ವಿಶ್ವ ಅಪಾಯದಲ್ಲಿದೆ ಎಂದು ವಿಶ್ವಸಂಸ್ಥೆ ಆತಂಕ – ಭಾರತದಲ್ಲಿ 3 ಲಕ್ಷ ಗಡಿ ದಾಟಿದ ಕೊರೊನಾ ಪ್ರಕರಣ
ಜಿನೀವಾ, ಜೂನ್ 21: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರ ಏರಿಕೆ ಕಾಣುತ್ತಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ವಿಶ್ವದಾದ್ಯಂತ ಒಟ್ಟು 4. 62 ಲಕ್ಷ ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದರೆ, 87.57 ಲಕ್ಷ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಭಾರತದಲ್ಲಿ ಇಲ್ಲಿಯವರೆಗೆ 3,95,812 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿಶ್ವದ ಅತೀ ಹೆಚ್ಚು ಕೊರೊನಾ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. 22.97 ಲಕ್ಷ ಸೋಂಕು ಪ್ರಕರಣ ದಾಖಲಾಗಿರುವ ಅಮೆರಿಕ ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 10.38 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ರಷ್ಯಾದಲ್ಲಿ 5.69 ಲಕ್ಷ ಜನರಲ್ಲಿ ಸೋಂಕು ಹರಡಿದ್ದು, ಮೂರನೇ ಸ್ಥಾನದಲ್ಲಿದೆ.
ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವವು ಅಪಾಯಕಾರಿ ಹಂತದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದು, ಜನರು ಮನೆಯಲ್ಲೇ ಇದ್ದರೂ ಕೂಡ ಕೊರೊನಾ ವೈರಸ್ ವೇಗವಾಗಿ ವ್ಯಾಪಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕಳವಳ ವ್ಯಕ್ತಪಡಿಸಿದ್ದಾರೆ.