ಕೊಪ್ಪಳ : ಬಹಳ ಜನ ಅಸಮಾಧಾನಿತ ಬಿಜೆಪಿ ಶಾಸಕರು ನನ್ನನ್ನು ಭೇಟಿಯಾಗಿದಾರೆ. ಅವರು ಸಹಜವಾಗಿ ಅಸಮಾಧಾನ ತೋಡಿಕೊಂಡಿದಾರೆ ಅಷ್ಟೇ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಕೊಪ್ಪಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಭಿನ್ನಮತ ಇರೋದು ಸತ್ಯ. ಬಿಜೆಪಿಯಲ್ಲಿ ಭಿನ್ನಮತ ಮುಂದುವರಿಯುತ್ತೆ. ಅದರಲ್ಲಿ ನಾವು ಕೈ ಹಾಕಲ್ಲ. ಸರಕಾರ ಅದಾಗಿಯೇ ಬಿದ್ದು ಹೋದರೆ ನೋಡೋಣ. ಅಸಂವಿಧಾನಾತ್ಮಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದಾರೆ ಅಂತ ಜನ ಹೇಳ್ತಾರೆ, ನಾವಲ್ಲ. ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ, ವಿಜಯೇಂದ್ರ ಸಹಿ ಮಾಡೋದು ಎಂದು ಬಿಜೆಪಿಯನ್ನು ವ್ಯಂಗ್ಯ ಮಾಡಿದ್ದಾರೆ.
ಇನ್ನೂ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಕೊರೊನಾ ಹೆಸರಿನಲ್ಲಿ ಮುಂದೂಡುವುದನ್ನ ನಾವು ವಿರೋಧಿಸಿದ್ದೇವೆ. ಈ ಕುರಿತು ನ್ಯಾಯಾಲಯದ ಮೊರೆ ಹೋಗುತ್ತೇವೆ. ಅಲ್ಲದೆ ಪ್ರಗತಿಪರರ ಮೇಲೆ ಕೊಪ್ಪಳದಲ್ಲಿ ಕೇಸ್ ಹಾಕುವುದನ್ನ ಖಂಡಿಸುವೆ. ಬಿಜೆಪಿ ಆ ರೀತಿ ಮಾಡಕೂಡದು. ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ಬಿಜೆಪಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.








