ಬಾಬರ್ ಅಝಮ್ ಸಾರಥ್ಯದ ಪಾಕ್ ತಂಡ ಹೊಸ ಭರವಸೆ ಮೂಡಿಸಿದೆ : ರಮೀಝ್ ರಾಜಾ
ಪಾಕಿಸ್ತಾನ ಕ್ರಿಕೆಟ್ ತಂಡ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಫಿಯರ್ ಲೆಸ್ ಆಗಿ ಆಡುತ್ತಿದೆ. ತಂಡದ ಆಟಗಾರರಿಗೆ ಸೋಲಿನ ಭೀತಿಯೇ ಇಲ್ಲ.
ಆಟಗಾರರಿಗೆ ತಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇದೆ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪಾಕ್ ಕ್ರಿಕೆಟ್ ಬೋರ್ಡ್ ನ ಮುಖ್ಯಸ್ಥ ರಮೀಝ್ ರಾಜಾ ಹೇಳಿದ್ದಾರೆ.
ಲೀಗ್ ಹಂತದ ಐದು ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ತಂಡ ಈಗ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಆಸೀಸ್ ವಿರುದ್ಧದ ಪಂದ್ಯದಲ್ಲಿ ಪಾಕ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಬೇಕಾದ ಅಗತ್ಯವಿಲ್ಲ. ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ.
ಬಾಬರ್ ಅಝಮ್ ನಾಯಕತ್ವದಲ್ಲಿ ಪಾಕ್ ತಂಡ ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನು ನೀಡುತ್ತಿದೆ ಎಂದು ರಮೀಝ್ ರಾಜಾ ಹೇಳಿದ್ದಾರೆ.
ಟೀಮ್ ಇಂಡಿಯಾ ವಿರುದ್ಧದ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಹಾಗೇ ನ್ಯೂಜಿಲೆಂಡ್ ವಿರುದ್ಧ ಯೋಜನೆಯಂತೆ ಆಡಿತ್ತು.
ಅಫಘಾನಿಸ್ತಾನ ವಿರುದ್ಧ ಸ್ಪಿನ್ನರ್ ಗಳು ಗೆಲುವನ್ನು ತಂದುಕೊಟ್ಟರು. ಹೀಗೆ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಪಾಕ್ ಕ್ರಿಕೆಟ್ ತಂಡ ಗೆಲುವಿನ ಅಭಿಯಾನದಲ್ಲಿದೆ.
ಅದು ಹೀಗೆ ಮುಂದುವರಿಯಬೇಕು ಎಂದು ತಂಡಕ್ಕೆ ಕಿವಿ ಮಾತು ಕೂಡ ಹೇಳಿದ್ದಾರೆ.
ಇದೀಗ ನಾಕೌಟ್ ಹಂತಕ್ಕೆ ಬಂದಿದ್ದಿರಿ. ಸೋಲು – ಗೆಲುವು ಇರುವುದೇ. ಅದು ಯಾರ ಕೈಯಲ್ಲೂ ಇಲ್ಲ. ಹಾಗಾಗಿ ಉತ್ತಮ ಆಟವನ್ನು ಆಡಿ.
ಗೆಲುವಿನ ಓಟದಲ್ಲಿ ಮುನ್ನಡೆಯಿರಿ. ನಿಮಗೆ ಪಾಕ್ ದೇಶದ ಅಭಿಮಾನಿಗಳ ಹಾರೈಕೆ ಇದೆ ಎಂದು ಕೂಡ ರಮೀಝ್ ರಾಜಾ ಹೇಳಿದ್ದಾರೆ.
ಕಳೆದ ಸೆಪ್ಟಂಬರ್ 13ರಂದು ರಮೀಝ್ ರಾಜಾ ಅವರು ಪಾಕ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಸ್ಥಾನದ ಅಧಿಕಾರವನ್ನು ವಹಿಸಿಕೊಂಡಿದ್ದರು.
ನಾಯಕ ಬಾಬರ್ ಅಝಮ್ ಕೊರಿಕೆಯಂತೆ ತಂಡದಲ್ಲಿ ಕೆಲವೊಂದು ಬದಲಾವಣೆ ಕೂಡ ಮಾಡಿದ್ದರು.
ಹಾಗಾಗಿಯೇ ಪಾಕ್ ತಂಡ ಬಾಬರ್ ನಾಯಕತ್ವದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ ಅನ್ನೋದು ರಮೀಝ್ ರಾಜಾ ಅವರ ಅಭಿಮತವಾಗಿದೆ.
ರಮೀಝ್ ರಾಜಾ ಅವರು ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಣೆ ಮಾಡಲು ದುಬೈಗೆ ತೆರಳಲಿದ್ದಾರೆ. ಅಲ್ಲದೆ ಐಸಿಸಿ ಸಭೆಯಲ್ಲೂ ಭಾಗಿಯಾಗಲಿದ್ದಾರೆ.