ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ದೇಶದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಕುಟುಂಬವೆಂದರೆ ಅದು ಗಾಂಧಿ ಕುಟುಂಬ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು. ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಈ ಕುಟುಂಬವು ಅಕ್ರಮವಾಗಿ ದುರುಪಯೋಗಪಡಿಸಿಕೊಂಡಿದೆ. ಭ್ರಷ್ಟಾಚಾರದ ವಿಷಯಕ್ಕೆ ಬಂದರೆ ಇವರ ಹೆಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ಕ್ಲೀನ್ ಚಿಟ್ ಅಲ್ಲ, ಜನರ ದಾರಿ ತಪ್ಪಿಸಬೇಡಿ
ಇತ್ತೀಚೆಗೆ ಹೊರಬಿದ್ದ ನ್ಯಾಯಾಲಯದ ಆದೇಶವೊಂದನ್ನು ಕಾಂಗ್ರೆಸ್ ನಾಯಕರು ತಮಗೆ ಸಿಕ್ಕ ಕ್ಲೀನ್ ಚಿಟ್ ಎಂದು ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವವೇನೆಂದರೆ, ನ್ಯಾಯಾಲಯದ ಈ ಆದೇಶವು ಕೇವಲ ಕಾನೂನು ಮತ್ತು ತಾಂತ್ರಿಕ ಆಧಾರದ ಮೇಲೆ ನೀಡಲಾಗಿದೆಯೇ ಹೊರತು, ಆರೋಪಗಳ ಸತ್ಯಾಸತ್ಯತೆ ಅಥವಾ ಅರ್ಹತೆಯ ಆಧಾರದ ಮೇಲಲ್ಲ. ಹೀಗಾಗಿ ಸುಳ್ಳುಗಳನ್ನು ಹೇಳುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂದು ಭಾಟಿಯಾ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರದ ಆರೋಪ ಹೊತ್ತಿರುವ ಪ್ರಮುಖರ ಪಟ್ಟಿಯನ್ನು ಉಲ್ಲೇಖಿಸಿದ ಭಾಟಿಯಾ, ಕಾಂಗ್ರೆಸ್ ಅಗ್ರ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರು ವಂಚನೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ನೆನಪಿಸಿದರು. ಈ ನಾಯಕರು ತಮ್ಮ ಮೇಲಿನ ಆರೋಪಗಳನ್ನು ಪ್ರಶ್ನಿಸಿ ಹಲವು ಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ, ಅಲ್ಲಿ ಅವರಿಗೆ ಯಾವುದೇ ರೀತಿಯ ಕಾನೂನು ಪರಿಹಾರ ಅಥವಾ ರಿಲೀಫ್ ಸಿಕ್ಕಿಲ್ಲ ಎನ್ನುವುದು ಗಮನಾರ್ಹ ಎಂದು ಅವರು ಒತ್ತಿ ಹೇಳಿದರು.
ಇದೇ ವೇಳೆ, ತನಿಖಾ ಸಂಸ್ಥೆಗಳ ಕ್ರಮವನ್ನು ರಾಜಕೀಯ ದುರುದ್ದೇಶ ಎಂದು ಕರೆಯುವ ಕಾಂಗ್ರೆಸ್ ವಾದವನ್ನು ಗೌರವ್ ಭಾಟಿಯಾ ಸಂಪೂರ್ಣವಾಗಿ ತಿರಸ್ಕರಿಸಿದರು. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.








