ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ರುದ್ರನರ್ತನ ಮುಂದುವರೆದಿದೆ. ಇಂದು ಕೊರೊನಾಗೆ ಮತ್ತೊಬ್ಬ ಪೊಲೀಸ್ ಅಧಿಕಾರಿ ಬಲಿಯಾಗಿದ್ದು, ರಾಜ್ಯದಲ್ಲಿ ಅದರಲ್ಲೂ ಕೊರೊನಾಗೆ ಬಲಿಯಾದ ಪೊಲೀಸರ ಸಂಖ್ಯೆ ಎರಡಕ್ಕೆ ಏರಿದೆ.
ಬೆಂಗಳೂರಿನ ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯ ೫೯ ವರ್ಷದ ಎಎಸ್ಐ ಕೊರೊನಾದಿಂದ ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳ ಎಎಸ್ಐಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಗಂಟಲು ಮಾದರಿ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ, ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಳೆದ ವಾರವಷ್ಟೇ ವಿವಿ ಪುರಂ ಸಂಚಾರಿ ಠಾಣೆಯ ಎಎಸ್ಐ ಮಹಾಮಾರಿಗೆ ಬಲಿಯಾಗಿದ್ದರು. ಅವರು ಮೃತಪಟ್ಟ ಮೇಲೆ ಕೊರೊನಾ ಇರುವುದು ದೃಢಪಟ್ಟಿತ್ತು.
ಕಲಾಸಿಪಾಳ್ಯ ಠಾಣೆಗೆ ಕೊರೊನಾ ಕಂಟಕ..!
ಬೆAಗಳೂರಿನ ಜನನಿಬಿಡ ಪ್ರದೇಶವಾದ ಕೆ.ಆರ್ ಮಾರುಕಟ್ಟೆಯಲ್ಲಿರುವ ಕಲಾಸಿಪಾಳ್ಯ ಪೊಲೀಸ್ ಠಾಣೆಯ ೨೪ ಮಂದಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಠಾಣೆಯ ಎಎಸ್ಐ ಸೇರಿ ೨೪ ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಠಾಣೆಯ ೨೪ ಮಂದಿಗೆ ಕೊರೊನಾ ಬಂದಿರುವುದರಿಂದ ಠಾಣೆಯಲ್ಲಿ ಕೆಲಸ ಮಾಡಲು ಸಿಬ್ಬಂದಿ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.








