ಕರೋನಾ ಕಲಿಸಿದ ಜೀವನ ಪಾಠವನ್ನೇ ನೆಟ್ಟಗೆ ಕಲಿಯದ ನಾವು ಪ್ರಜ್ಞಾವಂತ ನಾಗರೀಕರಾ? ಅಸಲು ಮನುಷ್ಯರಾ?:

1 min read
Covid victims bodies

ಕರೋನಾ ಕಲಿಸಿದ ಜೀವನ ಪಾಠವನ್ನೇ ನೆಟ್ಟಗೆ ಕಲಿಯದ ನಾವು ಪ್ರಜ್ಞಾವಂತ ನಾಗರೀಕರಾ? ಅಸಲು ಮನುಷ್ಯರಾ?: Marjala manthana coronavirus

ಕರೋನಾ ನಮಗೆ ಎಂತಹ ಪಾಠ ಕಲಿಸಿತ್ತು. ಆದರೂ ಬುದ್ದಿ ಕಲಿಯದ ನಾವುಗಳು ಈ ಜನ್ಮದಲ್ಲಿ ಬದಲಾಗಲ್ಲ. ನಮಗೆ ಸಾವೂ ಸಹ ಸರಿಯಾದ ಶಿಕ್ಷೆಯಾಗಲಾರದು.. ನಮ್ಮ ಪ್ರಜ್ಞಾವಂತಿಕೆಗಷ್ಟು ಬೆಂಕಿ ಬೀಳಾ! ಕರೋನಾ ಪ್ರಭಾವ ಕಡಿಮೆಯಾಗುತ್ತಿದ್ದ ಹಾಗೆ ಮತ್ತೆ ಶುರುವಾಯ್ತಲ್ಲ; ಎಡ – ಬಲ ವಿಂಗಡಣೆ. ಭಕ್ತ – ಗುಲಾಮ – ಗಂಜಿ ಗಿರಾಕಿಗಳೆಂಬ ವ್ಯಂಗ್ಯ. ಕಾಫಿರ – ತುರ್ಕ – ಕಿರಿಸ್ತಾನಿ ಬೈಗುಳ
ಕಾಂಗಿ – ಕಮ್ಮಿ – ಚಡ್ಡಿಗಳೆಂಬ ಕುಹಕ. ಮೋದಿ – ಯೋಗಿ – ರಾಹುಲ್ ನಿತ್ಯ ಭಜನೆ. ಹಣ – ಅಧಿಕಾರ – ಪ್ರತಿಷ್ಠೆಗಳ ವೈಭವೀಕರಣ. ಜಾತಿ – ಮತ – ಪಂಥ – ಪಂಗಡ – ಧರ್ಮಗಳಾಚೆಗೆ ನಾವು ಮನುಷ್ಯರು, ನಮಗೆಲ್ಲರಿಗೂ ಒಂದೇ ತರಹದ ನೋವುಗಳಾಗುತ್ತವೆ. ನಮ್ಮ ಮನೆಗಳಲ್ಲೂ ಸಾವಿನ ರೌದ್ರನರ್ತನ ನಡೆಯುತ್ತದೆ. ನಮ್ಮೆಲ್ಲರಿಗೂ ಉಸಿರಾಟದ ಸಮಸ್ಯೆಯಾಗುತ್ತದೆ. ಕೆಮ್ಮು ಜ್ವರ ಥಂಡಿ ಬರುತ್ತದೆ. ಕರೋನಾ ವೈರಾಣು ನಾವ್ಯಾರು ಅಂತ ನೋಡದೆ, ಭೇದವೆಣಿಸದೇ ಎಲ್ಲರ ದೇಹವನ್ನು ಹೊಕ್ಕು ಆಡಿಸುತ್ತದೆ. ಆಸ್ಪತ್ರೆಗಳಲ್ಲಿ ನಮಗೆಲ್ಲರಿಗೂ ಒಂದೇ ಬಗೆಯ ಮಾತ್ರೆ, ಇಂಜೆಕ್ಷನ್, ವೆಂಟಿಲೇಷನ್, ಆಕ್ಸಿಜನ್ ಪೂರೈಕೆಯಾಗುತ್ತದೆ. ನಿರಂತರ ಸಾವುಗಳು ನಮ್ಮೆಲ್ಲರಲ್ಲೂ ಒಂದೇ ಬಗೆಯ ಹತಾಶೆ ಖಿನ್ನತೆ ಮೂಡಿಸುತ್ತದೆ. ಹೀಗೆ ಎಲ್ಲವೂ ಅನುಭವಗಳಾಗಿದ್ದವು. ಆದರೆ ಪಾಠ ಕಲಿತೆವಾ ನಾವು?
Marjala manthana coronavirus
covid

ಅತ್ಯಂತ ನೋವಿನಿಂದ ಈ ಮಾತಾಡುತ್ತಿದ್ದೇನೆ. ನಾವೆಲ್ಲರೂ ನಮ್ಮ ನಮ್ಮ ಆತ್ಮ ಸಾಕ್ಷಿಯನ್ನು ಪ್ರಶ್ನಿಸೋಣ. ಈಗಲೂ ಅಂಡೇ ಪಿರ್ಕಿ ದರಿದ್ರ ಹೊಣೆಗೇಡಿ ರಾಜಕಾರಣಿಗಳನ್ನು ಅವತಾರ ಪುರುಷರು ಅಂತ ಪೂಜಿಸುತ್ತೀವಲ್ಲ ನಮ್ಮಂತಹ ಅನಿಷ್ಟ ಜೀವಿಗಳು, ಪರಮ ಮೂರ್ಖ ಶಿಖಾಮಣಿಗಳು ಮತ್ತೆಲ್ಲಾದರೂ ಇರಲು ಸಾಧ್ಯವೇ? ಯಾವನೋ ಮಹಾನುಭಾವ ಪ್ರವಾಸಿಗ ನೂರಾರು ವರ್ಷಗಳ ಹಿಂದೆ ಭಾರತಕ್ಕೆ ಬಂದವನು ವಾಪಾಸು ತನ್ನ ದೇಶಕ್ಕೆ ಮರಳಿದ ನಂತರ ಹೇಳುತ್ತಿದ್ದನಂತೆ. ಭಾರತ ನಿಜಕ್ಕೂ ಭವ್ಯ, ಅದ್ಭುತ ದೇಶ. ಆದರೆ ಭಾರತೀಯರು ನಿಜಕ್ಕೂ ಅಷ್ಟೇ ಅದ್ಭುತ ಮೂರ್ಖರು. ಆವತ್ತಿಗೂ ಇವತ್ತಿಗೂ ವ್ಯತ್ಯಾಸವೇನೆಂದರೆ, ಅವತ್ತಿಗಿಂತ ಇವತ್ತು ಅವಿವೇಕಿಗಳ ಸಂಖ್ಯೆ ಹೆಚ್ಚಾಗಿದೆ. ನಮಗೆ ತುಳಿಸಿಕೊಂಡು, ಆಳಿಸಿಕೊಂಡು, ದಬ್ಬಾಳಿಕೆಗಳನ್ನು ದೌರ್ಜನ್ಯಗಳನ್ನು ಸಹಿಸಿಕೊಂಡು, ಇವೆಲ್ಲವೂ ನಮ್ಮ ಪೂರ್ವ ಜನ್ಮದ ಕರ್ಮಗಳು ಅಂತ ಗೊಜ್ಜು ಬೀಸಿ ತೌಡು ಕುಟ್ಟುವುದು ಅಭ್ಯಾಸವಾಗಿಹೋಗಿದೆ. ನಿಜ ನಮಗೆ ಸಾವೂ ಸಹ ಸರಿಯಾದ ಶಿಕ್ಷೆ ಅಲ್ಲ.

ಕೋವಿಡ್ ಮೊದಲ ಅಲೆ ಅಥವಾ ಕೋವಿಡ್ ಬಂದ ಸಂದರ್ಭದಲ್ಲಿ, ಯಾರಾದರೂ ಕೋವಿಡ್ ರೋಗಿ ಇದ್ದಾನೆಂದರೆ ಆ ರಸ್ತೆ ಸ್ಮಷಾನ ಸದೃಶ. ಅಲ್ಲಿ ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡಲಾಗುತ್ತಿತ್ತು. ಅಲ್ಲಿದ್ದ ಕೋವಿಡ್ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಮುಚ್ಚಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆ ರಸ್ತೆಗೆ ಕಡೆಗೆ ತಿರುಗಲೂ ಜನ ಭಯ ಪಡುತ್ತಿದ್ದರು. ಆ ಇಡೀ ರಸ್ತೆ ನಿಷಿದ್ಧ ವಲಯ ಮತ್ತು ಅದರ ಸುತ್ತಮುತ್ತಲ ರಸ್ತೆಗಳ ಜನರಿಗೆ ನಿತ್ಯ ಅಭದ್ರತೆ ಆತಂಕ. ಆದರೀಗ, ಕೋವಿಡ್ ಮೊದಲ ಅಲೆಗಿಂತ ಮಾರಣಾಂತಿಕ ಎನ್ನಲಾಗುತ್ತಿರುವ ಎರಡನೆಯ ಅಲೆ ಬಂದಿದೆ, ಈಗ: ನಿತ್ಯ ನೂರಾರು ಆಂಬ್ಯುಲೆನ್ಸ್ ಕೂಗಿಕೊಳ್ಳುತ್ತಾ ರಸ್ತೆಯಲ್ಲಿ ಓಡುತ್ತವೆ. ಮನೆಯಲ್ಲಿರುವ ನಾವು ನಿರ್ಲಿಪ್ತವಾಗಿ ಹಣಕಿ ನೋಡಿ ಸುಮ್ಮನಾಗುತ್ತೇವೆ. ನಮ್ಮ ಮನೆಯ ಟಿವಿಯೊಳಗಿಂದ ನ್ಯೂಸ್ ಚಾನಲ್ ಕೂಗುಮಾರಿಗಳು ಒಂದೇ ಸಮನೆ ಕೂಗಿಕೊಳ್ಳುತ್ತವೆ. ಅದಕ್ಕೂ ನಮ್ಮ ಪ್ರತಿಕ್ರಿಯೆ ಇದೇ.
ಕೋವಿಡ್ ಆಸ್ಪತ್ರೆ ಎಂದರೆ ಭಯ ಪಡುತ್ತಿದ್ದ ವಾತಾವರಣದಿಂದ ಹೊರಬಂದ ನಾವು, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆಧಾರ್ ಕಾರ್ಡ್ ಹುಡುಕುತ್ತೇವೆ. ಬೆಡ್ ಗಳ ಕೊರತೆಯಿಂದ ಆಸ್ಪತ್ರೆಯ ಮುಂಭಾಗದಲ್ಲಿ ಫುಟ್ ಪಾತ್ ನಲ್ಲಿ ಕುಳಿತ ರೋಗಿಗಳನ್ನು ದಾಟಿ ಹೋಗುತ್ತೇವೆ. ಆಕ್ಸಿಜನ್ ಸಿಲಿಂಡರ್ ಗಳ ಬಾಲವನ್ನು ಮೂಗಿಗೆ ಸಿಲುಕಿಸಿದವರ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ನೋಡುತ್ತಾ ಸಿಎಂಗೆ ಹಿಡಿಶಾಪ ಹಾಕುತ್ತೇವೆ. ಮತ್ತೆ ಲಾಕ್ ಡೌನ್ ಆಗತ್ತೇನೋ ಅಂತ ಭಯ ಪಟ್ಟುಕೊಳ್ಳುತ್ತೇವೆ. ನಾಳಿನ ಬದುಕು ಹೇಗೆ ಎಂಬ ಭಯ ಕೋವಿಡ್ ಗಿಂತ ಹೆಚ್ಚಾಗಿ ಹೆದರಿಸುತ್ತಿದೆ.

Covid 19 second wave

ಕ್ರಮೇಣ ನಾವು ಕೋವಿಡ್ ಜೊತೆ ಬದುಕುವ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಒಲ್ಲದ ಗಂಡನ ಜೊತೆ ಅಡ್ಜೆಸ್ಟ್ ಮಾಡಿಕೊಂಡು ಸಂಸಾರ ದೂಡುವ ಹೆಂಡತಿಯ ಪಾಡು ನಮ್ಮದು. “ಓಹ್ ಕೋವಿಡ್ಡಾ!!!” ಎಂಬ ಆತಂಕ ಆಶ್ಚರ್ಯದ ಉದ್ಘಾರದ ಬದಲು “ಓ ಕೋವಿಡ್ಡಾ, ಹಹ್!” ಎಂಬ ಸರ್ವೇ ಸಾಧಾರಣ ಉಡಾಫೆ ಬೆರೆತ ಉದ್ಘಾರದ ಜೊತೆ ನಿಟ್ಟುಸಿರು ಹೊರಬರುತ್ತಿದೆ.
ನಾಳೆಗಳ ಬಗ್ಗೆ ನಮಗೆ ಈಗಲೂ ಚಿಂತೆಯಿಲ್ಲ. ಇಷ್ಟೆಲ್ಲಾ ಆಯ್ತಲ್ಲ, ಮತ್ತೆ ಚುನಾವಣೆ ಬಂದಾಗ ನಮ್ಮ ಆದ್ಯತೆ ಮಾತ್ರ ಬದಲಾಗುವುದೇ ಇಲ್ಲ. ನಮ್ಮ ಜಾತಿ, ನಮ್ಮ ಧರ್ಮ, ಹಿಂದುತ್ವದ ಅಜೆಂಡಾ, ಅವರಿಗೆ ಪರ್ಯಾಯ ಬೇರೆ ಯಾರಿದ್ದಾರೆ? ಹಾಳಾಗಿ ಹೋಗಲಿ ಬಿಡಿ ಅಂತ ಮತ್ತೆ ಅವರನ್ನೇ ಅಧಿಕಾರಕ್ಕೆ ಕರೆತರುತ್ತೇವೆ. ಬೇಕಿದ್ದರೇ ಕಾದು ನೋಡಿ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಚುನಾವಣೆ ಮತ್ತು ಬೆಳಗಾವಿ ಲೋಕಸಭಾ ಚುನಾವಣೆಗಳ ಫಲಿತಾಂಶದಲ್ಲಿ ಆಳುವ ಸರ್ಕಾರವೇ ಮತ್ತೆ ಗೆದ್ದು ಬರುತ್ತದೆ.

ಲಾಸ್ಟ್ ವರ್ಡ್: ಪ್ರಜೆಗಳೇ ಬೇರೆ ಪ್ರಭುತ್ವವೇ ಬೇರೆ. ಡೆಮಾಕ್ರಸಿ ಎನ್ನುವುದು ಮಿಥ್ ಅಷ್ಟೇ. ಯಾವತ್ತೂ, ಯಾವುದೇ ಸರ್ಕಾರ ಜನಪರ ಆಶಯಗಳೊಂದಿಗೆ ವರ್ತಿಸುವುದಿಲ್ಲ. ಆಳುವ ಸರ್ಕಾರದ ಹೊಣೆಗೇಡಿತನವೂ ನಮಗೆ ರೂಢಿಯಾಗುತ್ತಿದೆ. ನಾವು ನಿಧಾನ ಸರ್ಕಾರದ ಮೇಲೆ ಅವಲಂಭನೆಯಿಂದ ವಿಮುಖರಾಗುತ್ತಿದ್ದೇವೆ. ಸರ್ಕಾರದ ಮೇಲಿನ ನಂಬಿಕೆಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದೇವೆ. ಇನ್ನೊಂದರ್ಥದಲ್ಲಿ ನಮ್ಮ ಪ್ರಜ್ಞಾವಂತಿಕೆಯನ್ನು ಕೊಂದುಕೊಳ್ಳುತ್ತಿದ್ದೇವೆ. ಪ್ರಶ್ನಿಸುವ ಮನೋಭಾವನೆಯನ್ನೇ ಮರೆಯುತ್ತಿದ್ದೇವೆ. ಇದು ಇಂಡಿಯಾ! ನಾವೆಲ್ಲರೂ ಪ್ರಜ್ಞೆ ಸತ್ತ, ನರ ಸತ್ತ, ವಿವೇಕವಿಲ್ಲದ ಇಂಡಿಯನ್ನರು..

***

ಗಡಿಗಳಿಲ್ಲದ ಸುಂದರ ದ್ವೇಷರಹಿತ ವಿಶ್ವದ ಕನಸು ಕಾಣುವುದೇ ನಿಜವಾದ ಮಾನವಧರ್ಮ; ದ್ವೇಷ ಅಳಿಯಲಿ ಪ್ರೀತಿ ಆಳಲಿ

“ಕರೋನಾಘಾತಕ್ಕೆ ಸಿಕ್ಕು ತತ್ತರಿಸುತ್ತಿರೋ ಭಾರತಕ್ಕೆ ಪರಿಹಾರ ಸಾಮಗ್ರಿಗಳನ್ನು ಕಳಿಸಲು ಸಿದ್ದರಿದ್ದೇವೆ – ಪಾಕ್ ಪ್ರಧಾನಿ ಇಮ್ರಾನ್ ಖಾನ್”
“ಕರೋನಾ ಕಾರಣದಿಂದ ಭಾರತದಲ್ಲಿ ಉಂಟಾಗಿರುವ ಆಕ್ಸಿಜನ್ ಅಭಾವ ನೀಗಿಸಲು ಮಾಜಿ ಕ್ರಿಕೇಟಿಗ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೊಯೆಬ್ ಅಕ್ತರ್ ಪಾಕಿಸ್ತಾನ ಸರ್ಕಾರಕ್ಕೆ ಮನವಿ”
“ಕೋವಿಡ್ ಸಂಕಷ್ಟದ ವಿರುದ್ಧ ಭಾರತಕ್ಕೆ ನೆರವು ನೀಡಲು ಪಾಕಿಸ್ತಾನದ ಎದಿ ಫೌಂಡೇಷನ್ ಸಿದ್ಧ. 50 ಆಂಬ್ಯುಲೆನ್ಸ್ ಕಳಿಸುವ ಸಿದ್ಧತೆಯಲ್ಲಿದ್ದೇವೆ ಎಂದ ಎದಿ ಫೌಂಡೇಶನ್ ಮುಖ್ಯಸ್ಥ ಫೈಸಲ್ ಎದಿ ಪ್ರಧಾನಿ ಮೋದಿಯವರಿಗೆ ಪತ್ರ.”

follow COVID-19 norms

ಈ ಮೇಲಿನ ಮೂರು ಸುದ್ದಿಗಳನ್ನು ಗಮನಿಸಿ. ಕೋವಿಡ್ ಮಹಾಮಾರಿ ಇಡೀ ವಿಶ್ವವನ್ನೇ ಅಲುಗಾಡಿಸುತ್ತಿರುವ ಈ ಸಂಕಟದ ಕಾಲದಲ್ಲಿ ನಮ್ಮ ಶತ್ರು ರಾಷ್ಟ್ರವಾದರೂ ಪಾಕ್ ಶತ್ರುತ್ವ ಮರೆತು ಮಾನವೀಯತೆ ತೋರಲು ಮುಂದಾಗಿದೆ. ನಾವೆಲ್ಲಾ ಪಾಕ್ ಅನ್ನು ನಿರ್ನಾಮ ಮಾಡಲು ಎಷ್ಟೆಲ್ಲಾ ಕನಸು ಕಂಡಿದ್ದೆವು. ಆದರೀಗ ಅದೇ ಪಾಪಿ ಪಾಕ್ ನಮಗೆ ನೆರವು ನೀಡುವ ಮಾತಾಡುತ್ತಿದೆ. ಹಾಗಂತ ಪಾಕ್ ನ ಹಳೆಯ ಕೃತ್ಯಗಳನ್ನು ಕ್ಷಮಿಸಿಬಿಡಬೇಕು ಎನ್ನುತ್ತಿಲ್ಲ. ಅಥವಾ ನಾಳೆ ಇದೇ ಪಾಕ್ ಮತ್ತೆ ಭಾರತದ ವಿರುದ್ಧ ದಾಳಿಗೆ ಮುಂದಾಗುವುದಿಲ್ಲ ಅನ್ನುವ ಗ್ಯಾರಂಟಿಯೂ ಇಲ್ಲ. ಪಾಕ್ ಐಎಸ್ಐ ಅನ್ನುವ ಕುತಂತ್ರಿಗಳ ಮತ್ತು ನೂರಾರು ಭಯೋತ್ಪಾದಕ ಸಂಘಟನೆಗಳೆಂಬ ಸೈತಾನಿಗಳ ಕಪಿಮುಷ್ಟಿಯಲ್ಲಿರುವ ಒಂದು ನತದೃಷ್ಟ ದೇಶವಷ್ಟೆ. ಇಲ್ಲಿ ಅಸಲು ಗಮನಿಸಬೇಕಾದ ಸಂಗತಿ ಎಂದರೆ ಆರ್ಥಿಕತೆಯಲ್ಲಿ, ತಂತ್ರಜ್ಞಾನದಲ್ಲಿ, ಸಂಪನ್ಮೂಲದ ವಿಚಾರದಲ್ಲಿ ಭಾರತದ ಕಾಲು ಪಾಲು ಇಲ್ಲದ ಪಾಕಿಸ್ತಾನ ತನ್ನ ದಾಯಾದಿ ರಾಷ್ಟ್ರ ಸಾರ್ವಭೌಮ ಭಾರತಕ್ಕೆ ನೆರವು ನೀಡುವ ಮಾತಾಡುತ್ತಿದೆ. ಮಾನವೀಯತೆ ಜಾಗೃತಗೊಳ್ಳುವುದೇ ಇಂತಹ ಸಂಕಷ್ಟ ಕಾಲದಲ್ಲಿ. Marjala manthana coronavirus

ಇನ್ನೊಂದು ಪ್ರಮುಖ ಸತ್ಯವೆಂದರೆ ಪಾಕಿಸ್ತಾನ ಅನ್ನುವ ಒಂದು ಧೂರ್ತ ಷಡ್ಯಂತ್ರದ ಹಿಂದಿರುವುದು ಅಪ್ಪಟ ಕಾರ್ಪೊರೇಟ್ ಕುತಂತ್ರ. ಬಂಡವಾಳಶಾಹಿ ರಾಷ್ಟ್ರಗಳಿಗೆ ತೃತೀಯ ದರ್ಜೆಯ ರಾಷ್ಟ್ರಗಳು ಅಭಿವೃದ್ಧಿ ಸಾಧಿಸುವುದು ಎಂದಿಗೂ ಬೇಕಿಲ್ಲ. ಅದಕ್ಕಾಗಿಯೇ ನಾವು ನೆಮ್ಮದಿಯಾಗಿರಬಾರದು ಅಂತಲೇ ಪದೇ ಪದೇ ಪಾಕಿಸ್ತಾನವನ್ನು ನಮ್ಮ ವಿರುದ್ಧ ಎತ್ತಿ ಕಟ್ಟುತ್ತವೆ. ಚೀನಾ ನಮ್ಮ ನೆರೆಯ ಬಾಂಗ್ಲಾ, ನೇಪಾಳ, ಶ್ರೀಲಂಕಾಗಳಲ್ಲಿ ನೆಲೆಯೂರುತ್ತಿದ್ದರೇ ಜಾಣ ಕುರುಡು ಪ್ರದರ್ಶಿಸುತ್ತವೆ. ಬಂಡವಾಳ ಶಾಹಿಗಳ ಟಾರ್ಗೆಟ್ ಎಂದಿನಿಂದಲೂ ಭಾರತವೇ.

ಅದರಲ್ಲೂ ಅಮೇರಿಕಾ ಅನ್ನುವ ಪರಮ ಕಾರ್ಕೋಟಕ ವಿಷ ಹೊಂದಿರುವ ಸೀಳುನಾಲಿಗೆಯ ರಾಷ್ಟ್ರ ಎಂದಿಗೂ ನಮ್ಮ ಮಿತ್ರ ರಾಷ್ಟ್ರವಾಗಲು ಸಾಧ್ಯವೇ ಇಲ್ಲ. ನಮಗೆ ಕಮ್ಯೂನಿಸ್ಟ್ ರಷ್ಯಾ ಕೊಟ್ಟ ನೆರವನ್ನು ಕ್ಯಾಪಿಟಲಿಸ್ಟ್ ಅಮೇರಿಕಾ ಕೊಟ್ಟಿಲ್ಲ ಕೊಡುವುದೂ ಇಲ್ಲ; ಇದು ಇತಿಹಾಸ. ಇತ್ತೀಚೆಗೆ ಅಮೇರಿಕಾದ ಮೇಲೆ ನಮ್ಮ ಅವಲಂಬನೆ ಹೆಚ್ಚಾಗುತ್ತಿದೆ. ಹಾಗಾಗೇ ನಮ್ಮ ದೇಶದಲ್ಲೂ ಕಾರ್ಪೊರೇಟ್ ಗುಲಾಮಗಿರಿಯ ಸಂಸ್ಕೃತಿ ಹುಟ್ಟಿಕೊಂಡಿದೆ. ನಮಗೆ ನಿಜಕ್ಕೂ ಬೇಕಿರುವುದು ಶುದ್ಧ ಪ್ರಜಾಸತ್ತಾತ್ಮಕ ಸಮಾಜವಾದ, ಎ ಡೆಮೋಕ್ರಾಟಿಕ್ ಸೋಶಿಯಲಿಸಂ ಹೊರತು ಕ್ಯಾಪಟಿಲಿಸಂ ಎಂಬ ಬ್ರಹ್ಮರಾಕ್ಷಸನ ಆಶ್ರಯವಲ್ಲ.

ಉದಾಹರಣೆ ಬೇಕಾ; ಹಿಂದೆ ಸಣ್ಣ ಕ್ಲಿನಿಕ್ ಗಳಲ್ಲಿ ಎಲ್ಲಾ ಬಗೆಯ ರೋಗಗಳಿಗೂ ಚಿಕಿತ್ಸೆ ಕೈಗೆಟಕುವ ದರದಲ್ಲಿ ಸಿಗುತ್ತಿತ್ತು. ಇಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿ ಮನೆ ಹೊಲ ಮಾರಾಟ ಮಾಡಿ ಬಿಲ್ ತುಂಬುವುದಕ್ಕಿಂತ ನೇರ ಆತ್ಮಹತ್ಯೆ ಮಾಡಿಕೊಳ್ಳುವುದು ಉತ್ತಮ. ನಾವೆಲ್ಲಾ ಓದುವಾಗ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿತ್ತು. ಇವತ್ತು ಕಿಂಡರ್ ಗಾರ್ಡನ್ ಮಟ್ಟದ ಮಕ್ಕಳಿಗೆ ಲಕ್ಷದಷ್ಟು ಫೀಸ್ ತುಂಬಬೇಕು. ಆದರೂ ಈಗ ಕಲಿಸುತ್ತಿರುವ ವಿದ್ಯೆ ವಿವೇಕ ಹುಟ್ಟುಹಾಕುತ್ತಿಲ್ಲ. ಒಬ್ಬ ಬಡವ ಮನೆ ಕಟ್ಟಲು ಸಾಧ್ಯವಿದೆಯೇ? ಮಧ್ಯಮ ವರ್ಗ ನೆಮ್ಮದಿಯಿಂದ ನಿದ್ದೆ ಮಾಡುವ ಸ್ಥಿತಿ ಇದೆಯೇ?

follow COVID-19 norms

ಇಷ್ಟಾಯಿತಲ್ಲ, ಈಗ ಮೊದಲಿನ ವಿಚಾರಕ್ಕೆ ಬರ್ತೀನಿ. ಪಾಕ್ ನೆಲವನ್ನೇ ಸರ್ವನಾಶ ಮಾಡಿಬಿಡಬೇಕು. ಅಲ್ಲಿರುವವರೆಲ್ಲರೂ ಪರಮಪಾಪಿಗಳು ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದೆಲ್ಲ, ಈಗ ಆತ್ಮಾವಲೋಕನ ಮಾಡಿಕೊಳ್ಳೋಣ. ನಮಗೆ ದ್ವೇಷ ಬೇಕೋ ಪ್ರೀತಿ ವಿಶ್ವಾಸಗಳು ಬೇಕೋ?
ವಾಜಪೇಯಿ ಸರ್ಕಾರ ಅಂತದ್ದೊಂದು ಮಹತ್ವದ ಹೆಜ್ಜೆಯಿಟ್ಟು ಲಾಹೋರ್ ಗೆ ಬಸ್ ಬಿಟ್ಟಿತ್ತು. ಆದರೆ ಆನಂತರ ಪಾಕ್ ತನ್ನ ದುರುಳ ಬುದ್ದಿ ತೋರಿ ಕಾರ್ಗಿಲ್ ಯುದ್ಧ ಸಾರಿತು. ಅದಾಗಿ ಸಾಕಷ್ಟು ಮಳೆಗಾಲ ಕಳೆದಿದೆ. ಪಾಕ್ ಸಹ ಸಾಕಷ್ಟು ಆರ್ಥಿಕ ಸಂಕಷ್ಟಗಳಿಗೆ ತುತ್ತಾಗಿ ಅನುಭವಿಸಿದೆ. ಈಗಲಾದರೂ ನಮ್ಮ ಸರ್ಕಾರ ಮತ್ತು ಪಾಕಿಸ್ತಾನ ದ್ವೇಷ ಮರೆತು ಒಂದಾಗಲಿ. ದ್ವೇಷದಿಂದ ಯಾವತ್ತಿಗೂ ಸಾಧ್ಯವಾಗದ್ದನ್ನು ಕೇವಲ ಪ್ರೀತಿ ಮಾತ್ರ ಸಾಧ್ಯವಾಗಿಸುತ್ತದೆ. ಕೋವಿಡ್ ನಂತರವಾದರೂ ನಾವು ಗಡಿಗಳಿಲ್ಲದ ಸುಂದರ ವಿಶ್ವದಲ್ಲಿ ಬದುಕುವ ಕನಸು ಕಾಣೋಣ.
-ವಿಭಾ
***

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd