ಯಾವತ್ತು ಪ್ರಿಂಟಿಂಗ್‌ ಪ್ರೆಸ್‌ಗಳು ಪತ್ರಿಕೆಯ ಮುದ್ರಣ ನಿಲ್ಲಿಸುತ್ತವೆಯೋ ಅವತ್ತೇ ಮುದ್ರಣ ಮಾಧ್ಯಮ ಸಾಯುತ್ತದೆ; ಓದುವ ಸಂಸ್ಕೃತಿಯೂ ನಾಶವಾಗುತ್ತದೆ:

1 min read
Marjala manthana Printing press

ಯಾವತ್ತು ಪ್ರಿಂಟಿಂಗ್‌ ಪ್ರೆಸ್‌ಗಳು ಪತ್ರಿಕೆಯ ಮುದ್ರಣ ನಿಲ್ಲಿಸುತ್ತವೆಯೋ ಅವತ್ತೇ ಮುದ್ರಣ ಮಾಧ್ಯಮ ಸಾಯುತ್ತದೆ; ಓದುವ ಸಂಸ್ಕೃತಿಯೂ ನಾಶವಾಗುತ್ತದೆ: Marjala manthana Printing press

ಕಾಲ ಬದಲಾದಂತೆ ತಂತ್ರಜ್ಞಾನ ಮುಂದುವರೆದಂತೆ ಹಳೆಯ ಮಾಧ್ಯಮಗಳು ಮೂಲೆಗೆ ಸರಿದು ಹೊಸದು ಅದರ ಜಾಗ ಆಕ್ರಮಿಸಿಕೊಳ್ಳುವುದು ಒಂದು ಸಾಮಾನ್ಯ ಪ್ರಕ್ರಿಯೆ. ಕ್ಯಾಲ್ಕುಲೇಟರ್‌, ಟೈಪ್‌ರೈಟರ್‌ ಜಾಗದಲ್ಲಿ ಕಂಪ್ಯೂಟರ್‌ ಬಂದಿತು. ಹಾಗಂತ ಇವತ್ತಿಗೂ ಕ್ಯಾಲ್ಕುಲೇಟರ್‌ ಮತ್ತು ಟೈಪ್‌ರೈಟರ್‌ಗಳು ಹೋಗೇಬಿಟ್ಟವು ಅಂತಲ್ಲ. ಅವುಗಳ ಬಳಕೆ ಕಡಿಮೆಯಾಯಿತು. ಟೆಲಿಫೋನ್‌ ಜಾಗದಲ್ಲಿ ಮೊಬೈಲ್‌, ಸ್ಮಾರ್ಟ್‌ಫೋನ್‌ಗಳು ಬಂದವು. ಆದರೂ ಇನ್ನೂ ಟೆಲಿಫೋನ್‌ ಬಳಕೆಯಲ್ಲಿದೆ. ನಾಶವಾಗಿದ್ದು ಪೇಜರ್‌ ಮಾತ್ರ. ರೇಡಿಯೋ ಸತ್ತೇ ಹೋಗಲಿಲ್ಲ, ಅದರ ಬದಲು ಎಫ್‌ಎಂ ಆಗಿ ಹೊಸ ರೂಪ ಧರಿಸಿ ಚಾಲ್ತಿಯಲ್ಲಿದೆ. ಹೀಗೆಯೇ! ಹಳೆಯದರ ಬದಲು ಹೊಸತು, ಹಳೆಯದರ ಮಾರ್ಪಾಡು, ಹೊಸತು ಆವಿಷ್ಕಾರ ಇವೆಲ್ಲವೂ ಲಾಗಾಯ್ತಿನಿಂದಲೂ ನಡೆಯುತ್ತಲೇ ಬಂದಿದೆ. ಸುದ್ದಿಮನೆಯಲ್ಲಿಯೂ ಈ ಪ್ರಕ್ರಿಯೆ ನಡೆದೇ ಇದೆ. ಟಿವಿ ಮಾಧ್ಯಮ ಅದರಲ್ಲೂ ೨೪/೭ ಸುದ್ದಿ ವಾಹಿನಿಗಳು ಬಂದ ಕೂಡಲೇ ಪತ್ರಿಕೆ ಸಾಯುತ್ತದೆ ಎನ್ನುತ್ತಿದ್ದರು. ಆದರೆ ಅವತ್ತೂ ಪತ್ರಿಕೆ ಉಳಿದಿತ್ತು. ಇವತ್ತು ಇಂಟರ್ನೆಟ್‌, ವೆಬ್‌ ದುನಿಯಾ. ಆಗ ಘಟಿಸುವ ಸಂಗತಿಗಳನ್ನು ಆಗಲೇ ವರದಿ ಮಾಡಬಲ್ಲ ಅಂತರ್ಜಾಲ ಮಾಧ್ಯಮಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಂಟರ್ನೆಟ್‌ ಆಧಾರಿತ ವೆಬ್‌ ನ್ಯೂಸ್‌ ಮ್ಯಾಗ್ಜಿನ್‌ಗಳನ್ನು ಫ್ಯೂಚರ್‌ ಎನ್ನಲಾಗುತ್ತಿದೆ. ಈಗಲೂ ಪತ್ರಿಕೆಗಳು ನೇಪಥ್ಯಕ್ಕೆ ಸರಿಯುತ್ತವೆ ಎನ್ನಲಾಗುತ್ತಿದೆ. ಆದರೆ ಫ್ಯಾಕ್ಟ್‌ ಏನೆಂದರೆ ಪತ್ರಿಕೆ ಯಾವತ್ತೂ ಸಾಯುವುದಿಲ್ಲ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಪತ್ರಿಕೆ ಅಥವಾ ಮುದ್ರಣ ಮಾಧ್ಯಮ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜನರೇಷನ್‌ ಬದಲಾದಾಗ ಅದರ ಅಸ್ಥಿತ್ವ ಸ್ವಲ್ಪ ಅಲುಗಾಡಬಹುದು ಅಷ್ಟೆ. ಸಂಪೂರ್ಣ ನಾಶವಾಗುತ್ತದೆ ಎನ್ನುವುದು ಸುಳ್ಳು.
Marjala manthana Printing press

ಕೋವಿಡ್‌ ಬಂದ ನಂತರ ನಮ್ಮ ಪತ್ರಿಕೆಗಳ ಪುಟಗಳು ಕಡಿಮೆಯಾದವು. ಸಾಪ್ತಾಹಿಕ ಸಂಚಿಕೆಗಳು ನಿಂತೇಹೋದವು. ದೊಡ್ಡ ದೊಡ್ಡ ಪತ್ರಿಕಾ ದಿಗ್ಗಜರುಗಳಾದ ಟೈಮ್ಸ್‌ ಗ್ರೂಪ್‌, ಇಂಡಿಯನ್‌ ಎಕ್ಸ್‌ಪ್ರೆಸ್‌, ಹಿಂದೂ, ಮಣಿಪಾಲ್‌ ಮುಂತಾದವು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯಿತು, ಸಂಬಳ ಅರ್ಧಕ್ಕಿಳಿಸಿತು. ಪುಟಗಳು ಸಂಖ್ಯೆ ಕಡಿಮೆಯಾಯಿತಾದರೂ ಪತ್ರಿಕೆಗಳು ನಿಲ್ಲಲಿಲ್ಲ. ಯಾಕಂದರೆ ಪತ್ರಿಕಾ ಮಾರುಕಟ್ಟೆಯ ಆಡ್‌ ರೆವಿನ್ಯೂ ಮಾರ್ಕೆಟ್‌ ಅತಿ ವಿಸ್ತಾರವಾದುದ್ದು. ಸರ್ಕಾರಗಳ ನೋಟಿಫಿಕೇಶನ್‌ಗಳಿಂದ, ಹರಾಜು ಪ್ರಕ್ರಿಯೆ ಸೂಚನೆಗಳು, ಕ್ಲಾಸಿಫೈಡ್‌ಗಳು ಟೆಂಡರ್‌ ಪ್ರಕ್ರಿಯೆ ಅಧಿಸೂಚನೆ ಇತ್ಯಾದಿ ಆಡಳಿತಾತ್ಮಕ ಸೂಚನೆ ರವಾನಿಸಲು ಇರುವ ಏಕೈಕ ಮಾಧ್ಯಮ ಪತ್ರಿಕೆ ಮಾತ್ರ. ನಮ್ಮ ಭಾರತದ ಭಾಗ್ಯ ವಿಧಾತ ಪ್ರಧಾನಿಗಳಂತೂ ವರ್ಷಾ ವರ್ಷ ೨೦೦೦ ಕೋಟಿಗೂ ಹೆಚ್ಚು ಜಾಹಿರಾತು ಹಣವನ್ನು ಮುದ್ರಣ ಮಾಧ್ಯಮಗಳಿಗೆ ನೀಡುತ್ತಾರೆ. ಪ್ರತಿ ರಾಜ್ಯಗಳ ಸರ್ಕಾರಗಳೂ ರಾಜ್ಯದ ಮತ್ತು ಕೇಂದ್ರದ ಯೋಜನೆಯ ಶುರುವಾತನ್ನು ದೊಡ್ಡ ದೊಡ್ಡ ಪುಟಗಳ ಜಾಹಿರಾತು ನೀಡಿ ಮುದ್ರಣ ಮಾಧ್ಯಮವನ್ನು ಪೋಷಿಸುತ್ತವೆ. ಖಾಸಗಿ ಸಂಸ್ಥೆಗಳಿಗೂ ಮುದ್ರಣ ಮಾಧ್ಯಮದ ಜಾಹಿರಾತು ಅನಿವಾರ್ಯ. ಯಾಕಂದರೆ ಟಿವಿ ಮಾಧ್ಯಮದಲ್ಲಿ ಇಲ್ಲದ ಒಂದು ಅಡ್ವಾಂಟೇಜ್‌ ಮುದ್ರಣ ಮಾಧ್ಯಮದಲ್ಲಿದೆ. ಅದು ಡಾಕ್ಯಮೆಂಟೇಶನ್‌; ಅಧಿಕೃತ ದಾಖಲೀಕರಣ.

ನಮ್ಮ ಹಿಂದಿನ ತಲೆಮಾರು ಮತ್ತು ನಮ್ಮ ತಲೆಮಾಡಿನವರಿಗೆ ಪತ್ರಿಕೆ ಸಾಂಗತ್ಯ ಅತ್ಯಂತ ಅನಿವಾತರ್ಯ ದೈನಂದಿನ ಚಟುವಟಿಕೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಬೆಳ್ಳಂಬೆಳಿಗ್ಗೆ ಒಂದು ಕಪ್‌ ಕಾಫಿಯ ಜೊತೆ ಪತ್ರಿಕೆ ಓದದೇ ಇದ್ದರೆ ವಿಸರ್ಜನೆಯೇ ಆಗುವುದಿಲ್ಲ. ಎಷ್ಟೆ ಡಿಜಿಟಲ್‌ ಸ್ವರೂಪದ ಪತ್ರಿಕೋದ್ಯಮ ಜಾರಿಯಾದರೂ ಹಾರ್ಡ್‌ ಕಾಪಿ ಓದುವ ಸುಖವಿದೆಯಲ್ಲ ಅದನ್ನು ಯಾವ ವೆಬ್‌ ಚಾನೆಲ್‌ಗಳೂ ಮಾಡುವುದಿಲ್ಲ. ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದಾರೆ ಅನ್ನುವುದು ಒಂದು ಮಿಥ್‌ ಅಷ್ಟೆ. ಓದುಗರು ಇದ್ದೇ ಇರುತ್ತಾರೆ ಅವರಿಗೆ ಉತ್ತಮವಾದುದ್ದನ್ನು ಕೊಡಬೇಕಿರುವುದು ಪತ್ರಕರ್ತರನ ಕರ್ತವ್ಯ ಮತ್ತು ಪತ್ರಿಕಾ ಧರ್ಮ ಅಷ್ಟೆ. ಇವತ್ತಿನ ಪೀಳಿಗೆಯ ಬಹಳಷ್ಟು ಮಂದಿ ಮೊಬೈಲ್‌ ದಾಸರಾಗಿರುವ ಕಾರಣ ಎಲ್ಲವೂ ಅಂತರ್ಜಾಲದಲ್ಲೇ ಬೇಕು. ಒಂದು ವೇಳೆ ಅಂತರ್ಜಾಲದ ಮೇಲೆ ನಿಯಂತ್ರಣ ಹೇರಲ್ಪಟ್ಟರೇ ಅಥವಾ ಇಂಟರ್ನೆಟ್‌ ಬಳಕೆ ಅಪಾಯಗಳು ಮಿತಿಮೀರಿದಾಗ ಮತ್ತೆ ಯಥಾ ಪ್ರಕಾರ ಈ ಜನಸಮೂಹ ಮುದ್ರಣ ಮಾಧ್ಯಮದತ್ತ ಹೊರಳುತ್ತಾರೆ. ಪತ್ರಿಕೆ ಅಥವಾ ಪತ್ರಿಕೋದ್ಯಮವಿಲ್ಲದ ಜನಸಮಾಜ ಇರಲು ಸಾಧ್ಯವೇ ಇಲ್ಲ. ಎಷ್ಟೇ ಆಧುನಿಕ ತಂತ್ರಜ್ಞಾನ ಬದಲಾದರೂ ನಮ್ಮ ಮೈಂಡ್‌ ಸೆಟ್‌ ಬದಲಾಗುವುದಿಲ್ಲ. Marjala manthana Printing press

Marjala manthana Printing press
ಮುದ್ರಣ ಮಾಧ್ಯಮದ ಇತಿಹಾಸ ಬಹಳ ಪುರಾತನವಾದುದ್ದು. ಕ್ರಿ.ಶ ೮೬೮ರಲ್ಲಿ ಚೀನಾದಲ್ಲಿ ಪ್ರಕಟವಾದ ಮೊತ್ತಮೊದಲ ಮುದ್ರಿತ ಪುಸ್ತಕ ಡೈಮಂಡ್‌ ಸೂತ್ರ. 1041ರ ಹೊತ್ತಿಗೆ ಚೀನಿಯರು ಮಣ್ಣಿನ ಮುದ್ರಣ ಯಂತ್ರವನ್ನು ಬಳಸುತ್ತಿದ್ದರಂತೆ. ೧೨ನೇ ಶತಮಾನದಲ್ಲಿ ಉತ್ತರದ ಸಾಂಗ್‌ ಸಾಮ್ರಾಜ್ಯದ ಅವಧಿಯಲ್ಲಿ ಚೀನಿಯರು ತಾಮ್ರದ ಹಾಳೆಗಳುಳ್ಳು ಮುದ್ರಣ ಯಂತ್ರವನ್ನು ಕಂಡುಹಿಡಿದಿದ್ದರು. ಅದನ್ನು ಆಗ ದೊಡ್ಡ ಪ್ರಮಾಣದಲ್ಲಿ ಕರೆನ್ಸಿ ಪ್ರಿಂಟ್‌ ಮಾಡಲು ಮಾತ್ರ ಉಪಯೋಗಿಸಲಾಗುತ್ತಿತ್ತು. ನಂತರ ಈ ತಂತ್ರಜ್ಞಾನ ಮತ್ತಷ್ಟು ಅಪ್‌ಗ್ರೇಡ್‌ ಆಗಿ ಕೋರಿಯಾದ ಗೋರ್ಯೋ ಸಾಮ್ರಾಜ್ಯವನ್ನು ತಲುಪಿತು. ೧೨೩೦ರ ಸುಮಾರಿಗೆ ಕೊರಿಯನ್ನರು ಲೋಹದ ಮುದ್ರಣ ಯಂತ್ರ ಶುರುಮಾಡಿದರು, ಅದರಲ್ಲಿ ಕಂಚಿನ ಹಾಳೆ ಬಳಸಲಾಯಿತು. ಜರ್ಮನಿಯ ಮಿಯಾಂಜ್‌ ನ ರಾಜಕಾರಣಿ ಗೋಲ್ಡ್‌ಸ್ಮಿತ್‌ ಮತ್ತು ಜೋಹನ್ನೇಸ್‌ ಗುಟೇನ್‌ಬರ್ಗ್‌ ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನಲ್ಲಿ ೧೪೪೦ರ ಸುಮಾರಿಗೆ ಮುದ್ರಣ ಮಾಧ್ಯಮದಲ್ಲಿ ಮತ್ತಷ್ಟು ಆಧುನಿಕತೆ ಸೇರಿಸಿ ಹೊಸ ನಮೂನೆಯ ಪ್ರಿಂಟಿಂಗ್‌ ಕೌಶಲ್ಯ ಪರಿಚಯಿಸಿದರು.

ಮುದ್ರಣ ಮಾಧ್ಯಮ ನಮ್ಮ ದೇಶದಲ್ಲಿ ಆರಂಭವಾಗಿದ್ದು 1780ರ ಪೂರ್ವಾರ್ಧದಲ್ಲಿ, ಸಮೂಹ ಸಂವಹನದ ಇನ್ನೊಂದು ಪ್ರಭಾವಿ ಮಾಧ್ಯಮ ರೇಡಿಯೋ ಶುರುವಾಗಿದ್ದು ೧೯೨೭ರಲ್ಲಿ. ಮೊತ್ತಮೊದಲು ಭಾರತದಲ್ಲಿ ಸುದ್ದಿ ಪತ್ರಿಕೆ ಪ್ರಕಟವಾಗಿದ್ದ ೨೯ ಜನವರಿ ೧೭೮೦ರಲ್ಲಿ. ಬ್ರಿಟೀಶ್‌ ರಾಜ್‌ ಅಧಿಪತ್ಯ ನಡೆಯುತ್ತಿದ್ದಾಗ ಜೇಮ್ಸ್‌ ಅಗಸ್ಟಸ್‌ ಹಿಕ್ಕಿ ಬೆಂಗಾಲ್‌ ಗೆಜೆಟ್‌ ಶುರು ಮಾಡಿದ. ಇದನ್ನು ಕೊಲ್ಕತ್ತದಲ್ಲಿ ಹಿಕ್ಕಿಸ್‌ ಗೆಜೆಟ್‌ ಎಂದೇ ಕರೆಯಲಾಗುತ್ತಿತ್ತಂತೆ. ಅದಾದ ನಂತರ ದಿನಪತ್ರಿಕೆ ಅಥವಾ ಮುದ್ರಣ ಮಾಧ್ಯಮ ಅತಿ ಹೆಚ್ಚು ಸಕ್ರಿಯವಾಗಿ ಜನಮಾನಸದ ಮಧ್ಯೆ ಸೇರಿಕೊಂಡಿದ್ದು ಭಾರತದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಸಂದರ್ಭದಲ್ಲಿ.

ಭಾರತೀಯ ಭಾಷೆಗಳ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಸಿಕೊಂಡವರು ರಾಜಾರಾಮ್‌ ಮೋಹನ್‌ ರಾಯ್. ಅವರ ಪ್ರಕಾಶನ ಸಂಸ್ಥೆಯಲ್ಲಿ ೧೮೨೧ರ ವೇಳೆಗೆ ಬೆಂಗಾಲಿ ಭಾಷೆಯಲ್ಲಿ ಸಂಬಂಧ್‌ ಕೌಮುದಿ ಅನ್ನುವ ಪತ್ರಿಕೆ ಮತ್ತು ೧೮೨೨ರಲ್ಲಿ ಮಿರತ್‌ ಉಲ್‌ ಅಕ್ಬರ್‌ ಅನ್ನುವ ಪರ್ಷಿಯನ್‌ ಭಾಷೆಯ ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಸದ್ಯ ಭಾರತದಲ್ಲಿ ೪೦೦ ಸುದ್ದಿ ವಾಹಿನಿಗಳೂ ಸೇರಿದಂತೆ ಒಟ್ಟು 1,600 ಸ್ಯಾಟಲೈಟ್‌ ಚಾನೆಲ್‌ಗಳಿವೆ. ಆದರೂ ಭಾರತದ ನ್ಯೂಸ್‌ ಪೇಪರ್‌ ಮಾರುಕಟ್ಟೆ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಇಂದಿಗೂ ದೃಢವಾಗಿ ನಿಂತಿದೆಯೆಂದರೇ, ೧೦೦ ಮಿಲಿಯನ್‌ ನ್ಯೂಸ್‌ ಪೇಪರ್‌ ಕಾಪಿಗಳು ಪ್ರತಿನಿತ್ಯ ಮಾರುಕಟ್ಟೆ ತಲುಪುತ್ತವೆ. ಅಂದಹಾಗೆ ನಿಮಗೆ ನೆನಪಿರಲಿ ಭಾರತದ ಮೊತ್ತ ಮೊದಲ ದಿನಪತ್ರಿಕೆ ಹಿಕ್ಕಿ ಸಂಸ್ಥಾಪಿಸಿದ ಬೆಂಗಾಲ್‌ ಗೆಜೆಟ್‌ ಪ್ರಾರಂಭವಾಗಿದ್ದು ೧೭೮೦ರಲ್ಲಿ. ಅಂದಿನಿಂದ ಇಂದಿನವರೆಗೆ ಪತ್ರಿಕೆಗಳು ಬೆಳೆದು ನಿಂತ ಪರಿಯಿದೆಯಲ್ಲ ಇಟ್ಸ್‌ ಅಮೇಜಿಂಗ್! ೩೧ ಮಾರ್ಚ್‌ ೨೦೧೮ರ ಅಂತ್ಯದಲ್ಲಿ ದೆಹಲಿಯ ಆರ್‌ಎನ್‌ಐ ಬಹಿರಂಗ ಪಡಿಸಿದ ಮಾಹಿತಿಯ ಅನ್ವಯ ಭಾರತದಲ್ಲಿ ಒಟ್ಟು ೧ ಲಕ್ಷಕ್ಕೂ ಅಧಿಕ ರಿಜಿಸ್ಟರ್‌ ಆಗಿರುವ ಪತ್ರಿಕೆಗಳಿವೆ.
Marjala manthana Printing press
ವಿಶ್ವದಲ್ಲಿ ಭಾರತದ ಮುದ್ರಣ ಮಾಧ್ಯಮ ಅತ್ಯಂತ ಪ್ರಾಚೀನ ಮತ್ತು ಅತ್ಯಂತ ಬೃಹತ್‌ ಗಾತ್ರದ ಪತ್ರಿಕಾ ಉದ್ಯಮವೆಂದು ಕರೆಸಿಕೊಳ್ಳುತ್ತದೆ. ಭಾರತದಲ್ಲಿ ಅತಿ ಹೆಚ್ಚಿ ಪ್ರಸರಣವುಳ್ಳ ಟೈಮ್ಸ್‌ ಆಫ್‌ ಇಂಡಿಯಾ ವಿಶ್ವದ ೮ನೇ ಅತಿ ಹೆಚ್ಚು ಪ್ರಸರಣವುಳ್ಳ ಪತ್ರಿಕೆಯೂ ಹೌದು. ಒಂದು ಮೂಲದ ಮಾಹಿತಿಯ ಪ್ರಕಾರ ಇದರ ಸರ್ಕ್ಯುಲೇಷನ್‌ 3.146 ಮಿಲಿಯನ್. ವಾರ್ತಾ ದಿನಪತ್ರಿಕೆಗಳು, ನಿಯತಕಾಲಿಕೆಗಳು ಪ್ರಟಕವಾಗುವ ಆಫ್‌ಸೆಟ್‌ ಪ್ರಿಂಟಿಂಗ್‌ ಪ್ರೆಸ್‌ನಿಂದ ರೋಟೋಗ್ರೇವುರ್‌ ಪ್ರಿಂಟಿಂಗ್‌, ಫ್ಲೆಕ್ಸೋಗ್ರಫಿ, ಡಿಜಿಟಲ್‌ ಪ್ರಿಂಟಿಂಗ್‌, ಸ್ಕ್ರೀನ್‌ ಪ್ರಿಂಟಿಂಗ್‌ ಹಾಗೂ ೩ಡಿ ಪ್ರಿಂಟಿಂಗ್‌ ತಂತ್ರಜ್ಞಾನದ ವರೆಗೆ ನಮ್ಮ ಮುದ್ರಣ ಮಾಧ್ಯಮದ ಟೆಕ್ನಾಲಜಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇವತ್ತು ನಾವು ದಿನಪತ್ರಿಕೆಗಳನ್ನು ಓದುತ್ತೇವೆ, ಜೊತೆಗೆ ಟ್ಯಾಬ್ಲಾಯ್ಡ್‌ಗಳಿವೆ, ಮ್ಯಾಗ್ಜಿನ್‌ಗಳಿವೆ. ಇವೆಲ್ಲವನ್ನೂ ಇ-ಬುಕ್‌ ಅಥವಾ ಪಿಡಿಎಫ್‌ ಸ್ವರೂಪದಲ್ಲಿ ಓದುವುದು ಅನಿವಾರ್ಯವಾದರೆ ಅದಕ್ಕಿಂತ ಪ್ರಯಾಸದ ವಿಚಾರ ಮತ್ತೊಂದಿಲ್ಲ. ಮುದ್ರಣಮಾಧ್ಯಮ ನಿಜಕ್ಕೂ ಸಾಯುವುದು ಆಗ ಮಾತ್ರ. ಯಾವತ್ತು ನಮ್ಮ ದೇಶದ ಮುದ್ರಣ ಯಂತ್ರಗಳು ಪತ್ರಿಕೆಯನ್ನು ಪ್ರಿಂಟ್‌ ಮಾಡುವುದನ್ನು ನಿಲ್ಲಿಸುತ್ತವೆಯೋ ಅವತ್ತೇ ನಮ್ಮ ಓದುವ ಸಂಸ್ಕೃತಿಯೂ ನಾಶವಾಗುತ್ತದೆ ನೆನಪಿಡಿ.

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd