ದ.ಕ.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಕೊರೊನಾ ಪರಿಸ್ಥಿತಿಯ ಅನಾಹುತಗಳನ್ನು ಅವಲೋಕಿಸಿ ಬಟ್ಟೆ, ಫ್ಯಾನ್ಸಿ ಮತ್ತು ಪಾದರಕ್ಷೆಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಆದರೆ ಜಿಲ್ಲಾಡಳಿತವು ನಾಳೆಯಿಂದ ಬಟ್ಟೆ, ಫ್ಯಾನ್ಸಿ ಮತ್ತು ಪಾದರಕ್ಷೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡುತ್ತಿರುವುದನ್ನು ನಾವು ಖಂಡಿಸಿದ್ದೇವೆ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ. ಅಶ್ರಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈದುಲ್ ಫಿತ್ರ್ ಹಬ್ಬ ಸಮೀಪಿಸುತ್ತಿರುವಾಗ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿ ಕೊಟ್ಟರೆ ಇದರಿಂದ ಜನಸಂದಣಿ ಹೆಚ್ಚಾಗಿ ಸೋಂಕು ಹರಡುವ ಭೀತಿಯಿದೆ.
ಆದ್ದರಿಂದ ಬಟ್ಟೆ, ಫ್ಯಾನ್ಸಿ ಮತ್ತು ಪಾದರಕ್ಷೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬಾರದು ಎಂದು ನಾವು ಮತ್ತು ಉಡುಪಿ ಖಾಝಿಯವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಅದನ್ನು ಕಡೆಗಣಿಸಿ ಜಿಲ್ಲಾಡಳಿತ ಅನುಮತಿ ನೀಡಿರುವುದು ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ. ಈ ಅಚಾತುರ್ಯದಿಂದ ಸೋಂಕು ಹರಡಿದರೆ ಇದರ ಹೊಣೆಯನ್ನು ಜಿಲ್ಲಾಡಳಿತ, ಸಂಸದರು, ಉಸ್ತುವಾರಿ ಸಚಿವರು, ಶಾಸಕರು ಹೊರಬೇಕು. ಈ ಹಿಂದೆ
ದೆಹಲಿಯಲ್ಲಿ ನಡೆದ ತಬ್ಲೀಕ್ ಜಮಾತ್ ನವರು ಆಯೋಜಿಸಿದ ಮುಸ್ಲಿಂ ಸಮಾವೇಶದಲ್ಲಿ ಭಾಗವಹಿಸಿದ ಕೆಲವರಿಗೆ ಕೊರೋನ ಸೋಂಕು ಹಬ್ಬಿದ ಕಾರಣ ಮುಸ್ಲಿಂ ಸಮುದಾಯವನ್ನೇ ದೂರಲಾಗುತ್ತಿದೆ. ಇನ್ನು ಈದ್ ಹಬ್ಬದ ಸಂದರ್ಭದಲ್ಲಿ ಕೊರೊನಾ ಸೋಂಕು ಜಿಲ್ಲಾಡಳಿತದ ಈ ನಿರ್ಧಾರದಿಂದ ಮುಸ್ಲಿಮರಿಗೆ ಬಾಧಿಸಿದರೆ ಇನ್ನಷ್ಟು ಮುಸ್ಲಿಮರನ್ನೇ ದೂರುವುದರಲ್ಲಿ ಸಂಶಯ ಇಲ್ಲ. ಅಷ್ಟೇ ಅಲ್ಲದೇ ಇಲ್ಲಿಯವರೆಗೆ ನಾವು ತೆಗೆದುಕೊಂಡಿರುವ ಮುಂಜಾಗ್ರತೆ ಸಂಪೂರ್ಣ ವ್ಯರ್ಥವಾಗಲಿದೆ ಎಂದು ಅಶ್ರಫ್ ತಿಳಿಸಿದ್ದಾರೆ. ಕೊರೋನಾ ಸೋಂಕು ನಿಯಂತ್ರಣದಲ್ಲಿ ಮುಸ್ಲಿಂ ಸಮುದಾಯ ಸರ್ಕಾರದ ತೆಗೆದುಕೊಂಡಿರುವ ಎಲ್ಲಾ ಕ್ರಮಗಳಿಗೂ ಬದ್ಧವಾಗಿ ನಡೆದುಕೊಂಡು ಸಹಕರಿಸಿದೆ. ಈಗ ಪವಿತ್ರ ರಂಜಾನ್ ತಿಂಗಳಾದರೂ ನಮಾಝ್ ಅನ್ನು ಮನೆಯಲ್ಲಿಯೇ ನಿರ್ವಹಿಸಲಾಗಿದೆ. ಅದೇ ರೀತಿ ಹಿಂದುಗಳು, ಕ್ರೈಸ್ತರು, ಜೈನರು ಸೇರಿದಂತೆ ಪ್ರತಿಯೊಬ್ಬರು ನಾಡಿನ ಹಿತದೃಷ್ಠಿಯ ಹಿನ್ನೆಲೆಯಿಂದ ದೇವರ ಆರಾಧನೆಯನ್ನು ಮನೆಯಲ್ಲಿಯೇ ಮಾಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಸರಕಾರ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿ ಕೊಟ್ಟು ಜನರನ್ನು ಗುಂಪು ಸೇರಿ ಸಾರಾಯಿ ಕುಡಿಯುವಂತೆ ಮಾಡಿರುವುದು ಅತ್ಯಂತ ಹಾಸ್ಯಾಸ್ಪದ. ಅದೇ ರೀತಿ ಇದೀಗ ಕೆಲವು ಬಂಡವಾಳಶಾಹಿ ಬಟ್ಟೆ ವ್ಯಾಪಾರಿಗಳ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಜವಳಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದು ಕೊರೋನವನ್ನು ಕೈ ಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತಿದೆ. ಆದುದರಿಂದ ಜಿಲ್ಲಾಡಳಿತವು ಕೂಡಲೇ ತನ್ನ ನಿರ್ಧಾರವನ್ನು ಬದಲಿಸಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ರವರು ಒತ್ತಾಯಿಸಿದ್ದಾರೆ.
ಬಟ್ಟೆ, ಫ್ಯಾನ್ಸಿ ಮತ್ತು ಪಾದರಕ್ಷೆಯ ಅಂಗಡಿಗಳನ್ನು ಒಂದು ವೇಳೆ ತೆರೆದಲ್ಲಿ ಮುಸ್ಲಿಂ ಬಾಂಧವರು ಜಾಗ್ರತೆ ವಹಿಸಬೇಕು. ಕೊರೋನಾ ಮಹಾಮಾರಿಗೆ ಜನರು ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ ಈದ್ ಹಬ್ಬವನ್ನು ಬಹಳ ಸರಳವಾಗಿ ಆಚರಿಸಬೇಕು. ಯಾವುದೇ ಕಾರಣಕ್ಕೂ ಈದ್ ಹಬ್ಬದ ಖರೀದಿಗಾಗಿ ಅಂಗಡಿಗಳಲ್ಲಿ ಗುಂಪು ಗುಂಪಾಗಿ ಮುಗಿ ಬೀಳಬಾರದು. ಈ ನಾಡಿನ ಸಂರಕ್ಷಣೆಗಾಗಿ ಎಲ್ಲರೂ ದೃಢ ಸಂಕಲ್ಪ ಮಾಡಬೇಕಾಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.