ದುರುಳರು ಮಹಿಳೆಯನ್ನು ಅರೆಬೆತ್ತಲಗೊಳಿಸಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆಯೊಂದು ಪಂಜಾಬ್ ನಲ್ಲಿ ವರದಿಯಾಗಿದೆ.
ಮಗಳ ಪ್ರೇಮ ವಿವಾಹದಿಂದ ಕೋಪಗೊಂಡಿದ್ದ ಓರ್ವ ಮಹಿಳೆ ತನ್ನಿಬ್ಬರು ಪುತ್ರರೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾಳೆ. ಅಳಿಯನ ತಾಯಿಯನ್ನು ಥಳಿಸಿ, ಬಟ್ಟೆ ಹರಿದು ರಸ್ತೆಯಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ.ಸದ್ಯ ಪ್ರಕರಣಕ್ಕೆ ಸಂಬಂಧಿಸಿದೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ರಾಜ್ಯ ಸೇರಿದಂತೆ ದೇಶದಲ್ಲಿ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಮಹಿಳಾ ಆಯೋಗ ಈ ಪ್ರಕರಣದ ಕುರಿತು ಕಿಡಿ ಕಾರಿದೆ. ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯೊಂದಿಗೆ ಮದುವೆಯಾಗಿದ್ದ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಈ ಮದುವೆಗೆ ಒಪ್ಪಿಗೆ ನೀಡಿತ್ತು. ಇದು ಯುವತಿಯ ತಾಯಿಗೆ ಬೇಸರ ತರಿಸಿತ್ತು. ಇದರಿಂದ ಕೋಪಗೊಂಡು
ತಾಯಿ ಕುಲ್ವಿಂದರ್ ಕೌರ್, ಮಕ್ಕಳಾದ ಶರಣಜಿತ್ ಸಿಂಗ್ ಸನ್ನಿ, ಗುರ್ಚರಣ್ ಸಿಂಗ್ ಮತ್ತು ಇತರರೊಂದಿಗೆ ಸೇರಿ ಗಲಾಟೆ ಮಾಡಿದ್ದಾಳೆ. ಮನೆಯಲ್ಲಿ ಯಾರೂ ಇರಲಿಲ್ಲ. ಆದರೆ, ಅಳಿಯನ ತಾಯಿ ಮಾತ್ರ ಇದ್ದರು. ಈ ವೇಳೆ ಮಹಿಳೆಯ ಮೇಲೆ ಹಲ್ಲೆ ಮಾಡಿ, ಬಟ್ಟೆ ಹರಿದು ಮೆರವಣಿಗೆ ಮಾಡಿದ್ದಾರೆ.