ಕೊರೋನಾ ಲಸಿಕೆಯ ಕೊನೆಯ ಹಂತದ ಪ್ರಯೋಗ ಪ್ರಾರಂಭಿಸಿದ ಕ್ಯೂರ್ ವಾಕ್
ಫ್ರಾಂಕ್ಫರ್ಟ್ ಆಯಮ್ ಮೈನ್, ಜೂನ್ 18: ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೋನಾ ಸೋಂಕಿಗೆ ಲಸಿಕೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಕಂಪನಿಗಳಲ್ಲಿ ಜರ್ಮನಿಯ ಬಯೋಟೆಕ್ ಸಂಸ್ಥೆ ಕ್ಯೂರ್ವಾಕ್ ಕೂಡ ಒಂದು. ಜರ್ಮನಿಯ ಬಯೋಟೆಕ್ ಸಂಸ್ಥೆ ಕ್ಯೂರ್ವಾಕ್ ಕೊರೋನಾ ಸೋಂಕಿನ ಲಸಿಕೆಯ ಪ್ರಯೋಗವನ್ನು ಈಗಾಗಲೇ ಆರಂಭಿಸಿದ್ದು, ಮಾನವನ ಮೇಲೆ ಪ್ರಯೋಗಗಳನ್ನು ಪ್ರಾರಂಭಿಸಿದ ಜರ್ಮನಿಯ ಎರಡನೇ ಕಂಪನಿಯಾಗಿದೆ ಎಂದು ದೇಶದ ಲಸಿಕೆ ನಿಯಂತ್ರಕ ಬುಧವಾರ ದೃಢಪಡಿಸಿದೆ.
ಸುಮಾರು 168 ಆರೋಗ್ಯವಂತ ಮಂದಿಯ ಮೇಲೆ ಪ್ರಾಯೋಗಿಕ ಅಧ್ಯಯನವನ್ನು ನಡೆಸಲು ನಿರ್ಧರಿಸಿದ್ದು, ಮೊದಲಿಗೆ 144 ಜನರಿಗೆ ಪ್ರಾಯೋಗಿಕ ಲಸಿಕೆ ನೀಡಲಾಗುವುದು. ನೈಋತ್ಯ ರಾಜ್ಯವಾದ ಬಾಡೆನ್-ವುರ್ಟೆಂಬರ್ಗ್ನ ಟೂಬಿಂಗನ್ ಮೂಲದ ಕಂಪನಿಯು, ಈ ವರ್ಷದ ಶರತ್ಕಾಲದ ವೇಳೆಗೆ ಪ್ರಾಯೋಗಿಕ ಪ್ರಯೋಗದ ಮೊದಲ ಹಂತದಿಂದ ಅರ್ಥಪೂರ್ಣ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದೆ.
ಪ್ರಾಯೋಗಿಕ ಪ್ರಯೋಗ ಸಫಲವಾದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ನ ಮೊದಲೇ ಬಹುದೊಡ್ಡ ಸಂಖ್ಯೆಯಲ್ಲಿ ಲಸಿಕೆಯ ಪ್ರಯೋಗ ಪ್ರಾರಂಭವಾಗಬಹುದು ಎಂದು ಕ್ಯೂರ್ ವಾಕ್ ತಿಳಿಸಿದೆ. ಪ್ರಾಯೋಗಿಕ ಪ್ರಯೋಗಗಳ ಫಲಿತಾಂಶಗಳು ತುಂಬಾ ಉತ್ತಮವಾಗಿದ್ದರೆ, 2021 ರ ಪ್ರಾರಂಭದಿಂದಲೇ ಕ್ಯುರೆವಾಕ್ ಕೊರೋನಾ ವೈರಸ್ ಸೋಂಕಿನ ಲಸಿಕೆಯ ಅನುಮೋದನೆಗೆ ಅರ್ಜಿ ಸಲ್ಲಿಸಬಹುದು ಎಂದು ಜರ್ಮನಿಯ ಲಸಿಕೆ ನಿಯಂತ್ರಕ ಪಿಇಐ ಹೇಳಿದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಕೊರೊನಾ ಸೋಂಕಿನ ಲಸಿಕೆ ಮಾರುಕಟ್ಟೆಗೆ ಬರಬಹುದು ಎಂದು ಕ್ಯುರೆವಾಕ್ ಹೇಳಿದೆ.