ಬೆಂಗಳೂರು: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ತಬ್ರೇಜ್ ಕೊಲೆ ಪ್ರಕರಣ ಸದ್ಯ ಈ ರೀತಿಯ ತಿರುವು ಪಡೆದಿದ್ದು, ಆರೋಪಿ ಶಬ್ಬೀರ್ ನನ್ನು ಪೊಲೀಸರು ಬಂಧಿಸಿದ್ದಾರೆ. ವುಡ್ ವರ್ಕ್ನ ಸಬ್ ಕಾಂಟ್ರಾಕ್ಟರ್ ಆಗಿದ್ದ ತಬ್ರೇಜ್ ಕೊಲೆಯಾದ ನಂತರ ಡ್ರ್ಯಾಗರ್ ಹಿಡಿದು ನಡುರಸ್ತೆಯಲ್ಲಿ ಶಬ್ಬೀರ್ ಓಡಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ವೆಲ್ಡಿಂಗ್ ಕೆಲಸ ಮಾಡುತಿದ್ದ ಶಬ್ಬೀರ್, ದುಬೈನಲ್ಲಿ ಕೆಲಸ ಮಾಡಿ ಮರಳಿ ದೇಶಕ್ಕೆ ಬಂದು ಕೆಂಗೇರಿಯಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಇತ್ತೀಚೆಗೆ ಶಬ್ಬೀರ್ಗೆ ತನ್ನ ಪತ್ನಿ ಹಾಗೂ ಮೂರು ಮಕ್ಕಳ ತಂದೆಯಾಗಿರುವ ತಬ್ರೇಜ್ ನಡುವೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿತ್ತು. ಈ ಸಂದರ್ಭದಲ್ಲಿ ಪತ್ನಿ ತನ್ನ ತವರು ಸೇರಿದ್ದರು. ಹೀಗಾಗಿ ತಬ್ರೇಜ್ ಹಾಗೂ ಶಬ್ಬೀರ್ ನಡುವೆ ಈ ವಿಷಯವಾಗಿ ಆಗಾಗ ಜಗಳ ನಡೆಯುತ್ತಿತ್ತು.
ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು, ತಬ್ರೇಜ್ ಕೊಲೆ ಮಾಡಿದ ನಂತರ ತನ್ನ ಪತ್ನಿಯನ್ನೂ ಕೂಡ ಕೊಲೆ ಮಾಡಲು ಶಬ್ಬೀರ್ ಮುಂದಾಗಿದ್ದ ಎಂಬ ಸಂಗತಿ ಬಯಲಾಗಿದೆ. ಹೀಗಾಗಿ ತಬ್ರೇಜ್ ಕೊಲೆ ಮಾಡಿದ ನಂತರ ಪತ್ನಿಯ ಮನೆಗೂ ಆತ ತೆರಳಿದ್ದ ಎನ್ನಲಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದರು.