ಟೆನಿಸ್ ಲೋಕದ ನವರಸ ನಾಯಕ ನೊವಾಕ್ ಜಾಕೊವಿಕ್
ನೊವಾಕ್ ಜಾಕೊವಿಕ್… ಸದ್ಯ ವಿಶ್ವ ಟೆನಿಸ್ ನ ಸಾರ್ವಭೌಮ. ಪ್ರತಿಷ್ಠಿತ 2021ರ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಸಂಖ್ಯೆಯನ್ನು 19ಕ್ಕೇರಿಸಿಕೊಂಡಿದ್ದಾರೆ.
ವಿಶ್ವದ ನಂಬರ್ ವನ್ ಟೆನಿಸ್ ಆಟಗಾರನಾಗಿರುವ ನೊವಾಕ್ ಜಾಕೊವಿಕ್ 2016ರ ನಂತರ ಇದೀಗ ಎರಡನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. 9 ಬಾರಿ ಆಸ್ಟ್ರೇಲಿಯನ್ ಓಪನ್, ಐದು ಬಾರಿ ವಿಂಬಲ್ಡನ್ ಮತ್ತು ಮೂರು ಬಾರಿ ಯುಎಸ್ ಓಪನ್ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಸತತ 325 ವಾರಗಳ ತನಕ ನಂಬರ್ ವನ್ ಸ್ಥಾನವನ್ನು ಕಾಯ್ದುಕೊಂಡ ಹೆಗ್ಗಳಿಕೆ ಕೂಡ ನೊವಾಕ್ ಜಾಕೊವಿಕ್ ಅವರಿಗಿದೆ.
ಹುಟ್ಟಿದ್ದು ಯುಗೊಸ್ಲೊವಿಯಾ… ಆದ್ರೆ ಬದುಕು ಕಟ್ಟಿಕೊಂಡಿದ್ದು ಸರ್ಬಿಯಾದಲ್ಲಿ. ವೃತ್ತಿಪರ ಟೆನಿಸ್ ಆಟಗಾರನಾಗಿದ್ರೂ ಜಾಕೊವಿಕ್ ಸಕಲ ಕಲಾವಲ್ಲಭ. ಆಟದ ಜತೆ ನವರಸಗಳನ್ನು ಮೈಗೂಡಿಸಿಕೊಂಡಿರುವ ಜಾಕೊವಿಕ್ ಲೈಪ್ ಅನ್ನು ಬಿಂದಾಸ್ ಆಗಿಯೇ ಎಂಜಾಯ್ ಮಾಡ್ತಾರೆ.
ಹೌದು, ಜಾಕೊವಿಕ್ ತುಂಬಾನೇ ತುಂಟ. ಆದ್ರೆ ಸ್ನೇಹ ಜೀವಿ. ಎಲ್ಲರ ಜತೆ ಬೆರೆಯುವ ಗುಣವಿತ್ತು. ಗೆಳೆಯರನ್ನು ಅಣಕಿಸುತ್ತಾ, ಮಿಮಿಕ್ರಿ ಮಾಡುತ್ತಾ, ಹಾಸ್ಯದ ಹೊನಲು ಹರಿಸುತ್ತಾ, ಮಾತಿನ ಚಟಾಕಿ ಹಾರಿಸುತ್ತಾ, ಮುಖ ಸಿಂಡರಿಸಿಕೊಳ್ಳುತ್ತಿರುವವರನ್ನು ನಗಿಸುತ್ತಾ, ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುವ ಕಲೆ ಜಾಕೊವಕ್ ಅವರಿಗಿತ್ತು.
ಅಣ್ಣಂದಿರ ನೆರಳಿನಲ್ಲಿ ಟೆನಿಸ್ ಆಟದತ್ತ ಆಕರ್ಷಿತರಾಗಿದ್ದ ಜಾಕೋವಿಕ್ ಅವ್ರಲ್ಲಿ ಅಪ್ರತಿಮ ಪ್ರತಿಭೆ ಇತ್ತು. ಬೆಳೆಯುವ ಸಿರಿ ಮೊಳಕೆಯಲ್ಲಿ ಅಂತಾರಲ್ಲ ಹಾಗೇ ಜಾಕೊವಿಕ್ ನೋಡ ನೋಡುತ್ತಲೇ ಟೆನಿಸ್ ಆಟದ ಗ್ರಾಮರ್ ಗಳನ್ನು ಕಲಿತುಬಿಟ್ರು. ವಯಸ್ಸಿಗೂ ಮೀರಿದ ಸಾಧನೆ ಮಾಡಿ ಮುಂದೊಂದು ದಿನ ಟೆನಿಸ್ ಜಗತ್ತನ್ನು ರೂಲ್ ಮಾಡ್ತಾರೆ ಅನ್ನೋ ಸೂಚನೆಯನ್ನೂ ಕೊಟ್ಟಿದ್ರು.
ಇದೆಲ್ಲಾದ್ರ ನಡುವೆ ತುಂಟಾಟ ಮಾಡುತ್ತಿದ್ದ ಜಾಕೊವಿಕ್ ಹೈಸ್ಕೂಲ್ ನಲ್ಲೇ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ರು. ಅಲ್ಲಿ ತನಕ ಕದ್ದುಮುಚ್ಚಿ ಓಡಾಡುತ್ತಿದ್ದ ಜಾಕೋವಿಕ್ 18ನೇ ವಯಸ್ಸಿನಲ್ಲಿ ಡೇಟಿಂಗ್ ಮಾಡಲು ಶುರು ಮಾಡಿದ್ರು. ಬಳಿಕ ನೇಮ್ ಫೇಮ್ ಬಂದ ನಂತರ ರಾಜರೋಷವಾಗಿ ತನ್ನ ಪ್ರೇಯಸಿ ಜತೆ ಓಡಾಡಿಕೊಂಡಿದ್ದ ಜಾಕೊವಿಕ್ ಪ್ರೀತಿಗೆ ಮಾತ್ರ ಕೈಕೊಡಲಿಲ್ಲ. ತನ್ನ ಯಶಸ್ಸಿನ ಹಿಂದೆ ಸ್ಪೂರ್ತಿಯ ಚಿಲುಮೆಯಾಗಿದ್ದ ಜೆಲೆನಾ ರಿಸ್ಟಿಕ್ ಜತೆ 2014ರಲ್ಲಿ ಮದುವೆಯಾದ್ರು.
ಆದ್ರೆ ಅದ್ಭುತ ಪ್ರತಿಭೆ ಜಾಕೊವಿಕ್ ಟೆನಿಸ್ ಅಂಗಣದಲ್ಲಿ ತುಂಬಾನೇ ಗಂಭೀರವಾಗಿರುತ್ತಿದ್ರು. ಅಭ್ಯಾಸದ ವೇಳೆಯಲ್ಲಿ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿರಲಿಲ್ಲ. ಮೊದಲು ಟೆನಿಸ್ ಅಭ್ಯಾಸ… ಆಮೇಲೆ ಇನ್ನಿತರ ಚಟುವಟಿಕೆಗಳು. ಹೀಗೆ ಶಿಸ್ತುಬದ್ಧ ಜೀವನದಲ್ಲಿ ಸಾಗಿ ಬಂದ ಜಾಕೊವಿಕ್ ಗೆ ವೃತ್ತಿಪರ ಟೆನಿಸ್ ನಲ್ಲಿ ಯಶ ಸಾಧಿಸುವುದು ಅಂದುಕೊಂಡಷ್ಟು ಸುಲಭವಿರಲಿಲ್ಲ.
ಅಂತಾರಾಷ್ಟ್ರೀಯ ಟೆನಿಸ್ ನ ಆರಂಭಿಕ ದಿನಗಳಲ್ಲಿ ರೋಜರ್ ಫೆಡರರ್, ರಫಾಲ್ ನಡಾಲ್, ಆಂಡಿ ಮುರೆಯಂತಹ ಘಟಾನುಘಟಿಗಳ ಸವಾಲನ್ನು ಎದುರಿಸಬೇಕಿತ್ತು. 2008ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ರೂ ಫೆಡರರ್, ನಡಾಲ್ ಆಟದ ಮುಂದೆ ಜಾಕೊವಿಕ್ ಮಂಕಾಗಿಬಿಟ್ಟಿದ್ರು.
ಆದ್ರೆ 2011ರ ನಂತರ ವಿಶ್ವ ಟೆನಿಸ್ ನಲ್ಲಿ ನೊವಾಕ್ ಜಾಕೊವಿಕ್ ಪ್ರಖರವಾಗಿ ಹೊಳೆಯಲು ಶುರು ಮಾಡಿದ್ರು. ಫೆಡರರ್, ನಡಾಲ್ ನಂತಹ ಅನುಭವಿ ಆಟಗಾರರಿಗೆ ನೀರು ಕುಡಿಸಿದ್ರು. ನೋಡ ನೋಡುತ್ತಲೇ ಗ್ರ್ಯಾಂಡ್ ಸ್ಲಾಂ, ಎಟಿಪಿ ಪ್ರಶಸ್ತಿಗಳನ್ನು ಗೆದ್ದುಕೊಂಡು ನಂಬರ್ ವನ್ ಸ್ಥಾನವನ್ನು ಅಲಂಕರಿಸಿದ್ರು.
ವೃತ್ತಿಪರ ಟೆನಿಸ್ ಗೆ ಎಂಟ್ರಿಯಾದ ಬಳಿಕ ಆರು ಮಂದಿ ಕೋಚ್ ಗಳ ಗರಡಿಯಲ್ಲಿ ಪಳಗಿರುವ ಜಾಕೊವಿಕ್ ಗೆ ಸದ್ಯ ಟೆನಿಸ್ ದಂತ ಕತೆ ಬೊರಿಸ್ ಬೇಕರ್ ಮಾರ್ಗದರ್ಶನ ನೀಡುತ್ತಿದ್ದಾರೆ.
ಹಾಗಂತ ನೊವಾಕ್ ಜಾಕೊವಿಕ್ ದಿನವಿಡಿ ಟೆನಿಸ್ ಬಗ್ಗೆ ಯೋಚನೆ ಮಾಡುತ್ತಾರೆ ಅಂದ್ರೆ ನಿಮ್ಮ ಊಹೆ ತಪ್ಪಾಗುತ್ತದೆ. ಬದುಕನ್ನು ಹೇಗೆ ಎಲ್ಲಾ ಎಂಜಾಯ್ ಮಾಡಬಹುದು ಎಂಬುದನ್ನು ಜಾಕೊವಿಕ್ ಬಳಿ ಕಲಿಯಬೇಕು. ನಿಜ, ಜಾಕೊವಿಕ್ ಒಬ್ಬ ಪಕ್ಕಾ ಎಂಟೆಟೈನರ್. ಹಾಡುಗಾರ, ಹಾಸ್ಯಗಾರ, ನಿರೂಪಕನೂ ಹೌದು. ಬಿಡುವಿನ ವೇಳೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟಿವಿ ಚಾನೆಲ್ ಗಳಿಗೆ ಟಿಆರ್ ಪಿ ತಂದುಕೊಡಬಲ್ಲ ಸಾಮಥ್ರ್ಯ ಕೂಡ ಜಾಕೊವಿಕ್ ಅವರಿಗಿದೆ. ವಿವಿಧ ಚಾನೆಲ್ ಗಳಿಗೆ ಕಾರ್ಯಕ್ರಮ ನಿರೂಪಿಸುವ ಮಾತಿನ ಮೋಡಿಗಾರನೂ ಹೌದು.
ಅಷ್ಟೇ ಅಲ್ಲ, ಹಾಲಿವುಡ್ ಚಿತ್ರ ನಿರ್ಮಾಣ ಕೂಡ ಮಾಡಿದ್ದಾರೆ. ಜತೆಗೆ ರಿಯಲ್ ಎಸ್ಟೆಟ್ ಬಿಸಿನೆಸ್ ಜತೆ ಕ್ರೀಡಾ ಉದ್ಯಮವನ್ನು ಆರಂಭಿಸಿದ್ದಾರೆ. ಈಗಾಗಲೇ ನಾನಾ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿರುವ ಸಮಾಜ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಹಾಗೇ ಜಾಕೊವಿಕ್ ಮೈದಾನದಲ್ಲೇ ಟೆನಿಸ್ ಅಭಿಮಾನಿಗಳಲ್ಲಿ ಪುಕ್ಕಟ್ಟೆ ಮನರಂಜನೆ ನೀಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಶರಪೆÇವಾ, ಸೆರೆನಾ ವಿಲಿಯಮ್ಸ್ ಸೇರಿದಂತೆ ತನ್ನ ಸಹ ಆಟಗಾರರು ಯಾವ ರೀತಿ ಮೈದಾನದಲ್ಲಿ ಆಡುತ್ತಾರೆ ಅನ್ನೋದನ್ನು ಅಣಕಿಸುವ ಪರಿಯನ್ನು ನೋಡುವುದೇ ಚೆಂದ.
ಒಟ್ಟಿನಲ್ಲಿ ಜಾಕೊವಿಕ್ ಅನ್ನೋ ಹೆಸರು ವಿಶ್ವ ಟೆನಿಸ್ ನಲ್ಲಿ ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ ಹೆಸರು. ಬಹುತೇಕ ಟೆನಿಸ್ ಆಟಗಾರರು ಗಂಭೀರವಾಗಿರುತ್ತಾರೆ. ಆದ್ರೆ ಜಾಕೊವಿಕ್ ಹಾಗಲ್ಲ. ತಾನು ನಗುತ್ತಾ, ಅಭಿಮಾನಿಗಳನ್ನು ನಗಿಸುತ್ತಾ, ತಾನು ಆಡುತ್ತಾ, ಅಭಿಮಾನಿಗಳನ್ನು ರಂಜಿಸುತ್ತಾ ಟ್ರೋಫಿಗೆ ಚುಂಬಿಸುವ ರೀತಿಯೇ ಒಂಥಾರ ಖುಷಿ ಕೊಡುತ್ತೆ. ಏನೇ ಆಗ್ಲಿ, ಜಾಕೊವಿಕ್ ಅವ್ರ ಹಾವ -ಭಾವ, ಆಟ,- ನೋಟ, ಸ್ವಭಾವ- ವ್ಯಕ್ತಿತ್ವಕ್ಕೆ ಮನ ಸೋಲದವರೇ ಇಲ್ಲ..!








