ಭುವನೇಶ್ವರ: ಪ್ರದಾನಿ ನರೇಂದ್ರ ಮೋದಿ (Narendra Modi) ಮಂಡಿಯೂರಿ ವೃದ್ಧೆಯೊಬ್ಬರ ಕಾಲಿಗೆ ನಮಸ್ಕರಿಸಿದ್ದು, ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವೀಡಿಯೋ ವೈರಲ್ ಬೆನ್ನಲ್ಲೇ ಆ ವೃದ್ಧೆಯ ಕುರಿತು ಚರ್ಚೆಗಳು ಶುರುವಾಗಿವೆ. ಈ ವೃದ್ಧೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಫೆಬ್ರವರಿ 26 ರಂದು 98 ನೇ ಆವೃತ್ತಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕಮಲಾ ಮಹಾರಾಣಾ (Kamala Maharana) ಎಂಬುವುದು ವೃದ್ಧೆಯ ಹೆಸರು. ಒಡಿಶಾ ಮೂಲದ ಇವರು ತ್ಯಾಜ್ಯ ವಸ್ತುಗಳನ್ನು ಬಳಸಿ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಗುರುತಿಸಿ ಕೊಂಡಾಡಿದ್ದಾರೆ.
ಪ್ರಧಾನಿಯವರು ಚುನಾವಣಾ ರ್ಯಾಲಿಯ ಹಿನ್ನೆಲೆಯಲ್ಲಿ ಒಡಿಶಾದ ಕೇಂದ್ರಪಾರಕ್ಕೆ ತೆರಳಿದ್ದರು. ನಂತರ ಅಲ್ಲಿ ಕಮಲಾ ಮಹಾರಾಣಾ ಅವರನ್ನು ಭೇಟಿಯಾದರು. ಈ ವೇಳೆ ಕಮಲಾ ಅವರು ಮೋದಿಯವರ ಕಾಲಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಮಂಡಿಯೂರಿ ಕಮಲಾ ಕಾಲಿಗೆ ನಮಸ್ಕರಿಸಿದ್ದಾರೆ. ಇದನ್ನು ಕಂಡ ಜನರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಪ್ರಧಾನಿಯ ಸರಳತೆಗೆ ಎಲ್ಲರೂ ಮುಖವಿಸ್ಮಿತರಾಗಿದ್ದಾರೆ.