೂಮಿನಿಂದ ಓಡಿ ಹೋಗಿದ್ದಾನೆ. ಇದರಿಂದ ಮತ್ತಷ್ಟು ಆತಂಕಗೊಂಡ ಸಂಬಂಧಿಕರು ರೂಮಿನೊಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಸಂಧ್ಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿ ಸಂಧ್ಯಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಸಂಧ್ಯಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತ ಮನೆಯಿಂದ ಓಡಿಹೋದ ನೀತಿವಾಸನ್ ಕೂಡ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇತ್ತ ಎರಡು ಕುಟುಂಬದವರು ಇಬ್ಬರ ಸಾವಿನಿಂದ ಆಘಾತಕ್ಕೋಳಗಾಗಿದ್ದಾರೆ.








