ಭುವನೇಶ್ವರ್ : ಕ್ರಿಕೆಟ್ ನಲ್ಲಿ ನೋಬಾಲ್ ನೀಡಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ಅಂಪೈರ್ ನನ್ನೇ ಕೊಲೆ ಮಾಡಿರುವ ಘಟನೆ ಒಡಿಶಾದ ಕಟಕ್ ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಲಕ್ಕಿ ರಾವುತ್ (22) ಎಂದು ಗುರುತಿಸಲಾಗಿದೆ. ಪಂದ್ಯದ ವೇಳೆ ‘ನೋಬಾಲ್’ ನೀಡಿದ ವಿಚಾರಕ್ಕೆ ಸ್ಮೃತಿ ರಂಜನ್ ರೌತ್ ಎಂಬ ಯುವಕ ಜಗಳ ತೆಗೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬ್ರಹ್ಮಪುರ ಮತ್ತು ಶಂಕರಪುರ ಎಂಬ ಎರಡು ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅಂಪೈರ್ ನೋಬಾಲ್ ನೀಡಿದ್ದರು. ಈ ಕುರಿತು ಅಂಪೈರ್ ಹಾಗೂ ಆಟಗಾರನ ನಡುವೆ ವಾಗ್ವಾದ ನಡೆದಿದೆ. ನಂತರ ಅಂಪೈರ್ಗೆ ಆಟಗಾರ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯನ್ನು ಮೈದಾನದಲ್ಲಿ ಇದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಅಂಪೈರ್ನನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








