ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಬಹುತೇಕ ಖಚಿತ
ಬೆಂಗಳೂರು : ಹಲವಾರು ಕ್ರಮಗಳ ಮಧ್ಯೆಯೂ ರಾಜ್ಯದಲ್ಲಿ ಕೊರೊನಾ ಸ್ಫೋಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ವಿಸ್ತರಣೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ತಜ್ಞರ ಸಲಹೆ ಮೇರೆಗೆ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿದ್ರೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದ್ದು, ಲಾಕ್ ಡೌನ್ ವಿಸ್ತರಣೆ ಮಾಡಿದರೆ ಆರ್ಥಿಕ ಪ್ಯಾಕೇಜ್ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದೇ ವಿಚಾರವಾಗಿ ಮಾತನಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅತೀ ಶೀಘ್ರದಲ್ಲಿ ಸಚಿವ ಸಂಪುಟ ಸಭೆ ಕರೆಯಲಿದ್ದಾರಂತೆ. ಮೂಲಗಳ ಪ್ರಕಾರ ಸಚಿವರಿಂದಲೂ ಕೂಡ ಲಾಕ್ ಡೌನ್ ವಿಸ್ತರಣೆ ಗೆ ಒಲವು ವ್ಯಕ್ತವಾಗಿದೆಯಂತೆ.
ಇದಲ್ಲದೆ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿಗಳ ಕುರಿತು ನಾಳೆ ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಲಿದ್ದು, ನಂತರ ಕೋವಿಡ್ ಜವಾಬ್ದಾರಿ ಹೊತ್ತ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಲಾಕ್ ಡೌನ್ ಜಾರಿಯಲ್ಲಿದ್ದು, ಕಠಿಣ ಮಾರ್ಗಸೂಚಿ ನಂತರದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಕುರಿತು ಜಿಲ್ಲಾಡಳಿತಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ನಾಳೆ ಇಡೀ ದಿನ ಕೊರೊನಾ ಸಂಬಂಧಿತ ಕಾರ್ಯಚಟುವಟಿಕೆಯಲ್ಲಿ ತೊಡಗಲಿದ್ದಾರೆ.