ಬೆಂಗಳೂರು : ಶೀಘ್ರದಲ್ಲೇ ಮುಜರಾಯಿ ಇಲಾಖೆಯ ಎಲ್ಲ ದೇವಾಲಯಗಳನ್ನು ತೆರೆಯಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಾದ್ಯಂತ ಮೂರನೇ ಹಂತದ ಲಾಕ್ ಡೌನ್ ವಿಸ್ತರಣೆಯಾಗಿದ್ದರೂ ರಾಜ್ಯದಲ್ಲಿ ಕೆಲವು ವಲಯಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಹಸಿರು ವಲಯದಲ್ಲಿರುವ ಜಿಲ್ಲೆಗಳಲ್ಲಿ ಮುಕ್ತ ಓಡಾಟ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ, ಮದ್ಯ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಅದರಂತೆ ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಸ್ಥಾನಗಳನ್ನು ಸದ್ಯದಲ್ಲೇ ತೆರೆಯಲಾಗುವುದು ಎಂದರು.
ಆದರೆ, ದೇವಾಲಯದ ಒಳಗೆ ನೂಕು ನುಗ್ಗಲಿಗೆ ಅವಕಾಶ ಇಲ್ಲ. ಭಕ್ತರು ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೆ ದೇವರ ದರ್ಶನ ಪಡೆಯಬೇಕು. ಆರಂಭದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಪ್ರಮುಖ ದೇವಸ್ಥಾನಗಳನ್ನು ತೆರೆಯಲಾಗುವುದು ನಂತರ ಇತರೆ ದೇವಾಲಯಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.