ಕೆಳದಿಯ ವೀರನೆಲವನ್ನಾಳಿದ ಗಂಡು ಗುಂಡಿಗೆಯ ರಾಣಿ ಚೆನ್ನಮ್ಮನ ಸ್ಮಾರಕ ಕಲ್ಮಠದ ಕುತೂಹಲಕಾರಿ ಮಾಹಿತಿ
ಕಲ್ಮಠ.. ಇಂದಿನ ಬಿದನೂರಿನಲ್ಲಿ ಇರುವ ಎಲ್ಲಾ ಸ್ಮಾರಕಗಳಿಗೆ ಹೋಲಿಸಿದಾಗ ಇದು ಅವೆಲದಕ್ಕಿಂತ ಅದ್ಭುತವಾದ ವಿಚಿತ್ರ ಮತ್ತು ವಿಶಿಷ್ಟವಾದ ಕೆಳದಿ ಅರಸರ ಕಾಲದ ಕಲಾಸ್ಮಾರಕ. ಕೆಳದಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಸ್ಮಾರಕ ಬಿದನೂರಿನ ವೀರ ರಾಣಿ ಚೆನ್ನಮ್ಮಾಜಿಯ (1671 – 1697) ಗದ್ದುಗೆ ಅಥವಾ ಸಮಾದಿ ಸ್ಥಳ. ಕಲ್ಮಠವನ್ನು ಬಿದನೂರಿನ ಕೋಟೆ ಕೆರೆಯ ಏರಿಯ ಮುಂಭಾಗದಲ್ಲಿ, ಸೀಗೆಬಾಗಿಲು ಮತ್ತು ಕವಲೇದುರ್ಗದ ಬಾಗಿಲು ಮಧ್ಯ ಇರುವ ಕೋಟೆಯ ಗೋಡೆಯ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಸ್ಮಾರಕ. ರಾಣಿ ಚೆನ್ನಮ್ಮಾಜಿಯ ಜೀವನದಲ್ಲಿ ನಡೆದ ಸನಿವೇಶಗಳು ಮತ್ತು ಆ ಕಾಲದ ಧಾರ್ಮಿಕ, ಸಾಮಾಜಿಕ ಜನಜೀವನವನ್ನು ಪ್ರತಿಬಿಂಬಿಸುವ ಉಬ್ಬು ಶಿಲ್ಪಗಳು, ಅರ್ಧ ಕಂಬಗಳು, ಕುಂಭ ಪಂಜರಗಳನ್ನು ಈ ಸ್ಮಾರಕದ ಹೊರ ಭಿತ್ತಿ ಪಟ್ಟಿಯಲ್ಲಿ ತುಂಬಾ ಸೊಗಸಾಗಿ ಕೆತ್ತಲ್ಪಟ್ಟಿವೆ.
ಇತಿಹಾಸ ಪ್ರಿಯರ ಮನಸೆಳೆಯುವ ಕಲ್ಮಠದ ಪ್ರಾಚೀನ ಪಾರಂಪರಿಕ ವಾಸ್ತುಶಿಲ್ಪ:-
ಉತ್ತರಾಭಿಮುಖವಾಗಿ ನಿರ್ಮಿಸಿದ ಈ ಕಟ್ಟಡದ ಪೀಠದಲ್ಲಿ ಉಪಪೀಠ, ಜಗತಿ, ಕುಮುದ, ಕಂಠ, ಕಪೋತದ ಅಂಶಗಳು ಒಳಗೊಂಡಿದೆ. ಈ ಕಟ್ಟಡದ ತಳಪಾಯದ ನಕ್ಷೆ ಚತುರಸ್ರ ಆಕಾರದಲ್ಲಿದ್ದು, ಗರ್ಭಗೃಹ ಮತ್ತು ಮುಖಮಂಟಪವನ್ನು ಹೊಂದಿದೆ. ಗರ್ಭಗೃಹ ಚಿಕ್ಕ ಮತ್ತು ಚತುರಸ್ರವಾಗಿದ್ದು ಮುಖಮಂಟಪ ಅರ್ಧ ಮುಚ್ಚಿವೆ ಹಾಗೂ ಸ್ತಂಭಗಳನ್ನು ಹೊಂದಿವೆ. ಗರ್ಭಗೃಹದಲ್ಲಿ ಇರುವ ಬೃಹತ್ ನಂದಿಯನ್ನು ಹಸಿರು ಬೂದುಬಣ್ಣ ಮಿಶ್ರಿತ ಹೊಳಪಾದ ಕಲ್ಲಿನಿಂದ ಕೆಳದಿ ಶೈಲಿಯಲ್ಲಿ ಕೆತ್ತಲಾಗಿದೆ. ಈ ನಂದಿಯ ಕೊರಳಿನಲ್ಲಿ ಮೂರು ಅಲಂಕಾರಿಕ ಮಣಿ ಅಥವಾ ಗುಂಡುಗಳಿಂದ ಪೋಣಿಸಿದ ಸರಗಳನ್ನು ಕಾಣಬಹುದು. ಇದರಲ್ಲಿ ಮೇಲಿನ ಸರದ ಗಂಟೆ ಸಣ್ಣದಾದರೆ ಮಧ್ಯದ ಸರದ ಗಂಟೆ ಸ್ವಲ್ಪ ದೊಡ್ಡದಾದರೆ, ಕೆಳಗಿನ ಸರದ ಗಂಟೆ ದೊಡ್ಡದಾಗಿದ್ದು ಕೆಳಗೆ ಇರುವ ಶಿವಲಿಂಗವನ್ನು ತನ್ನ ಒಳಗೆ
ಮುಚ್ಚಿಕೊಂಡಿದೆ. ಈ ನಂದಿಯ ಎರಡು ಕಿವಿ ಹಾಗೂ ಕೋಡಿನ ಮಧ್ಯ ಸುಂದರವಾದ ಹೂವಿನ ಚಿತ್ರದಿಂದ ಅಲಂಕರಿಸಲಾಗಿದೆ. ಗರ್ಭಗೃಹದ ಬಾಗಿಲಿನ ತೋರಣದಲ್ಲಿ ನಂದಿಯನ್ನು ಕೆತ್ತಲಾಗಿದ್ದು, ಬಾಗಿಲಿನ ಅಕ್ಕಪಕ್ಕದಲ್ಲಿ ಶೈವ ದ್ವಾರಪಾಲಕರು ಮತ್ತು ಅವರ ಮೇಲ್ಬಾಗದಲ್ಲಿ ಗೋಡೆಯಿಂದ ಹೊರ ಚಾಚುವ ಛತ್ರಿಯನ್ನು ಕಾಣಬಹುದು. ಈ ಗರ್ಭಗೃಹದ ಛತ್ತು (ಮಾಳಿಗೆ) ಇಸ್ಲಾಮಿಕ್ ಶೈಲಿಯ ಗುಂಬಜ್ ಆಕಾರದಲ್ಲಿದ್ದು ಇದರಲ್ಲಿ ತಲೆಕೆಳಗಾದ ಕಮಲದ ಹೂವು ಮತ್ತು ಮಧ್ಯದಲ್ಲಿ ಇರುವ ತೊಟ್ಟು ಅದ್ಭುತವಾಗಿದೆ.
ಮುಖಮಂಟಪದಲ್ಲಿ ಕೆಳದಿ ಶೈಲಿಯ ಕಮಾನು ಆಕಾರದ ಬಾಗಿಲು, ಗೋಡೆಯೊಂದಿಗೆ ಕೂಡಿಸಿರುವ ಚೌಕಸ್ತಂಭ ಮತ್ತು ಕಮರಧರಣಿಯರ ಉಬ್ಬು ಶಿಲ್ಪ ಸೊಗಸಾಗಿದೆ. ಮಂಟಪದ ಮಾಡು ಚಪ್ಪಟೆಯಾಗಿದ್ದು ಅದರಲ್ಲಿ ಯಾವುದೇ ರೀತಿಯ ಕೆತ್ತನೆ ಇರುವುದಿಲ್ಲ. ಮಂಟಪಕ್ಕೆ ಉತ್ತರಾಭಿಮುಖವಾಗಿ ಸಿಂಹ ಕಠಾಂಜನದಲ್ಲಿ (balustrade) ಒದಗಿಸಿರುವ ನಾಲ್ಕು ಮೆಟ್ಟಲುಗಳ ಮೂಲಕ ಪ್ರವೇಶಿಸಬಹುದು. ಸಿಂಹ ಕಠಾಂಜನದ ಕೆಳಗಿನ ಮೆಟ್ಟಲಿನಲ್ಲಿ ನಂದಿಯ ಮುಖವನ್ನು ಕೆತ್ತಲಾಗಿದೆ.
ಕಟ್ಟಡದಲ್ಲಿ ಇರುವ ಸ್ತಂಭಗಳು ಕೆಳಭಾಗದಲ್ಲಿ ಚಚ್ಚೌಕವಾಗಿದ್ದು, ಮೇಲೆ ಹೋದಂತೆ ಮೂವತ್ತೆರಡು ಕೋನಗಳನ್ನು ಹೊಂದಿದ್ದು ಮೇಲ್ತುದಿಯಲ್ಲಿ ಪುಷ್ಪ ಬೋದಿಗೆಯನ್ನು ಹೊಂದಿವೆ. ಈ ಸ್ತಂಭಗಳು ಗಜಯಾಳಿ ಮತ್ತು ಸಿಂಹಯಾಳಿಗಳನ್ನು ಹೊಂದಿವೆ. ಕಟ್ಟಡದ ಛಜ್ಜ ಚಪ್ಪಟೆಯಾಗಿದ್ದು ಇದರಲ್ಲಿ ಕಮಲದ ಹೂವಿನ ತರ ತರಹದ ಆಕೃತಿಯನ್ನು ಕೆತ್ತಲಾಗಿದ್ದು ಇವಕ್ಕೆ ಕಪ್ಪು, ಹಸಿರು ಮತ್ತು ಕಾವಿ ಬಣ್ಣವನ್ನು ಹಚ್ಚಲಾಗಿದೆ. ಕಟ್ಟಡದ ಮಾಡಿನ ಮೇಲೆ ಸಣ್ಣ ಪ್ಯಾರಾಪೆಟ್ ಗೋಡೆಯಿದ್ದು, ಅದರಲ್ಲಿ ಕಂಗಾರಗಳು (trefoil discs) ರಚಿಸಲ್ಪಟ್ಟಿವೆ. ಈ ಕಂಗಾರಗಳ ಕೆಳಗೆ ತೆಳುವಾದ ಮಿನಾರುಗಳಿದ್ದು, ಪ್ರತಿ ದಿಕ್ಕಿನಲ್ಲಿ ಒಟ್ಟು ಏಳು ಮಿನಾರುಗಳಿವೆ. ಗರ್ಭಗೃಹ ಮತ್ತು ಮಂಟಪದ ಮಾಡಿನ ಮೇಲೆ ಮಳೆನೀರನ್ನು ಹೊರಹಾಕಲು ಹಲವಾರು ನೀರಿನ ನಳಿಕೆಯನ್ನು ಕಾಣಬಹುದು. ಕಲ್ಮಠದ ಮಾಡಿನ ಮೇಲಿರುವ ಪ್ಯಾರಾಪೆಟ್ ಗೋಡೆಯ ನಾಲ್ಕು ಮೂಲೆಗಳಲ್ಲಿ ನಂದಿಯನ್ನು ಇಡಲಾಗಿದ್ದು, ಇದರಲ್ಲಿ ವಿಶೇಷ ಅಂದರೆ ಎರಡು ನಂದಿ ದೇಹಗಳಿಗೆ ಒಂದೇ ತಲೆ ಇರುವುದು.
ಕಲ್ಮಠದ ಹೊರ ಭಿತ್ತಿ ಶಿಲ್ಪಗಳು:-
ಪೂರ್ವಾಭಿಮುಖವಾಗಿರುವ ಭಿತ್ತಿಯಲ್ಲಿ ಮೊದಲಿಗೆ ಮೇಲ್ಬಾಗದಲ್ಲಿ ಆನೆ ಮತ್ತು ಅದರ ಕೆಳಗೆ ಮೊಗಲ್ ಚಕ್ರವರ್ತಿ ಔರಂಗಜೇಬಿನ ಉಬ್ಬು ಶಿಲ್ಪ ಇದ್ದು ಇದರ ವಿರುದ್ಧ ಕೆಳದಿಯ ಲಾಂಛನ ಗಂಡಭೇರುಂಡ ಮತ್ತು ಅದರ ಕೆಳಗೆ ರಾಣಿ ಚೆನ್ನಮ್ಮಾಜಿ ಆಶ್ರಯ ನೀಡಿದ್ದ ಮರಾಠರ ಛತ್ರಪತಿ ರಾಜಾರಾಮ ರಾಜೇಯ ಉಬ್ಬು ಶಿಲ್ಪಗಳು ಇವೆ. ನಂತರದಲ್ಲಿ ನೃತ್ಯ ಮಾಡುತ್ತಿರುವ ಶಿಲ್ಪ ಇದ್ದು ನರ್ತಕಿಯರ ಕಾಲು ಮಧ್ಯದಲ್ಲಿ ಮೈಥುನ ಶಿಲ್ಪವನ್ನು ಕೆತ್ತಲಾಗಿದೆ. ಕೊನೆಯಲ್ಲಿ ಕೆಳದಿ ಅರಸರ ಇಷ್ಟದ ಕ್ರೀಡೆ ವಜ್ರಮುಷ್ಠಿ ಕಾಳಗದ ಶಿಲ್ಪ ಇದೆ. ಇದರಲ್ಲಿ ಜಟ್ಟಿಗಳು ಉಡಿದಾರ, ಚಲ್ಲಣ ಮತ್ತು ಕಡಗವನ್ನು ಧರಿಸಿರುತ್ತಾರೆ.
ದಕ್ಷಿಣಾಭಿಮುಖವಾಗಿರುವ ಭಿತ್ತಿಯ ಬಲಭಾಗದಲ್ಲಿ ಮೇಲೆ ಕೋಲಾಟ ಮಾಡುತ್ತಿರುವ ನೃತ್ಯಗಾರರು ಇದ್ದು ಅವರ ಮೇಲೆ ಎರಡು ಹಂಸ ಮತ್ತು ಕೆಳಗೆ ರಾಣಿ ಚೆನ್ನಮ್ಮಾಜಿ ಎರಡು ಮಕ್ಕಳನ್ನು ಮಡಿಲಲ್ಲಿ ಇಟ್ಟುಕೊಂಡಿರುವ ಶಿಲ್ಪಗಳು ಇವೆ (ರಾಣಿ ಚೆನ್ನಮ್ಮಾಜಿ ಮೊದಲು ಕುತಿಷ್ಟ ಶಿವಪ್ಪನಾಯಕ ಮತ್ತು ತದನಂತರ ಹಿರಿಯ ಬಸವರಾಜ ನಾಯಕನನ್ನು ದತ್ತು ತೆಗೆದುಕೊಂಡಿದ್ದರು). ಇದರ ಕೆಳಭಾಗದಲ್ಲಿ ಎರಡು ಬಾಳೆ ಗಿಡಗಳ ಮಧ್ಯದಲ್ಲಿ ಒಬ್ಬ ಜಂಗಮ ಯೋಗಿ ಕಾಲನ್ನು ಮಡಿಸಿ, ಕಾಲು ಮತ್ತು ಸೊಂಟಕ್ಕೆ ಪಟ್ಟಿಯನ್ನು ಕಟ್ಟಿಕೊಂಡು ಯೋಗಮುದ್ರೆಯಲ್ಲಿ ಕೂತಿರುವುದು ತುಂಬಾ ಆಕರ್ಷಕವಾಗಿದೆ. ಬಾಳೆ ಗಿಡದಲ್ಲಿ ಇರುವ ಬಾಳೆ ಗೊನೆಯನ್ನು ತಿನ್ನುತ್ತಿರುವ ಎರಡು ಗಿಳಿಗಳು ಮತ್ತು ಅಕ್ಕಪಕ್ಕದಲ್ಲಿ ಮಂಗಗಳ ಶಿಲ್ಪವನ್ನು ಕೆತ್ತಲಾಗಿದೆ. ಭಿತ್ತಿಯ ಎಡಭಾಗದ ಮೇಲ್ಬಾಗದಲ್ಲಿ ಒಬ್ಬ ವ್ಯಕ್ತಿ ರಾಜಾ ಪೋಷಾಕಿನಲ್ಲಿ ನಿಂತ್ತಿದ್ದು ಅವನ ಅಕ್ಕಪಕ್ಕದಲ್ಲಿ ಮೃದಂಗ ಹಾಗೂ ತಂಬೂರ ಬಾರಿಸುವರು ನಿಂತಿರುವ ಶಿಲ್ಪ ಇದ್ದು ಇದರ ಕೆಳಭಾಗದಲ್ಲಿ ಎರಡು ಆನೆಗಳ ಗುದ್ದಾಟದ ಚಿತ್ರ ಇದೆ. ಇದರಲ್ಲಿ ವಿಶೇಷ ಅಂದರೆ ಆನೆಗಳ ದೇಹ ಎರಡಾದರೆ ಅದರ ಮುಖ ಮಾತ್ರ ಒಂದೆ, ಈ ಆನೆಗಳ ಮೇಲೆ ಕುದುರೆಗಳನ್ನು ಕೆತ್ತಲಾಗಿದೆ.
ಪಶ್ಚಿಮಾಭಿಮುಖವಾಗಿರುವ ಭಿತ್ತಿಯ ಬಲಭಾಗದ ಮೇಲೆ ಹಾಗೂ ಕೆಳಭಾಗದಲ್ಲಿ ಮೈಥುನ ಶಿಲ್ಪಗಳನ್ನು ಕೆತ್ತಲಾಗಿದೆ. ಭಿತ್ತಿಯ ಮಧ್ಯದಲ್ಲಿ ಮೇಲ್ಬಾಗದಲ್ಲಿ ಚತುರ್ಭುಜ ಪಾರ್ವತಿಯ ಶಿಲ್ಪ ಮತ್ತು ಅಕ್ಕಪಕ್ಕದಲ್ಲಿ ನಾಗರಾಜನ ಶಿಲ್ಪ ಇದ್ದರೆ, ಅದರ ಕೆಳಭಾಗದಲ್ಲಿ ಶಿವಲಿಂಗಕ್ಕೆ ಹಾಲು ಎರೆಯುತ್ತಿರುವ ನಂದಿಯ ಮೂರು ಆಯಾಮದ ಚಿತ್ರಗಳನ್ನು ಸುಂದರವಾಗಿ ಕೆಳದಿ ಶೈಲಿಯಲ್ಲಿ ಕೆತ್ತಲಾಗಿದೆ. ಈ ನಂದಿಗೆ ಒಂದು ದೇಹ ಮತ್ತು ಆರು ಮುಖಗಳನ್ನು ಹೊಂದಿದ್ದು, ಬೇರೆ ಬೇರೆ ಆಯಾಮಗಳಲ್ಲಿ ನೋಡಬಹುದು. ನಂದಿಯ ಮೇಲೆ ನಿರ್ವ್ಯಾಳಿ (ಮನುಷ್ಯನ ತಲೆ ಮತ್ತು ಸಿಂಹದ ದೇಹ) ಒಂದು ಕೈಯಲ್ಲಿ ಆರತಿ ಮಾಡುತ್ತ ಇನ್ನೊಂದು ಕೈಯಲ್ಲಿ ಗಂಟೆ ಬಾರಿಸುತ್ತಿರುವ ಚಿತ್ರ ಶೈವ ಪರಂಪರೆಯ ಕಾಪಾಲ ಪಂಥವನ್ನು ನೆನಪಿಸುತ್ತದೆ. ನಂದಿಯ ಕೆಳಭಾಗದಲ್ಲಿ ಗಣಪತಿಯ ಉಬ್ಬು ಶಿಲ್ಪ ಇದ್ದು, ಒಟ್ಟಾರೆ ಶಿವನ ಇಡೀ ಕುಟುಂಬವನ್ನು ಈ ಭಿತ್ತಿಯಲ್ಲಿ ನೋಡಬಹುದು.
ಇನ್ನೂ ಭಿತ್ತಿಯ ಎಡಭಾಗದಲ್ಲಿ ಎರಡು ಚಿತ್ರಗಳು ಇದ್ದು ಒಂದರಲ್ಲಿ ಮೇಲ್ಬಾಗದಲ್ಲಿ ಸಿಂಹಹಂಸ ಇದ್ದರೆ ಅದರ ಕೆಳಗೆ ಕೆಳದಿಯ ವೀರಯೋಧ ಕುದುರೆಯ ಮೇಲೆ ಕತ್ತಿ ಮತ್ತು ತನ್ನ ಸಿಂಹದ ಜೊತೆಗೆ ಹೋರಾಡುವ ಚಿತ್ರ ಸುಂದರವಾಗಿದೆ. ಕೊನೆಯ ಚಿತ್ರದಲ್ಲಿ ಮೇಲ್ಬಾಗದಲ್ಲಿ ಗಜಹಂಸವಿದ್ದರೆ ಅದರ ಕೆಳಭಾಗದಲ್ಲಿ ಆನೆಯ ಮೇಲೆ ಅಂಕುಶವನ್ನು ಹಿಡಿದು ಹೋರಾಡುತ್ತಿರುವ ಔರಂಗಜೇಬಿನ ಸೇನಾಧಿಪತಿ ಜಾನ್ ನಿಸಾರ್ ಖಾನ್ ಚಿತ್ರವನ್ನು ಕೆತ್ತಲಾಗಿದೆ.
ಸಮಾಧಿ ಸೂಚಕ ನಂದಿ:-
ವ್ಯಕ್ತಿಯೊಬ್ಬರ ಸಮಾಧಿ ಸೂಚಕ ನಂದಿಯ ಶಿಲ್ಪ ಮತ್ತು ಇತರ ನಂದಿಯ ಶಿಲ್ಪಗಳು ಭಿನ್ನವಾಗಿರುತ್ತದೆ. ಕುಳಿತ ನಂದಿಯ ಶಿಲ್ಪಗಳ ಮುಂದಿನ ಕಾಲುಗಳನ್ನು ಬಿಂಬಿಸುವ ರೀತಿಯಲ್ಲಿ ವ್ಯತ್ಯಾಸ ಇರುತ್ತದೆ. ಸಮಾಧಿಯ ಮೇಲಿರುವ ನಂದಿಯ ಬಲಗಾಲು ನೆಲಕ್ಕೆ ಊರಿದಂತೆ ಚಿತ್ರಿಸಲಾಗಿರುತ್ತದೆ. ಕೆಳದಿ ನಾಯಕರ ಕುಡಿಯಾಗಿರುವ ಕೊಡಗಿನ ಹಾಲೇರಿ ವಂಶಸ್ಥರ ಸಮಾಧಿಗಳು, ಕಿತ್ತೂರಿನ ದೇಸಾಯಿಗಳು ಮತ್ತು ಹೊನ್ನಾಳಿಯ ಹೀರೇಕಲ್ಮಠದ ಗದ್ದುಗೆಯ ಮೇಲಿರುವ ನಂದಿಯ ಬಲಗಾಲು ನೆಲಕ್ಕೆ ಊರಿದೆ.
ಬಿದನೂರಿನ ವೀರ ರಾಣಿ ಚೆನ್ನಮ್ಮಾಜಿ 25 ವರ್ಷ 4 ತಿಂಗಳು 20 ದಿನಗಳ ಕಾಲ ಪಶ್ಚಿಮ ಘಟ್ಟದ ಮೇಲೆ ಹಾಗೂ ಕೆಳಗೆ (ಕರಾವಳಿ) ಮತ್ತು ಕಾರವಾರದಿಂದ ಕೇರಳದ ಮಾಹೆವರೆಗು ವ್ಯಾಪಿಸಿದ ರಾಜ್ಯವನ್ನು ಸಮರ್ಥವಾಗಿ ರಾಜ್ಯಭಾರ ಮಾಡಿದಳು. ರಾಣಿ ಚೆನ್ನಮ್ಮಾಜಿ ಈಶ್ವರನಾಮ ಸಂವತ್ಸರದ ಶ್ರಾವಣ ಶುದ್ಧ ಚತುರ್ದಶಿಯಂದು ಲಿಂಗೈಕೆ ಆದ ನಂತರದಲ್ಲಿ ಈ ಕಲ್ಮಠದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಶುದ್ಧ ಚತುರ್ದಶಿಯಂದು ಅನ್ನ ಸಂತರ್ಪಣೆ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ ಇಂದು ಆ ವೀರ ರಾಣಿಯ ಗದ್ದುಗೆ “ಕಲ್ಮಠ” ಅನಾಥವಾಗಿದ್ದು ಯಾವುದೇ ಇಲಾಖೆ ಮತ್ತು ಮಠಮಾಣ್ಯಾಗಳು ಇದರ ನಿರ್ವಹಣೆಯ ಬಗ್ಗೆ ತಲೆಕೆಡಿಸಿ ಕೊಳ್ಳದಿರುವುದು ನಿಜಕ್ಕೂ ಶೋಚನೀಯ.
ಮಾಹಿತಿ ಮತ್ತು ಲೇಖನ: ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಕಾರ್ಯಕರ್ತರು, ಶಿವಮೊಗ್ಗ