Bidar : ರಾಜ್ಯಕ್ಕೆ ಇನ್ನು ಮುಂಗಾರು ಎಂಟ್ರಿ ಆಗಿಲ್ಲ ಎಂದು ರೈತರು ಕಂಗಾಲಾಗಿದ್ದರು. ಆದರೆ, ಇದರ ಮಧ್ಯೆ ಹಲವೆಡೆ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ರೈತರು ಸಂತಸ ವ್ಯಕ್ತಪಡಿಸುವಂತಾಗಿದೆ. ಆದರೆ, ಹಲವೆಡೆ ಮಳೆಯಿಂದಾಗಿ ಜನ- ಜೀವನ ಅಸ್ತವ್ಯಸ್ಥಗೊಂಡಿದೆ.
ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ (Rain)ಯಾಗಿದ್ದು, ಗಾಳಿಗೆ ತಗಡುಗಳು ಹಾರಿ ಮಗುವೊಂದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಸುಮಾರು 30 ನಿಮಿಷಕ್ಕೂ ಅಧಿಕ ಸಮಯ ವ್ಯಾಪಕ ಮಳೆಯಾಗಿದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಕಬ್ಬಿಣದ ತಗಡು ಹಾರಿ ಬಂದು ಮಗುವಿಗೆ ಬಡೆದಿದೆ.
ಘಟನೆಯಲ್ಲಿ ಧನರಾಜ್ ಎಂಬುವವರ ಮಗು ಗಂಭೀರವಾಗಿ ಗಾಯಗೊಂಡಿದೆ. ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಮನೆಯ ತಗಡಿನ ಶೆಡ್ಡಿಗೆ ಮಗುವಿಗಾಗಿ ಜೋಕಾಲಿ ಕಟ್ಟಿದ್ದರು. ಮಗು ಜೋಕಾಲಿಯಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ತಗಡುಗಳು ಹಾರಿ ಬಿದ್ದಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಅಂಬುಲೆನ್ಸ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Meteorological Department) ಎಚ್ಚರಿಕೆ ನೀಡಿದೆ. ಹೀಗಾಗಿ ರೈತರಲ್ಲಿ ಸಂತಸ ಮನೆ ಮಾಡಿದ್ದು, ಹಲವರು ಇನ್ನೇನು ಅವಾಂತರ ಕಾದಿದೆಯೋ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.