ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಮುಡಾ, ವಾಲ್ಮೀಕಿ ಎರಡು ಕೇಸ್ ನಲ್ಲೂ ಅಪರಾಧಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅನೈತಿಕವಾಗಿ ಸಿಎಂ ಸ್ಥಾನದಲ್ಲಿ ಕುಳಿತಿದ್ದಾರೆ. ಮುಡಾ, ವಾಲ್ಮೀಕಿ ಎರಡು ಕೇಸ್ನಲ್ಲಿ ಅವರೇ ಅಪರಾಧಿ. ಮುಡಾ (MUDA Scam) ವಿಚಾರದಲ್ಲಿ ಸೈಟ್ ಗಳನ್ನು ಮರಳಿ ನೀಡಿ ಸಿಕ್ಕಿಕೊಂಡಿದ್ದಾರೆ. ವಾಲ್ಮೀಕಿ ಹಗರಣ (Valmiki Scam) ದ ತನಿಖೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಈಗಾಗಲೇ ಮಾಹಿತಿ ಹೊರ ಹಾಕಿದ್ದಾರೆ. ಜನರ ದುಡ್ಡು ಚುನಾವಣೆಗೆ ಬಳಕೆಯಾಗಿರುವುದರ ಬಗ್ಗೆ ಅಧಿಕಾರಿಗಳು ಮಾಹಿತಿ ಹೊರ ಹಾಕಿದ್ದಾರೆ. ಹೀಗಾಗಿ ಎರಡೂ ಪ್ರಕರಣಗಳ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
1992 ರಿಂದ ಸಿದ್ದರಾಮಯ್ಯ ಒಂದಲ್ಲ ಒಂದು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹೀಗಿರುವಾಗ ಇವರಿಗೆ ಗೊತ್ತಿಲ್ಲದೆ ಈ ರೀತಿ ಆಗಿದೆ ಅನ್ನೋದನ್ನು ಊಹೆ ಮಾಡಲು ಆಗುವುದಿಲ್ಲ. ಹೀಗಾಗಿ ಅವರು ರಾಜಕಾರಣದಲ್ಲಿ ಮುಂದುವರೆಯಲು ಅರ್ಹರಲ್ಲ. ಹೀಗಾಗಿ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.