ವಯನಾಡು: ದೇವರ ನಾಡಿನಲ್ಲಿನ ದೃಶ್ಯ ಕಂಡರೆ ಎಂತವರಿಗೂ ದೇವರೇ ಇಲ್ವೇನೋ? ಎಂಬ ಆಕ್ರೋಶ ಹೊರ ಬರುತ್ತದೆ. ಸ್ವರ್ಗದಂತಿದ್ದ ಆ ನಾಡಿನಲ್ಲಿ ಈಗ ಎತ್ತ ತಿರುಗಿದರೂ ಆಕ್ರಂದನದ್ದೇ ಸದ್ದು! ಗೋಳಾಟ, ಕೂಗಾಟ ಇನ್ನೂ ದೇವರಿಗೆ ಕೇಳಿಸುತ್ತಿಲ್ಲವೇ ಎಂಬ ನೋವು..
ಪ್ರಕೃತಿ ಮಾತೆಯ ಅರ್ಧ ನಿಮಿಷದ ಮುನಿಸಿಗೆ ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಒಂದೊಂದು ಮನೆಯಲ್ಲಿ ಒಂದೊಂದು ಕರುಳು ಹಿಂಡುವ ಕಥೆ. ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದ ದಂಪತಿಗೆ ಮಕ್ಕಳಿರಲಿಲ್ಲ. ಹೆಚ್ಚು ಕೂಲಿ ಒಂದಿಷ್ಟು ಹೆಚ್ಚಿನ ಸೌಕರ್ಯ ಸಿಗುತ್ತೆ ಅಂತಾ ಹುಟ್ಟೂರು ಬಿಟ್ಟು ಜಲಪ್ರಳಯವಾದ ವಯನಾಡಿನ (Wayanad) ಚೂರಲ್ಮಲಕ್ಕೆ (Chooralmala) ಬಂದು ನೆಲೆಸಿದ್ದರು. ಪತಿ ಕಾರ್ಪೆಂಟರ್, ಪತ್ನಿ ಟೀ ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು.
ದುಡಿದ ಹಣದಲ್ಲಿ ಒಂದಿಷ್ಟು ಉಳಿತಾಯ ಮಾಡಿ ಚೂರಲ್ಮಲದಲ್ಲಿ ಸ್ವಂತ ಮನೆ ಕಟ್ಟಿಸಿದ್ದರು. 6 ತಿಂಗಳ ಹಿಂದೆ ತಮ್ಮ ಬಂಧು ಬಾಂಧವರ ಕರೆಸಿ ಗೃಹ ಪ್ರವೇಶ ಮಾಡಿದ್ದರು. ಈಗ ಆ ಮನೆಯ ಜೊತೆಯೇ ಅವರೇ ಜಲಸಮಾಧಿಯಾಗಿ ಹೋಗಿದ್ದಾರೆ. ಕುಟುಂಬಸ್ಥರು ದೇವ್ರೇ ಏನಪ್ಪ ಇದು ಎಂದು ಅವರ ಕುಟುಂಬಸ್ಥರು ಮುಗಿಲು ನೋಡುತ್ತಿದ್ದಾರೆ.
ರಾಜೇಂದ್ರ ಮತ್ತು ರತ್ನಮ್ಮ ಎಂಬ ದಂಪತಿಗಳೇ ಮೂಲತಃ ಚಾಮರಾಜನಗರ ಜಿಲ್ಲೆಯ ಐರಸವಾಡಿ ಗ್ರಾಮದವರು. ಊರಲ್ಲೂ ಸ್ವಲ್ಪ ಜಮೀನಿದೆ. ನೆಂಟರಿಷ್ಟರೆಲ್ಲಾ ಊರಲ್ಲೇ ಇದ್ದಾರೆ. ಆದರೆ ಹೆಚ್ಚು ಕೂಲಿ ಸಿಗುತ್ತೆ, ಕಾಫಿ ಎಸ್ಟೇಟ್‌ನಲ್ಲಿ ಒಂದಿಷ್ಟು ಸವಲತ್ತು ಜಾಸ್ತಿ ಸಿಗುತ್ತದೆ ಎಂದು ಚೂರಲ್ಮಲಕ್ಕೆ ಬಂದು ನೆಲೆಸಿದ್ದರು. ಆದರೆ, ಈಗ ಜೀವ ಸಹಿತ ಜಲಸಮಾಧಿ ಆಗಿದ್ದಾರೆ.
ಜಲಸಮಾಧಿಯಾದ ಬಹುತೇಕರು ಕೆಳ ಮಧ್ಯಮ ವರ್ಗದವರು. ಹಳೆ ಮೈಸೂರು ಭಾಗದವರು. ನಮ್ಮಲ್ಲಿ ಕೂಲಿ ಕಡಿಮೆ. ಅದಲ್ಲದೆ ಕೂಲಿ ಕಾರ್ಮಿಕರಿಗೆ ಕ್ವಾಟರ್ಸ್ ವ್ಯವಸ್ಥೆ ಇರಲ್ಲ. ಆದರೆ ಇಲ್ಲಿ ನಮ್ಮಲಿಗೆ ಹೋಲಿಸಿದರೆ ಟೀ ಎಸ್ಟೇಟ್ ಗಳಲ್ಲಿ ಹೆಚ್ಚು ಕೂಲಿ ಸಿಗುತ್ತೆ. ಜೊತೆಗೆ ಇತರೇ ಸೌಕರ್ಯ ಬೇರೆ. ಹೀಗಾಗಿ ಇಲ್ಲಿಗೆ ಬಂದವರ ಸಂಖ್ಯೆ ಹೆಚ್ಚು ಬದುಕು ಕಟ್ಟಿಕೊಳ್ಳಲು ಬಂದವರು ಸುಖ ನಿದ್ರೆಯಲ್ಲೇ ತಮ್ಮ ಬದುಕು ಅಂತ್ಯಗೊಳಿಸಿಕೊಂಡಿದ್ದಾರೆ.








