ಡೇವಿಡ್ ಮಲನ್(54) ಅವರ ಆಕರ್ಷಕ ಅರ್ಧಶತಕ ಹಾಗೂ ಬ್ರೈಡನ್ ಕಾರ್ಸೆ(3/23) ಚಾಣಾಕ್ಷ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳ ಜಯ ದಾಖಲಿಸಿದೆ.
ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ನ್ಯೂಜಿಲೆಂಡ್ ತಂಡವನ್ನ 139 ರನ್‌ಗಳ ಅಲ್ಪಮೊತ್ತಕ್ಕೆ ಕಟ್ಟಿಹಾಕಿತು. ಈ ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್, ಯಾವುದೇ ಒತ್ತಡವಿಲ್ಲದೆ 14 ಓವರ್‌ಗಳಲ್ಲಿ 143/3 ರನ್‌ಗಳಿಸಿ ಗೆಲುವಿನ ದಡಸೇರಿತು. ಆ ಮೂಲಕ 4 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ನ್ಯೂಜಿ಼ಲೆಂಡ್, ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನ ಎದುರಿಸಲು ತಿಣುಕಾಡಿದರು. ಪ್ರಮುಖವಾಗಿ ಬ್ರೈಡನ್ ಕಾರ್ಸೆ(3/23) ಹಾಗೂ ಲ್ಯೂಕ್ ವುಡ್(3/37) ಕಿವೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ನ್ಯೂಜಿ಼ಲೆಂಡ್ ಪರ ಗ್ಲೆನ್ ಫಿಲಿಪ್ಸ್(41) ಹಾಗೂ ಆರಂಭಿಕ ಬ್ಯಾಟರ್ ಫಿನ್ ಅಲೆನ್(21) ಹೊರತುಪಡಿಸಿ ಉಳಿದವರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಪರಿಣಾಮ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 139 ರನ್‌ಗಳಿಸಷ್ಟೇ ಸಾಧ್ಯವಾಯಿತು. ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸೆ ಹಾಗೂ ಲ್ಯೂಕ್ ವುಡ್ ಅವರೊಂದಿಗೆ ರಶೀದ್, ಮೊಯಿನ್ ಹಾಗೂ ಲಿವಿಂಗ್‌ಸ್ಟೋನ್ ತಲಾ 1 ವಿಕೆಟ್ ಪಡೆದರು.
ನ್ಯೂಜಿ಼ಲೆಂಡ್ ನೀಡಿದ 140 ರನ್‌ಗಳ ಸಾಧಾರಣ ಗುರಿಯನ್ನ ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲೇ ಬೈರ್ಸ್ಟೋವ್(4) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ಆದರೆ ನಂತರದಲ್ಲಿ ವಿಲ್ ಜ್ಯಾಕ್ಸ್(22), ಡಾವಿಡ್ ಮಲಾನ್(54) ಹಾಗೂ ಹ್ಯಾರಿ ಬ್ರೂಕ್(43*) ಉತ್ತಮ ಬ್ಯಾಟಿಂಗ್‌ನಿಂದ ತಂಡವನ್ನ ಗೆಲುವಿನ ದಡಮುಟ್ಟಿಸಿದರು. ಕಿವೀಸ್ ಪರ ಸೌಥಿ, ಶೋಧಿ ಹಾಗೂ ಫೆರ್ಗುಸನ್ ತಲಾ 1 ವಿಕೆಟ್ ಪಡೆದರು. ಇಂಗ್ಲೆಂಡ್ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಬ್ರೈಡನ್ ಕಾರ್ಸೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 2ನೇ ಟಿ20 ಪಂದ್ಯ ಸೆಪ್ಟೆಂಬರ್ 1ರಂದು ನಡೆಯಲಿದೆ.