ಉತ್ತರ ಕನ್ನಡ: ಕೆಲಸಕ್ಕೆ ಇದ್ದ ಕಾರ್ಮಿಕರಿಂದಲೇ ಮಾಲೀಕ ಹತ್ಯೆಯಾಗಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯ ಕೊರ್ಲಕಟ್ಟ ಗ್ರಾಮದ ಹಳ್ಳಿಕೊಪ್ಪ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಆರೋಪಿಗಳು ಶವವನ್ನು ಅರಣ್ಯ ಪ್ರದೇಶದ ಇಂಗು ಗುಂಡಿಯಲ್ಲಿ ಮುಚ್ಚಿಟ್ಟಿದ್ದ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ಬೆನ್ನಟ್ಟಿದ್ದಾರೆ. ಮೂರು ದಿನಗಳ ತನಿಖೆಯ ನಂತರ ಶವವು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿ ಗ್ರಾಮದ ಅಶೋಕ ಗಿರಿಯಪ್ಪ ಉಪ್ಪಾರ(48) ಎಂದು ತಿಳಿದಿದೆ. ಆತನ ಜತೆ ಕೆಲಸಕ್ಕಿದ್ದ ಅದೇ ಊರಿನ ಯುವಕರಾದ ಕಿರಣ ಪರಶುರಾಮ ಸುರಳೇಶ್ವರ(23), ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ(20) ಹಾಗೂ ಇವರ ಗೆಳೆಯ ನಿರಂಜನ ಗೋವಿಂದಪ್ಪ ತಳವಾರ(20) ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.
ಸುಮಾರು 15 ವರ್ಷಗಳ ಹಿಂದೆ ಪತ್ನಿ, ಕುಟುಂಬವನ್ನು ಬಿಟ್ಟಿದ್ದ ಅಶೋಕ್ ಗಿರಿಯಪ್ಪ ಉಪ್ಪಾರ. ಪಕ್ಕದ ಊರು ಅರಸಿನಕೆರೆಯಲ್ಲಿ ಮನೆ ಮಾಡಿ ವಾಸಿಸುತ್ತಿದ್ದ. ಆ ವ್ಯಕ್ತಿಯೊಂದಿಗೆ ಆರೋಪಿಗಳಾದ ಕಿರಣ ಪರಶುರಾಮ ಸುರಳೇಶ್ವರ(23), ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ(20) ಟ್ರ್ಯಾಕ್ಟರ್ ಚಲಾಯಿಸುವ ಕೆಲಸ ಮಾಡಿಕೊಂಡಿರುತ್ತಿದ್ದರು. ಇವರಿಗೆ ಮಾಲೀಕ ಅಶೋಕ್ 30 ಸಾವಿರ ಸಾಲ ಕೊಟ್ಟಿದ್ದ. ನಂತರ ಸಾಲ ತೀರಿಸಲು ಹೇಳಿದ್ದ. ಇದನ್ನೇ ದ್ವೇಷವಾಗಿಟ್ಟುಕೊಂಡು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಶವವನ್ನು ಹಾನಗಲ್- ಶಿವಮೊಗ್ಗ ರಾಜ್ಯ ಹೆದ್ದಾರಿಯ ಮೂಡುರು ರಿಸರ್ವ್ ಫಾರೆಸ್ಟ್ ನಲ್ಲಿನ ಇಂಗು ಗುಂಡಿಯಲ್ಲಿ ಹಾಕಿ ಪರಾರಿಯಾಗಿದ್ದಾರೆ.