ಚೀನಾ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ತಡೆ ನೀಡಿದ ಮಹಾರಾಷ್ಟ್ರ ಸರ್ಕಾರ
ಮುಂಬೈ, ಜೂ.23: ಮಹಾರಾಷ್ಟ್ರ ಸರ್ಕಾರ ಚೀನಾ ಕಂಪನಿಗಳ ಜೊತೆಗಿನ ಪ್ರಮುಖ ಒಪ್ಪಂದಕ್ಕೆ ತಡೆ ನೀಡಿದೆ. ಮಹಾರಾಷ್ಟ್ರದಲ್ಲಿ ಬಂಡವಾಳ ಹೂಡಿಕೆ ಮಾಡಿ ಉದ್ಯಮ ಆರಂಭಿಸಲು ಚೀನಾದ 3 ಕಂಪನಿಗಳು ಮುಂದಾಗಿದ್ದು, ಜೂನ್ 15 ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಚೀನಾದ 3 ಕಂಪನಿಗಳೊಂದಿಗೆ ಮಾಡಿಕೊಂಡಿದ್ದ 5 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ಸದ್ಯಕ್ಕೆ ಕೈಬಿಟ್ಟಿದೆ.
ಇತ್ತೀಚೆಗಷ್ಟೇ ಚೀನಾದ ಕಂಪನಿಗಳಾದ ಗ್ರೇಟ್ ವಾಲ್ ಮೋಟಾರ್ಸ್ ಮಹಾರಾಷ್ಟ್ರದಲ್ಲಿ ಘಟಕ ಆರಂಭಿಸಲು 3,770 ಕೋಟಿ, ಫೊಟೋನ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿ 1,000 ಕೋಟಿ ಹಾಗೂ ಹೆಂಗ್ಲಿ ಎಂಜಿನಿಯರಿಂಗ್ 250 ಕೋಟಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯ ಬಳಿಕ ಮಹಾರಾಷ್ಟ್ರ ಸರ್ಕಾರ ಒಟ್ಟು 5,000 ಕೋಟಿ ರೂಪಾಯಿ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಈ ಎಲ್ಲಾ ಒಪ್ಪಂದಗಳನ್ನು ಜೂನ್ 15 ರಂದು ಮಾಡಲಾಗಿದ್ದು, ಬಳಿಕ ಭಾರತೀಯ ಯೋಧರು ಭಾರತ- ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು. ಚೀನಾ ಗಡಿಯಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸಲು ಮುಂದಾದರೆ ಮಾತ್ರ ಒಪ್ಪಂದವನ್ನು ಪರಾಮರ್ಶಿಸಲು ಮಹಾರಾಷ್ಟ್ರ ತೀರ್ಮಾನಿಸಿದೆ.
ಹರಿಯಾಣದಲ್ಲೂ ಚೀನಾದ ಎರಡು ಪವರ್ ಪ್ರಾಜೆಕ್ಟ್ ಯೋಜನೆಗಳನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ರದ್ದು ಮಾಡಿದ್ದಾರೆ. ಈಗಾಗಲೇ ಚೀನಾದ ಕಂಪನಿಗಳ ಜೊತೆಗಿನ ಒಪ್ಪಂದಗಳನ್ನು ರೈಲ್ವೆ ಸಚಿವಾಲಯ ಮತ್ತು ಟೆಲಿಕಾಂ ಸಚಿವಾಲಯ ಸ್ಥಗಿತಗೊಳಿಸಿದೆ.
ಭಾರತೀಯ ರೈಲ್ವೆ 2016 ರಲ್ಲಿ ಚೀನಾದ ಕಂಪನಿಯೊಂದಿಗೆ 471 ಕೋಟಿ ರೂ.ಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 417 ಕಿ.ಮೀ ಉದ್ದದ ರೈಲು ಹಳಿಗಳಲ್ಲಿ ಸಿಗ್ನಲ್ ವ್ಯವಸ್ಥೆಯನ್ನು ಅಳವಡಿಸಬೇಕಾಗಿತ್ತು. ಆದರೆ ನಾಲ್ಕು ದಿನಗಳ ಹಿಂದೆ ಭಾರತೀಯ ರೈಲ್ವೆ ಈ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಟೆಲಿಕಾಂ ಸಚಿವಾಲಯ ಕೂಡ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಗೆ ಚೀನಾದ ಸಲಕರಣೆಗಳ ಬಳಕೆಯನ್ನು ಕಡಿಮೆ ಮಾಡಲು ಸೂಚನೆ ನೀಡಿದೆ.