ಹಿಜ್ಬುಲ್ ಹಾಗೂ ಇಸ್ರೇಲ್ ಮಧ್ಯೆ ಘರ್ಷಣೆ ಮುಂದುವರೆದಿದೆ. ಈಗ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ 12 ಜನ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ರೇಲ್ ತಿಳಿಸಿರುವ ಮಾಹಿತಿಯಂತೆ. ಹಿಜ್ಬುಲ್ಲಾ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ. ಲೆಬನಾನ್ನಿಂದ ಹಾರಿಸಲಾದ ರಾಕೆಟ್ ಗೋಲನ್ ಹೈಟ್ಸ್ನ ಉತ್ತರದ ಡ್ರೂಜ್ ಪಟ್ಟಣವಾದ ಮಜ್ಡಾಲ್ ಶಾಮ್ಸ್ನಲ್ಲಿರುವ ಫುಟ್ಬಾಲ್ ಮೈದಾನಕ್ಕೆ ಅಪ್ಪಳಿಸಿದೆ. ಈ ದಾಳಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ 12 ಜನ ಸಾವನ್ನಪ್ಪಿ, 29 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಗೆ ಇಸ್ರೇಲಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಆದರೆ, ರಾಕೆಟ್ ಹಾರಿಸಿರುವುದನ್ನು ಹಿಜ್ಬುಲ್ಲಾ ನಿರಾಕರಿಸಿದೆ. ಕಳೆದ 10 ತಿಂಗಳಿಂದ ಇಸ್ರೇಲ್ ಸೇನೆ ಮತ್ತು ಹಿಜ್ಬುಲ್ಲಾ ಪರಸ್ಪರ ಗುಂಡಿನ ದಾಳಿ ನಡೆಸುತ್ತಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕದಿಂದ ವಾಪಸಾದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಸದ್ಯ ಈ ಘರ್ಷಣೆ ಈಗ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡಿದೆ.
1967 ರಲ್ಲಿ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ಸಿರಿಯಾದಿಂದ ವಶಪಡಿಸಿಕೊಂಡ ಪ್ರದೇಶ ಇದು. ಈ ಪ್ರದೇಶವು ಸರಿಸುಮಾರು 50 ಸಾವಿರ ಇಸ್ರೇಲಿ ಯಹೂದಿಗಳು ಮತ್ತು ಡ್ರೂಜ್ ಗಳಿಗೆ ನೆಲೆಯಾಗಿದೆ. ಅಕ್ಟೋಬರ್ 7ರ ನಂತರ ನಡೆದ ಅತಿ ದೊಡ್ಡ ದಾಳಿ ಇದಾಗಿದ್ದು, ಕ್ರಮ ಕೈಗೊಳ್ಳುತ್ತೇವೆ. 50 ಕೆಜಿ ಸಿಡಿತಲೆ ಹೊಂದಿದ್ದ ಇರಾನಿನ ಫಲಾಕ್ 1 ರಾಕೆಟ್ ಮೂಲಕ ದಾಳಿ ನಡೆಸಲಾಗಿದೆ. ಇದನ್ನು ಹಿಜ್ಬುಲ್ಲಾ ಮಾತ್ರ ಬಳಕೆ ಮಾಡುತ್ತದೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ.