ಸದ್ಯಕ್ಕೆ ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ : ಶ್ರೀರಾಮುಲು Saaksha Tv
ಬೆಂಗಳೂರು: ಸದ್ಯಕ್ಕೆ ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ ಎಂದು ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ವೋಲ್ವೋ ಬಸ್ ಪ್ರಯಾಣ ದರ ಇಳಿಕೆ ಮಾಡಲಾಗಿದೆ. ಹಾಗೂ ನಗರದಲ್ಲಿ 2 ಬಸ್ ಬೆಂಕಿಗೆ ಆಹುತಿಯಾದ ಪ್ರಕರಣ ಬಗ್ಗೆ ಅಧಿಕಾರಿಗಳು ವರದಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡುವೆ ಎಂದು ತಿಳಿಸಿದ್ದಾರೆ.
ಅಲ್ಲದೇ ಪ್ರತಿಭಟನೆ ವೇಳೆ ಭಾಗಿಯಾಗಿದ್ದ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಇದೀಗ ಅವರನ್ನೆಲ್ಲ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂದು 100 ನೌಕರರು, ನಾಳೆ 200 ನೌಕರರ ಮರು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮುಷ್ಕರದಲ್ಲಿ 1,610 ಜನ ಭಾಗಿಯಾಗಿ ತೊಂದರೆಗೀಡಾಗಿದ್ದರು. ಮರು ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ನಿಮ್ಮ ಕುಟುಂಬವನ್ನು ನೋಡಿ ಮರು ನೇಮಕ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಿಎಂ ಅಣತಿಯಂತೆ ನೌಕರರ ಮರುನೇಮಕ ಮಾಡಿಕೊಳ್ತಿದ್ದೇವೆ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಅವಕಾಶ ಕೊಡಲಾಗಿದೆ. ಮತ್ತೆ ಆ ರೀತಿಯ ತಪ್ಪು ಮಾಡಲು ಹೋಗಬೇಡಿ. ಮತ್ತೆ ಮುಷ್ಕರ ಅಂದ್ರೆ ನಾವ್ಯಾರೂ ಜೊತೆಯಲ್ಲಿ ಇರೋದಿಲ್ಲ. ಮುಂದಿನ ತಿಂಗಳಿಂದ ಸರಿಯಾಗಿ ಸಂಬಳ ನೀಡುತ್ತೇವೆ ಎಂದು ವಿಶ್ವಾಸ ನೀಡಿದರು.
ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ಸಾಕಷ್ಟು ಬಾರಿ ಈ ಬಗ್ಗೆ ನಾನು ಎಂಡಿಗಳನ್ನು ಕರೆದು ಮಾತಾಡಿದ್ದೆ. ಮುಷ್ಕರ ಪ್ರಾರಂಭ ಆಗೋದು ಸುಲಭ, ಆದರೆ ಪ್ರಾರಂಭದ ನಂತರ ಅದನ್ನು ನಿಲ್ಲಿಸಲು ಆಗಲ್ಲ ಎಂದರು.