ಕೊಪ್ಪಳ : ಜಿಲ್ಲೆಯ ಕನಕಗಿರಿಯಲ್ಲಿನ ಜೂನಿಯರ್ ಕಾಲೇಜಿನ ಗೋಡೆಗಳ ಮೇಲೆ ಅಶ್ಲೀಲ ಬರಹ ಬರೆಯುತ್ತಿದ್ದ ಆರೋಪಿಯನ್ನು ಕನಕಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೆಹಬೂಬ್ ಹಸನ್ಸಾಬ್ ಸಿಕಲಗಾರ್(27) ಬಂಧಿತ ಆರೋಪಿಯಾಗಿದ್ದಾನೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, 2 ವರ್ಷಗಳಿಂದ ಹಸನ್ಸಾಬ್ ಸಿಕಲಗಾರ್ ಅಪ್ರಾಪ್ತೆಯನ್ನು ಪ್ರೀತಿ ಮಾಡುತ್ತಿದ್ದ. ಆದರೆ, ಹುಡುಗಿಗೆ ಇತ್ತೀಚೆಗೆ ಬೇರೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇದರಿಂದಾಗಿ ಆತ ಆಕ್ರೋಶಗೊಂಡಿದ್ದ. ದೂರ ಆಗುತ್ತಾಳೆಂಬ ದುರುದ್ದೇಶದಿಂದ ಅಶ್ಲೀಲ ಬರಹ ಬರೆಯುತ್ತಿದ್ದ ಎಂದು ತಿಳಿಸಿದ್ದಾರೆ.
ಒಳ್ಳೆಯವನಂತೆ ನಟಿಸುತ್ತಿದ್ದ ಮೆಹಬೂಬ್ ಹಸನ್ಸಾಬ್ ಸಿಕಲಗಾರ್, ಅನುಮಾನ ಬಾರದಂತೆ ನಡೆದುಕೊಳ್ಳುತ್ತಿದ್ದ. ಆದರೆ, ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ನಕಲಿ ಇನ್ಸ್ಟಾಗ್ರಾಂ ಐಡಿ ಬಳಸಿ ಅಶ್ಲೀಲ ಫೋಟೋ, ಬರಹ ಹರಿಬಿಡುತ್ತಿದ್ದ. ಇವನ ಕೃತ್ಯದಿಂದಾಗಿ ಹಲವಾರು ಯುವತಿಯರು ಭಯದಲ್ಲಿದ್ದರು. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.








