ಚೀನಾಕ್ಕೆ ಖಡಕ್ ಎಚ್ಚರಿಕೆ ನೀಡಿದ ಭಾರತೀಯ ವಾಯು ಸೇನೆ ಮುಖ್ಯಸ್ಥ
ಶ್ರೀನಗರ ಜೂನ್ 21: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿ ಗಡಿ ಪ್ರದೇಶದಲ್ಲಿ ಸಂಘರ್ಷದ ವಾತಾವರಣಕ್ಕೆ ಕಾರಣವಾಗಿರುವ ಚೀನಾ ಇದೀಗ ಪ್ಯಾಂಗಾಂಗ್ ಸರೋವರದ ಬಳಿ ತನ್ನ ಉದ್ಧಟತನವನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯು ಸೇನೆ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಅವರು ಚೀನಾಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿದ್ದು, ಭಾರತ ಯುದ್ಧ ಬಯಸುವುದಿಲ್ಲ. ಆದರೆ ಎಂತಹ ಸಂದರ್ಭ ಎದುರಾದರೂ ಅದನ್ನು ಎದುರಿಸಲು ಸಿದ್ಧವಿದೆ . ಅದಕ್ಕಾಗಿ ನಾವು ಸನ್ನದ್ಧ ಸ್ಥಿತಿಯಲ್ಲಿದ್ದು, ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಶಾಂತಿ ಕಾಪಾಡಿಕೊಳ್ಳುವುದು ಮತ್ತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದರೂ ಇದುವೇ ನಮ್ಮ ಅಂತಿಮ ನಿರ್ಧಾರವಲ್ಲ ಎಂದು ಅವರು ಹೇಳಿದ್ದಾರೆ.
ಏರ್ ಚೀಫ್ ಮಾರ್ಶಲ್ ಭದೌರಿಯಾ ಅವರು ಲೇಹ್ ಹಾಗೂ ಶ್ರೀನಗರ ಏರ್‌ಬೇಸ್‌ಗೆ ಭೇಟಿ ನೀಡಿದ ನಂತರ ಮಾಧ್ಯಮದ ಜೊತೆ ಮಾತನಾಡಿದ್ದು, ಗಾಲ್ವಾನ್ ಕಣಿವೆ ಭಾರತೀಯ ಸೇನೆಯ ನಿಯಂತ್ರಣದಲ್ಲಿದ್ದು, ಭಾರತೀಯ ಸೇನೆ ದಿಟ್ಟ ಹೋರಾಟದ ಮೂಲಕ ಚೀನಾಕ್ಕೆ ತಕ್ಕ ಪಾಠ ಕಲಿಸಿದೆ. ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ವೀರಮರಣವನ್ನಪ್ಪಿದ್ದು, ಕೆಲವು ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರ ನಿಯೋಜನೆ ಮಾಡಲಾಗಿದೆ ಎಂದು ಹೇಳಿದ ಅವರು ಯುದ್ಧವಿಮಾನಗಳ ನಿಯೋಜನೆ ಕುರಿತು ಮಾಹಿತಿ ಬಹಿರಂಗ ಪಡಿಸಲು ನಿರಾಕರಿಸಿದರು. ಭಾರತೀಯ ವಾಯುಸೇನೆ ಎಂತಹ ಸನ್ನಿವೇಶಗಳನ್ನೂ ಎದುರಿಸಲು ಸನ್ನದ್ಧವಾಗಿದ್ದು, ಅತ್ಯಂತ ಎತ್ತರದ ಪ್ರದೇಶದಲ್ಲೂ ಕಾರ್ಯಚರಣೆ ನಡೆಸಲಿದೆ. ಯಾವುದೇ ಕಾರಣಕ್ಕೂ ನಾವು ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ನೀಡುವುದಾಗಿ ಭದೌರಿಯ ಹೇಳಿದರು.