ಮಹಿಳೆಯೊಬ್ಬರು ಶಿವಮೊಗ್ಗದಿಂದ ಬೆಂಗಳೂರಿಗೆ ಬರುವ ರೈಲು ಹತ್ತಿ, ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಅನ್ನಪೂರ್ಣ(50) ಈ ರೀತಿ ಶವವಾಗಿ ಪತ್ತೆಯಾದವರು. ಇವರು ಬೆಂಗಳೂರಿನ ಅರಣ್ಯ ಭವನದಲ್ಲಿ ಸ್ಟೆನೋ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ ಮಗನೊಂದಿಗೆ ವಾಸವಿದ್ದ ಇವರು, ಇತ್ತೀಚೆಗೆ ಶಿವಮೊಗ್ಗಕ್ಕೆ ಕೆಲಸದ ಮೇಲೆ ತೆರಳಿದ್ದರು. ಅಲ್ಲಿ ಸಹೋದರರ ಮನೆಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ಇತ್ತೀಚೆಗೆ ಹೊರಟಿದ್ದರು.
ಇವರೊಂದಿಗೆ ಅವರ ಸಹೋದರ ಕೂಡ ಬೆಂಗಳೂರಿಗೆ ಹೊರಟಿದ್ದಾರೆ. ಆದರೆ, ಅನ್ನಪೂರ್ಣ ಮಹಿಳೆಯರ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರೆ, ಸಹೋದರ ಬೇರೆ ಬೋಗಿಯಲ್ಲಿ ತೆರಳಿದ್ದಾರೆ. ಬೆಳಿಗ್ಗೆ 5 ಗಂಟೆ ವೇಳೆಗೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಾಗ ಸಹೋದರ ಬ್ರಹ್ಮಾನಂದ ರಾನಡೆ ಅನ್ನಪೂರ್ಣಗೆ ಕರೆ ಮಾಡಿದ್ದಾರೆ. ಆದರೆ, ಅವರು ಸ್ವೀಕರಿಸಿಲ್ಲ. ಬೇಗನೆ ಇಳಿದು ಹೋಗಿರಬಹುದು ಅಂದುಕೊಂಡು ಅವರು ತಮ್ಮ ಮತ್ತೊಬ್ಬ ಸಹೋದರಿಯ ಮನೆಗೆ ತೆರಳಿದ್ದಾರೆ. ಆದರೆ, ಮನೆಗೆ ಅನ್ನಪೂರ್ಣ ಬಾರದ ಹಿನ್ನೆಲೆಯಲ್ಲಿ ಅವರ ಮಗ ಸಂಬಂಧಿಕರಿಗೆ ಕರೆ ಮಾಡಿದ್ದಾನೆ. ಆಗ ಸಂಬಂಧಿಕರು ಯಶವಂತಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಇನ್ನೊಂದೆಡೆ ತುಮಕೂರಿನ ಹಿರೇಹಳ್ಳಿ ಹತ್ತಿರ ಮಹಿಳೆ ಶವ ಸಿಕ್ಕಿದೆ ಎಂದು ಪೊಲೀಸರು ಫೋಟೋ ತೋರಿಸಿದಾಗ ಅನ್ನಪೂರ್ಣ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಚಿನ್ನಾಭರಣಕ್ಕಾಗಿ ಅವರನ್ನು ಕೊಲೆ ಮಾಡಿರಬಹುದು ಎಂದು ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.