ಪಾದಯಾತ್ರೆಯನ್ನು ಡಿಕೆಶಿ ವೈಯಕ್ತಿಕ ವರ್ಚಸ್ಸಿಗಾಗಿ ಮಾಡಿದ್ದಾರೆ: ಆರ್ ಅಶೋಕ Saaksha Tv
ಬೆಂಗಳೂರು : ಸಿದ್ದರಾಮಯ್ಯ ಹಾಗೂ ಅಶೋಕ್ ಪಟ್ಟಣ್ ನಡುವಿನ ಪಿಸು ಮಾತಿನಿಂದ ಕಾಂಗ್ರೆಸ್ನ ಒಳ ಜಗಳ ಬೀದಿಗೆ ಬಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಯನ್ನು ಡಿಕೆಶಿ ವೈಯಕ್ತಿಕ ವರ್ಚಸ್ಸಿಗಾಗಿ ಮಾಡಿದ್ದಾರೆ. ಇದರ ಬಗ್ಗೆ ನಾವು ಕೇಳಿದಾಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಅಂದರು. ಆದರೆ ಈಗ ಇವರ ಮಾತಿಂದಲೇ ಅವರ ಜಗಳ ಬೀದಿಗೆ ಬಂದಿದೆ ಎಂದು ಟೀಕಿಸಿದರು.
ವಾಹನ ಟೋಯಿಂಗ್ ವಿಚಾರವಾಗಿ ಮಾತನಾಡಿದ ಅವರು, ಪೊಲೀಸರು ಹಾಗೂ ಜನಸಾಮಾನ್ಯರ ನಡುವೆ ಘರ್ಷಣೆ ನಡೆಯುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಕೆಲವೆಡೆ ಟೋಯಿಂಗ್ ಮಾಡುವ ವಿಚಾರದಲ್ಲಿ ಬೇಕಾಬಿಟ್ಟಿ ಮಾಡುತ್ತಿದ್ದಾರೆ. ಈಗಾಗಲೇ ರವಿಕಾಂತೇಗೌಡ ಅವರ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.
ಸೋಮವಾರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಬೆಂಗಳೂರಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ಸೂಕ್ತ ನಿರ್ದೇಶನ ಕೊಡುತ್ತೇವೆ. ಪೊಲೀಸರು, ಜನಸಾಮಾನ್ಯರ ನಡುವೆ ಜನಸ್ನೇಹಿ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.