ಗೋವಾದಲ್ಲಿ ಬಿಜೆಪಿ ಒಕ್ಕೂಟದ ಬಲ 24ಕ್ಕೆ ಏರಿಕೆಯಾಗಿದೆ – Saaksha Tv
ಗೋವಾ: ಗೋವಾದಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆದ್ದಿದ್ದರು, ಸರಕಾರ ರಚಿಸಲು ಬಹುಮತ ಇಲ್ಲದ ಕಾರಣ ಸರಕಾರ ರಚಿಸಲು ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದಿದೆ.
ಗುರುವಾರ ಪಂಚರಾಜ್ಯ ಚುನಾವಣೆಯ ಪಲಿತಾಂಶ ಹೊರಬಿದ್ದಿದ್ದು, ಗೋವಾದಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರು ಸರಕಾರ ರಚಿಸಲು 21 ಸ್ಥಾನಗಳ ಅವಶ್ಯಕತೆ ಇದೆ. ಹೀಗಾಗಿ ಬಿಜೆಪಿ ಮೂವರು ಸ್ವತಂತ್ರ ಶಾಸಕರು ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಓರ್ವ ಶಾಸಕನ ಸಹಾಯದಿಂದ ಸರಕಾರ ರಚಿಸಲು ಮುಂದಾಗಿದೆ. ಈ ಮೂಲಕ ಬಿಜೆಪಿ ಒಕ್ಕೂಟದ ಬಲ 24ಕ್ಕೆ ಏರಿಕೆಯಾಗಿದೆ.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಂಸದೀಯ ಸಮಿತಿ ಗುರುವಾರ ತಡರಾತ್ರಿ ದೆಹಲಿಯಲ್ಲಿ ಸಭೆ ನಡೆಸಿ ಗೋವಾಕ್ಕೆ ವಿಶೇಷ ವೀಕ್ಷಕರನ್ನು ಆಯ್ಕೆ ಮಾಡಿದೆ. ವಿಶೇಷ ವೀಕ್ಷಕರು ಗೋವಾಗೆ ಬರಲಿದ್ದು, ಅವರ ಸಮ್ಮುಖದಲ್ಲಿ ಪಕ್ಷದ ಶಾಸಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ.
ಆಯ್ಕೆ ನಂತರ ಸರ್ಕಾರ ಸ್ಥಾಪನೆಗಾಗಿ ರಾಜ್ಯಪಾಲರಿಗೆ ಹಕ್ಕೊತ್ತಾಯ ಮಾಡುವುದಾಗಿ ಗೋವಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮೂಲಗಳ ಪ್ರಕಾರ ಗೋವಾದಲ್ಲಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಹೀಗಾಗಿ ಅವರೇ ಶಾಸಕಾಂಗ ಪಕ್ಷದ ನಾಯಕರಾಗಲಿದ್ದಾರೆ ಎನ್ನಲಾಗಿದೆ.
ಇದೇ ರೀತಿಯಾಗಿ 2017 ರಲ್ಲಿ, ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಆದರೆ 13 ಸ್ಥಾನಗಳನ್ನು ಗೆದ್ದ ಬಿಜೆಪಿ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ತಲಾ ಮೂರು ಸ್ಥಾನಗಳನ್ನು ಗೆದ್ದ MGP ಮತ್ತು ಇಬ್ಬರು ಸ್ವತಂತ್ರರ ಬೆಂಬಲದೊಂದಿಗೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು.
2022ರಲ್ಲಿ ಗೋವಾದಲ್ಲಿ ಬಿಜೆಪಿ ಗೆಲುವಿನ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಡ್ನವೀಸ್ ಅಧಿಕಾರ ಸ್ಥಾಪನೆ ಕುರಿತು ಮಾಹಿತಿ ನೀಡಿ, 10 ವರ್ಷಗಳ ನಂತರ ಗೋವಾದ ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಾಡೆ, ಗೋವಾ ಚುನಾವಣಾ ಉಸ್ತುವಾರಿ ಸಿ.ಟಿ.ರವಿ, ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಭಾಗವಹಿಸಿದ್ದರು.








