ಚಾಮರಾಜನಗರ: ದಿನಕ್ಕೆ 15 ಸಾವಿರ ರೂ. ಸಂಬಳ ನೀಡಿ ಕಳ್ಳತನ ಮಾಡಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಪೊಲೀಸರು ಹೆಡೆಮೂರಿ ಕಟ್ಟಿದ್ದಾರೆ.
ಚಿನ್ನದ ವ್ಯಾಪಾರಿಗಳನ್ನೆ ಟಾರ್ಗೆಟ್ ಮಾಡಿ ರಾಬರಿ ಮಾಡುತ್ತಿದ್ದ ಈ ಕೇರಳ ಗ್ಯಾಂಗ್ನ (Kerala gang) ಅಸಲಿ ಮುಖವಾಡವನ್ನು ಪೊಲೀಸರು ಬಯಲಿಗೆ ತಂದಿದ್ದಾರೆ. ಈ ಪ್ರಕರಣದಲ್ಲಿ ದುಬೈನಲ್ಲಿಯೇ ಕುಳಿತು ರಾಜ್ಯದಲ್ಲಿ ಕಳ್ಳತನ ಮಾಡಿಸಲಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣಕ್ಕೆ ಸಂಬಂಧಿಸಿದಂತೆ 15ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಕೇವಲ 15 ಸಾವಿರ ರೂ. ಕೂಲಿಗಾಗಿ ಈ ಕೃತ್ಯವೆಸಗಿದ್ದು ಬೆಳಕಿಗೆ ಬಂದಿತ್ತು. ಈಗ ದುಬೈನಲ್ಲಿಯೇ ಕುಳಿತು ಕಳ್ಳತನ ಮಾಡಿಸುತ್ತಿದ್ದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಚಿನ್ನದ ಉದ್ಯಮಿಗಳನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಚಿನ್ನ ಮಾರಿ ತೆರಿಗೆ ಪಾವತಿಸದೆ ಹಣ ತರುತ್ತಿದ್ದವರನ್ನು ಅಡ್ಡ ಗಟ್ಟಿ ರಾಬರ ಮಾಡುತ್ತಿದ್ದರು. ಮೂರು ತಂಡಗಳಾಗಿ ಇದು ಕಾರ್ಯನಿರ್ವಹಿಸುತ್ತಿತ್ತು. ಹಣ ದೋಚುವವರು ಅಸಲಿಗೆ ಕಳ್ಳರು ಅಲ್ಲಾ. ಒಂದು ದಿನಕ್ಕೆ 15 ಸಾವಿರ ರೂ. ಹಣ ನೀಡಿ ಬೇರೆಯವರಿಂದ ಕಳ್ಳತನ ಮಾಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನ ನಂಬರ್ ಹಾಗೂ ಕಾರಿನ ಬಣ್ಣ ಹೇಳಿ ಆ ಕಾರಿನ ಮೇಲೆ ದಾಳಿ ಮಾಡಿ ಹಣ ತರುವಂತೆ ಕೇರಳ ಗ್ಯಾಂಗ್ ಹೇಳುತ್ತಿತ್ತು. ನಂತರ ನಿಗದಿತ ಸ್ಥಳಕ್ಕೆ ಬಂದು ಹಣದ ಬ್ಯಾಗ್ ಇಟ್ಟು ಹೋಗುವುದಷ್ಟೇ ಕಳ್ಳರ ಕೆಲಸ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.