NEET UG 2022 ಫಲಿತಾಂಶ ಪ್ರಕಟ: ಕರ್ನಾಟಕದ ಹೃಷಿಕೇಶ್ ಗೆ 3ನೇ ಸ್ಥಾನ
ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್(NEET) ಯುಜಿ 2022 ಫಲಿತಾಂಶವನ್ನು ಪ್ರಕಟಗೊಂಡಿದೆ. . ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು 3 ಹಾಗೂ 4ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲನೇ ಸ್ಥಾನ ರಾಜಸ್ಥಾನದ ವಿದ್ಯಾರ್ಥಿನಿ ತನಿಷ್ಕಾ ಪಾಲಾಗಿದೆ.
ಅಭ್ಯರ್ಥಿಗಳು ಎನ್ಟಿಎ ನೀಟ್ ಯುಜಿಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ ntaneet.ac.in ಅಥವಾ nta.nic.in ಮೂಲಕ ಲಾಗಿನ್ ಆಗಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
ಈ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ ರಾಜಸ್ಥಾನದ ಅಭ್ಯರ್ಥಿ ತನಿಷ್ಕಾ ಭಾರತದಲ್ಲೇ ಅಗ್ರ ಸ್ಥಾನವನ್ನು ಪಡೆದಿದ್ದು, ಇವರ ನಂತರ ವತ್ಸಾ ಆಶಿಶ್ ಬಾತ್ರಾ ಅವರು ಎರಡನೇ ರ್ಯಾಂಕ್ ಪಡೆದಿದ್ದಾರೆ.
ಕರ್ನಾಟಕ ಮೂಲದ ಹೃಷಿಕೇಶ್ ನಾಗಭೂಷಣ ಗಂಗೂಲೆ ಮೂರನೇ ರ್ಯಾಂಕ್ ಪಡೆದುಕೊಂಡಿದ್ದು ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಮತ್ತು ಕರ್ನಾಟಕದವರೇ ಆದ ರುಚಾ ಪವಾಶೆ ಶೇ.99.997733 (715 ಅಂಕ) ಪಡೆದು ದೇಶಕ್ಕೆ 4 ಮತ್ತು ಕರ್ನಾಟಕದಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಜುಲೈ 17ರಂದು ದೇಶದ 546 ನಗರಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳಿಗೆ ಬಹುನಿರೀಕ್ಷಿತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ಒಟ್ಟು 17.64 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು.