ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ನಿಯಮಗಳನ್ನು ಸರಳೀಕರಿಸುವ ಮೂಲಕ ಮೂರು ವರ್ಷ ಅಥವಾ ವಾಣಿಜ್ಯ ಉತ್ಪಾದನೆ ಪ್ರಾರಂಭದವರೆಗೂ ಬೇರೆ ಅನುಮತಿಗಳನ್ನು ಪಡೆಯುವುದಕ್ಕೆ ಕಾಲಾವಕಾಶ ನೀಡುವ ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ಅಧಿನಿಯಮದ ತಿದ್ದುಪಡಿಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಕೈಗಾರಿಕಾ ಸ್ನೇಹೀ ರಾಜ್ಯವನ್ನಾಗಿಸುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ಹಲವಾರು ಕ್ರಮಗಳನ್ನು ಸರಳೀಕರಿಸುವ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ (ಸೌಲಭ್ಯ) ಅಧಿನಿಯಮ 2002ಕ್ಕೆ ತಿದ್ದುಪಡಿಯನ್ನು ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮತಿಯನ್ನು ನೀಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಾಗೂ ಇನ್ನಿತರೆ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಕವಾದ ನಿರ್ಣಯವಾಗಿದೆ. ಇನ್ನು ಮುಂದೆ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವ ಕೈಗಾರಿಕೋದ್ಯಮಿಗಳು ತಮ್ಮ ಯೋಜನೆಯನ್ನು ರಾಜ್ಯದಲ್ಲಿರುವಎಸ್.ಹೆಚ್.ಎಲ್.ಸಿ.ಸಿ/ಎಸ್.ಎಲ್.ಎಸ್.ಡಬ್ಯೂ.ಸಿ.ಸಿ/ಡಿ.ಎಲ್.ಎಸ್.ಡಬ್ಲೂ.ಸಿ.ಸಿ ಸಮಿತಿಗಳಿಂದ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕು. ನಂತರ ಈ ಅನುಮತಿಯ ಆಧಾರದ ಮೇಲೆ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಕಟ್ಟಡ ಕಾಮಗಾರಿ, ಯಂತ್ರೋಪಕರಣಗಳ ಅಳವಡಿಕೆ ಸೇರಿದಂತೆ ಇನ್ನಿತರೆ ಕೆಲಸಗಳನ್ನು ಪ್ರಾರಂಭಿಸಬಹುದಾಗಿದೆ. ಮೂರು ವರ್ಷಗಳು ಅಥವಾ ತಮ್ಮ ವಾಣಿಜ್ಯ ಉತ್ಪಾದನೆ ಪ್ರಾರಂಭ ಮಾಡುವ ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆಯುವುದು ಅಗತ್ಯವಾಗಿದೆ. ಅಲ್ಲದೆ, ಯಾವುದೇ ಕಾನೂನು ಅಥವಾ ನಿಯಮಗಳನ್ನು ಉಲ್ಲಂಘಿಸದೇ ಇರುವ ಬಗ್ಗೆ ಸ್ವಯಂಧೃಢೀಕರಣ ಮಾಡುವುದು ಕಡ್ಡಾವಾಗಿದೆ ಎಂದು ಸಚಿವರು ವಿವರಿಸಿದರು.
ದೇಶದಲ್ಲಿ ಗುಜರಾತ್ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಸ್ಥಾಪನೆ ಮತ್ತು ಕಾರ್ಯಾಚರಣೆಯ ಸೌಲಭ್ಯ) ಅನುಕೂಲಕ್ಕಾಗಿ ಇಂತಹ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಇನ್ನು ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ಎಲ್ಲಾ ಕೈಗಾರಿಕೆಗಳ ಸ್ಥಾಪನೆಗೂ ಇದು ಅನ್ವಯವಾಗಲಿದೆ. ನಮ್ಮ ಇಲಾಖೆಯ ವತಿಯಿಂದ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಮೇಲ್ಕಂಡ ಅಧಿನಿಯಮಗಳನ್ನು ಅಧ್ಯಯನ ಮಾಡಿದ್ದು, ವಿವಿಧ ಇಲಾಖೆಗಳೊಂದಿಗೆ ರಾಜ್ಯದ ಕರ್ನಾಟಕ ಕೈಗಾರಿಕಾ (ಸೌಲಭ್ಯ) ಅಧಿನಿಯಮ, 2002 ತಿದ್ದುಪಡಿಯ ಬಗ್ಗೆ ವಿಸ್ತೃತ ಚರ್ಚೆಯನ್ನು ನಡೆಸಲಾಗಿದೆ ಎಂದು ಹೇಳಿದರು.
ಕೈಗಾರಿಕೋದ್ಯಮಿಗಳು ಉತ್ಪಾದನೆ ಮಾಡುವ ಪೂರ್ವದಲ್ಲಿ ಸಂಬಂಧಪಟ್ಟ ಅಗತ್ಯ ಅನುಮತಿ ಹಾಗೂ ಅನುಮೋದನೆಗಳನ್ನು ಪಡೆದು ಕೈಗಾರಿಕೆಗಳನ್ನು ಪ್ರಾರಂಭಿಸುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಪಾಲಿಸದೇ ಇರುವ ಕೈಗಾರಿಕೆಗಳಿಗೆ ದಂಡ ವಿಧಿಸುವ ಅವಕಾಶವನ್ನೂ ಈ ಕಾಯ್ದೆಯಲ್ಲಿ ನೀಡಲಾಗಿದೆ.
ಈ ಕ್ರಾಂತಿಕಾರಕ ತಿದ್ದುಪಡಿಯನ್ನು ಸುಗ್ರೀವಾಜ್ಞೇ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಈ ಹೆಜ್ಜೆಯ ಮೂಲಕ ನಾವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕೈಗಾರಿಕೋದ್ಯಮಿಗಳಿಗೆ ಉದ್ಯಮ ಸ್ನೇಹಿ ರಾಜ್ಯದ ಸೂಚನೆಯನ್ನು ನೀಡಿದ್ದೇವೆ ಎಂದು ತಿಳಿಸಿದರು.