ಬೆಂಗಳೂರು, ಮೇ 31 : ಜಗತ್ತಿನಾದ್ಯಂತ ಕೊರೊನಾ ಅಟ್ಟಹಾಸ ಮಿತಿ ಮೀರಿದೆ. ದೇಶಗಳು ಕೊರೊನಾ ಸೋಂಕು ನಿಯಂತ್ರಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೂ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಏರುಗತಿಯಲ್ಲಿ ಹೆಚ್ಚಳವಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ರಾಷ್ಟ್ರಗಳು ದಿಕ್ಕೆಟ್ಟು ಕೂತಿದೆ.
ಇದೇ ವೇಳೆ ಕನ್ನಡದ ಹಿರಿಯ ನಟ ಅನಂತ್ ನಾಗ್ ಕೊರೊನಾ ಸೋಂಕಿನ ಇಂದಿನ ಪರಿಸ್ಥಿತಿ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ದಿನಗಳು ಕಳೆಯುತ್ತಿವೆ. ಪಾಶ್ಚಾತ್ಯ ದೇಶಗಳು ಅನ್ನಿಸಿಕೊಂಡ ರಾಷ್ಟ್ರಗಳಲ್ಲಿ ಸಾವು ನೋವುಗಳನ್ನು ನೋಡುತ್ತಿದ್ದೇನೆ. ಆದರೆ ಒಂದು ಆಶ್ಚರ್ಯ ಅನ್ನಿಸುತ್ತದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಮಾಡಿ ಯಶಸ್ವಿಯಾಗಿ ಕೊರೊನಾ ಸಾವುಗಳ ಸಂಖ್ಯೆ ಕಡಿಮೆಯಾಗುವಂತೆ ನೋಡಿಕೊಂಡರು. ತುಂಬಾ ಸ್ಪಷ್ಟವಾಗಿ ಅದು ತಿಳಿಯುತ್ತಿದೆ. ಆದರೆ ಕೆಲವರಿಗೆ ಅದು ಅರ್ಥವಾಗುತ್ತಿಲ್ಲ. ಪ್ರಧಾನಿಯವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಒಂದು ಒಳ್ಳೆಯ ಮಾತು ಹೇಳುವ ಯೋಗ್ಯತೆ ಇಲ್ಲ ಅವರಿಗೆ, ಉಲ್ಟಾ ಮಾತನಾಡುತ್ತಾರೆ.
ಮೊನ್ನೆ ಇಡೀ ದೇಶ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ದೀಪ ಹಚ್ಚಿತು. ಆ ದಿನ ಟಿವಿಯಲ್ಲಿ ಒಂದು ಶ್ಲೋಕ ಹಾಕಿದ್ದರು.
ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದ:|
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ||
ಇದಕ್ಕೆ ಎರಡು ಅರ್ಥ ಇದೆ. ಒಂದು ಶತ್ರುವಿನ ಬುದ್ಧಿ ವಿನಾಶ ಎಂದು, ಮತ್ತೊಂದು ಶತ್ರುತ್ವ ಇಟ್ಟುಕೊಳ್ಳಬೇಕು ಎನ್ನುವ ಬುದ್ಧಿ ಯಾರಿಗೆ ಇದೆಯೋ ಅವರನ್ನು ದೂರ ಮಾಡುವುದಕ್ಕೆ ಈ ದೀಪವನ್ನು ಹಚ್ಚುತ್ತಿದ್ದೇನೆ ಎಂದು
ಟಿವಿಯಲ್ಲಿ ನೋಡುವಾಗ ಇದನ್ನು ಎಲ್ಲೊ ಕೇಳಿದ್ದೇನೆ ಎಂದು ಅನಿಸಿತು. ಆಮೇಲೆ ಗೊತ್ತಾಯಿತು ನನ್ನ ಮೂರು ಅಥವಾ ನಾಲ್ಕನೇ ವಯಸ್ಸಿನಲ್ಲಿ ನನ್ನ ತಾಯಿ ಕಲಿಸಿಕೊಟ್ಟ ಮೊದಲ ಶ್ಲೋಕ ಇದು. ನಾನು ಕಲಿತ ಮೊದಲ ಶ್ಲೋಕ.
ಸಿಲ್ಕ್ ರೋಡ್ಸ್ ಪುಸ್ತಕದಲ್ಲಿ ಇರುವಂತೆ ಜನ ರೋಗ ಬಂದಾಗ ದಬ ದಬನೆ ಬಿದ್ದು ಸಾಯುತ್ತಿದ್ದಾರೆ. ಎಷ್ಟು ವರ್ಷ ಅಂತ ಗೊತ್ತಿಲ್ಲ. ಮೊದಲೆಲ್ಲಾ ಥರ ಲಾಕ್ ಡೌನ್ ಅಂದರೆ ಗೊತ್ತಿರಲಿಲ್ಲ. ನಾಗರಿಕತೆ ಇಷ್ಟೊಂದು ಬೆಳೆದಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ ಆದರೂ ಕೊರೊನಾ ವಿರುದ್ಧ ಹೋರಾಟದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ವಿದೇಶಗಳ ನಾಯಕರು ನರೇಂದ್ರ ಮೋದಿಯವರನ್ನು ಕೇಳಿಕೊಳ್ಳುತ್ತಿದ್ದಾರೆ. ಕೊರೋನಾ ವಿರುದ್ಧದ ಹೋರಾಟವನ್ನು ಎಷ್ಟು ಚೆನ್ನಾಗಿ ಮೋದಿ ನಿಭಾಯಿಸಿದರು ಎಂದರೆ ಅವರಿಗೆ ನಾವು ಅಭಿನಂದನೆ ಸಲ್ಲಿಸಲೇ ಬೇಕು ಎಂದು ನಟ ಅನಂತ್ ನಾಗ್ ಹೇಳಿದ್ದಾರೆ.








