ಬೆಂಗಳೂರು : ಕೊರೊನಾ ಹೊಡತಕ್ಕೆ ಗಾಬರಿಗೊಂಡಿದ್ದ ಜನ ಬೆಂಗಳೂರು ಬಿಟ್ಟು ತಮ್ಮ ಊರುಗಳಿಗೆ ತೆರಳಿದ್ದರು. ಲಾಕ್ ಡೌನ್ ಮಾಡಿದರೇ ಬೆಂಗಳೂರಿನಲ್ಲಿ ಬದುಕುವುದು ಕಷ್ಟವಾಗುತ್ತೆ ಎಂದು ವಿದ್ಯಾರ್ಥಿಗಳು, ಮಹಿಳೆಯರು, ಯುವಕರು ತಮ್ಮ ಊರುಗಳಿಗೆ ಹೋಗಿದ್ದರು. ಇದೀಗ ಲಾಕ್ ಡೌನ್ ಸಡಿಲಗೊಂಡ ಬಳಿಕ ಮತ್ತೆ ಸಿಲಿಕಾನ್ ಸಿಟಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಹಾಗಾಗಿ ಎರಡೂವರೆ ತಿಂಗಳಿಂದ ಬಾಗಿಲು ಹಾಕಿದ್ದ ಪಿಜಿಗಳು ಮತ್ತೆ ಓಪನ್ ಮಾಡಲು ಆರೋಗ್ಯ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಪೇಯಿಂಗ್ ಗೆಸ್ಟ್ (ಪಿಜಿ) ನಡೆಸುವ ಮೇಲ್ವಿಚಾರಕರಿಗೆ ಆರೋಗ್ಯ ಇಲಾಖೆ ಪ್ರತ್ಯೇಕ ಸ್ನಾನದ ಕೋಣೆ, ಶೌಚಾಲಯದ ವ್ಯವಸ್ಥೆ ಸೇರಿದಂತೆ
ವಿವಿಧ ಮುಂಜಾಗ್ರತ ಕ್ರಮಗಳು ತೆಗೆದುಕೊಳ್ಳುವುಂತೆ ಸೂಚನೆ ನೀಡಿದೆ. ಊರುಗಳಿಂದ ವಾಪಸ್ ಬರುವವರಿಗೆ ಪಿಜೆಗಳು ಉಳಿಯಲು ಅವಕಾಶ ಮಾಡಿಕೊಡುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಪಿ.ಜಿ ಕಟ್ಟಡಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತಿಳಿಸಿದೆ.
ಪಿಜಿ ಕಟ್ಟಡಗಳಲ್ಲಿ ನೂರಾರು ಮಂದಿ ಆಶ್ರಯ ಪಡೆಯುತ್ತಾರೆ. ಕೆಲವೆಡೆ ಒಂದೇ ರೂಮ್ ನಲ್ಲಿ ಹಲವರು ಇರುತ್ತಾರೆ. ಹಾಗಾಗಿ ಪರಸ್ಪರ ಅಂತರ, ನೆಲಗಳನ್ನು ಸೋಂಕು ನಿವಾರಕದ ಮೂಲಕ ಸ್ವಚ್ಛಗೊಳಿಸುವಿಕೆ, ಅನ್ಯರಿಗೆ ಪ್ರವೇಶ ನಿರ್ಬಂಧ ಸೇರಿದಂತೆ ವಿವಿಧ ಕ್ರಮಗಳೊಂದಿಗೆ ಸೇವೆ ನೀಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
• ಪ್ರತಿ ರೂಮ್ ಗೂ ಹೊಂದಿಕೊಂಡು ಸ್ನಾನಗೃಹ ಹಾಗೂ ಶೌಚಾಲಯ ಕೊಠಡಿ ಇರಬೇಕು
• ಹಾಸಿಗೆಗಳ ನಡುವೆ ಕನಿಷ್ಠ ಎರಡು ಮೀಟರ್ಗಳ ಅಂತರ ಇರಬೇಕು
• ಪ್ರತಿನಿತ್ಯ ಕಟ್ಟಡದ ಹೊರಗೆ ಹಾಗೂ ಒಳಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿ, ಸ್ವಚ್ಛಮಾಡಬೇಕು.
• ಬಟ್ಟೆಗಳನ್ನು ತೊಳೆಯಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು.
• ಯಾವುದೇ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡುವುದು ಮೇಲ್ವಿಚಾರಕ ಜವಬ್ದಾರಿ.
• ಸೋಂಕಿತ ವ್ಯಕ್ತಿ ಇದ್ದಲ್ಲಿ ಇಡೀ ಕಟ್ಟಡಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, 24 ಗಂಟೆಯ ಬಳಿಕ ಪುನರಾರಂಭ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.








