ಬೆಂಗಳೂರು: ರಾಮೇಶ್ವರಂ ಕೆಫೆಯ ಬಾಂಬರ್ ಬಾಂಬರ್ ಬಿಎಂಟಿಸಿ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸಿದ ದೃಶ್ಯ ಸೆರೆಯಾಗಿದ್ದು, ಪತ್ತೆಯಾಗಿದೆ.
ಬೆಳಗ್ಗೆ 11:32ಕ್ಕೆ ರಾಮೇಶ್ವರಂ ಕೆಫೆ ಪ್ರವೇಶಿಸಿ ರವೆ ಇಡ್ಲಿ ಖರೀದಿಸಿದ್ದಾನೆ. ಆನಂತರ ಕೇವಲ 9 ನಿಮಿಷಗಳಲ್ಲಿ ಬಾಂಬ್ ಇಟ್ಟು 11:41ಕ್ಕೆ ಕೆಫೆಯಿಂದ ತೆರಳಿದ್ದಾನೆ. ನಂತರ ಆತ ಕುಂದಲಹಳ್ಳಿಯಿಂದ ಕಾಡುಗೋಡಿಗೆ ಹೋಗುವ ವೋಲ್ವೋ ಬಸ್ಸು ಹತ್ತಿದ್ದಾನೆ. ಮಧ್ಯ ಭಾಗಕ್ಕೆ ಬಂದ ನಂತರ ಬಸ್ಸಿನಲ್ಲಿ ಸಿಸಿಟಿವಿ ಇರುವುದನ್ನು ಆತ ನೋಡಿದ್ದಾನೆ. ಕೂಡಲೇ ಅಲ್ಲಿಂದ ಮುಂದುಗಡೆ ಡ್ರೈವರ್ ಹತ್ತಿರ ಇರುವ ಸೀಟಿನಲ್ಲಿ ಕುಳಿತುಕೊಳ್ಳುತ್ತಾನೆ. ಆತುರ ಆತುರವಾಗಿಯೇ ಬಸ್ಸಿನಲ್ಲಿ ಬಾಂಬರ್ ಓಡಾಡಿದ್ದಾನೆ.
ಐಟಿಪಿಎಲ್ನಿಂದ ಬಸ್ ನಲ್ಲಿ ಬಂದ ಈತ ಬೆಳಗ್ಗೆ 10:45ಕ್ಕೆ ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿದಿದ್ದಾನೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾಲ ಕಳೆದು ಟೈಮರ್ ಫಿಕ್ಸ್ ಮಾಡಿ ನಂತರ ನಡೆದುಕೊಂಡು ಬಂದಿದ್ದ. ಈತ ಮಾಸ್ಕ್ ಹಾಗೂ ಹ್ಯಾಟ್ ಧರಿಸಿ ನಡೆದುಕೊಂಡು ಬರುವಾಗ ಎಲ್ಲಿಯೂ ಪಾದಚಾರಿ ಮಾರ್ಗದಲ್ಲಿ ಆಗಮಿಸದೆ ರಸ್ತೆಯಲ್ಲೇ ನಡೆದಿದ್ದಾನೆ. ಪಾದಚಾರಿ ಮಾರ್ಗದಲ್ಲಿ ನಡೆದರೆ ತನ್ನ ಚಹರೆ ಸುಲಭವಾಗಿ ಸಿಗಬಹುದು ಎಂಬ ಕಾರಣಕ್ಕೆ ರಸ್ತೆಯಲ್ಲೇ ನಡೆದುಕೊಂಡು ಕೆಫೆಯತ್ತ ಹೆಜ್ಜೆ ಹಾಕಿದ್ದಾನೆ.
ಪಾದಚಾರಿ ಮಾರ್ಗ ಬಿಟ್ಟು ರಸ್ತೆಯಲ್ಲಿ ನಡೆದಿರುವುದು, ಡಮ್ಮಿ ಫೋನ್ ಬಳಸಿರುವುದು, ತಲೆ ಕೆಳಗಡೆ ಹಾಕಿ ಹೆಜ್ಜೆ ಹಾಕಿರುವುದು, ಪರಿಚಯ ಸಿಗದೇ ಇರಲು ಮಾಸ್ಕ್ ಮತ್ತು ಹ್ಯಾಟ್ ಧರಿಸಿರುವುದು ನೋಡಿದಾಗ ಆತ ಸಿದ್ಧತೆ ಮಾಡಿಕೊಂಡಿದ್ದಾನೆ ಎಂಬುವುದು ಸ್ಪಷ್ಟವಾಗಿದೆ. ಸದ್ಯ ಈತನ ಚಹರೆ ಸಿಕ್ಕಿದೆ.